SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಬೈಪಾಸ್‌ನಲ್ಲೇ ಬಸ್‌ಗಳ ಓಟ: ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪರದಾಟ

ಬೈಪಾಸ್‌ನಲ್ಲೇ ಬಸ್‌ಗಳ ಓಟ: ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪರದಾಟ

0
2

ಬಾಗಲಕೋಟೆ(ಕುಳಗೇರಿ ಕ್ರಾಸ್): ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಚರಿಸುವ ಬಸ್‌ಗಳು ಗೋವನಕೊಪ್ಪ ಗ್ರಾಮದ ಬಸ್ ನಿಲ್ದಾಣಕ್ಕೆ ತೆರಳದೆ ಬೈಪಾಸ್ ಮೂಲಕ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಶುಕ್ರವಾರ ಸಂಜೆ ಶಾಲೆ ಮುಗಿಸಿ ಮನೆಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಗೋವನಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾದರೂ ಬಸ್‌ಗಳು ಬಾರದ ಹಿನ್ನೆಲೆಯಲ್ಲಿ ಪರದಾಡಿದರು. ಸಂಜೆ 6ರಿಂದ 7 ಗಂಟೆಯಾದರೂ ಬಸ್‌ಗಳ ಸುಳಿವಿಲ್ಲದ ಕಾರಣ ಕೆಲ ವಿದ್ಯಾರ್ಥಿಗಳು ಪೋಷಕರಿಗೆ ಕರೆ ಮಾಡಿ ಮನೆಗೆ ತೆರಳಿದರೆ, ಇನ್ನು ಕೆಲವರು ಖಾಸಗಿ ವಾಹನ ಹಾಗೂ ಆಟೋಗಳ ಮೂಲಕ ಪ್ರಯಾಣಿಸಿದರು.

ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸಂಚರಿಸುವ ಎಲ್ಲ ಬಸ್‌ಗಳು ಗೋವನಕೊಪ್ಪ ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ಬಂದು ಹೋಗಬೇಕು ಎಂಬ ಆದೇಶವಿದ್ದರೂ ಚಾಲಕರು ಬೈಪಾಸ್ ಮೂಲಕ ಸಂಚರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬಸ್‌ಗಾಗಿ ಬೈಪಾಸ್‌ನಲ್ಲಿ ನಿಂತು ಕೈ ತೋರಿಸಿದರೂ ಚಾಲಕರು ವಾಹನ ನಿಲ್ಲಿಸದೆ ವೇಗವಾಗಿ ಸಾಗುತ್ತಿದ್ದಾರೆ. ಕೆಲವು ಬಸ್‌ಗಳು ಪ್ರಯಾಣಿಕರ ಮೈಮೇಲೆ ಬಂದಂತೆ ಅತಿ ವೇಗದಲ್ಲಿ ಸಂಚರಿಸುತ್ತಿರುವ ದೃಶ್ಯಗಳನ್ನು ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಗ್ರಾಮಕ್ಕೆ ಬಸ್‌ಗಳು ಬಂದು ಹೋಗುವಂತೆ ಆದೇಶವಿದ್ದರೂ ಅದನ್ನು ಪಾಲಿಸದ ಚಾಲಕರ ವಿರುದ್ಧ ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸುರಕ್ಷತೆ ಮತ್ತು ಅನುಕೂಲಕ್ಕೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಗೋವನಕೊಪ್ಪ ಗ್ರಾಮದ ಮೂಲಕವೇ ಬಸ್‌ಗಳು ಸಂಚರಿಸುವಂತೆ ಹಲವು ಬಾರಿ ಸೂಚನೆ ನೀಡಲಾಗಿದೆ. ಅಲ್ಲದೆ, ಗ್ರಾಮಕ್ಕೆ ಭೇಟಿ ನೀಡಿ ಕೆಲವು ದಿನಗಳ ಕಾಲ ಸಾರಿಗೆ ನಿಯಂತ್ರಕರನ್ನು ನೇಮಿಸಿ ಬಸ್‌ಗಳ ಸಂಚಾರದ ಮಾಹಿತಿಯನ್ನೂ ಸಂಗ್ರಹಿಸಲಾಗಿತ್ತು. ಆದರೂ ಕೆಲವು ಬಸ್‌ಗಳು ಗ್ರಾಮದ ಮೂಲಕ ಸಂಚರಿಸದೆ ಬೈಪಾಸ್‌ನಲ್ಲಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು, ನಿಯಮ ಉಲ್ಲಂಘಿಸುವ ಬಸ್ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಾದಾಮಿ ಡಿಪೋ ಮ್ಯಾನೇಜರ್ ಎಸ್.ಆರ್. ಮಂಕಣಿ ತಿಳಿಸಿದ್ದಾರೆ.