SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೀರೇಶ್ವರನ ರಥೋತ್ಸವ: ಭಂಡಾರದಲ್ಲಿ ಮಿಂದೆದ್ದ ಭಕ್ತಸಾಗರ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೀರೇಶ್ವರನ ರಥೋತ್ಸವ: ಭಂಡಾರದಲ್ಲಿ ಮಿಂದೆದ್ದ ಭಕ್ತಸಾಗರ

0
36

ಬಾಗಲಕೋಟೆ: ಕುಳಗೇರಿ ಕ್ರಾಸ್‌ನಲ್ಲಿ ಭಂಡಾರಮಯ ಬೀರೇಶ್ವರನ 68ನೇ ರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮ ಹಾಗೂ ಭಕ್ತಿಭಾವದಿಂದ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ವೇಳೆ ಮೊಳಗಿದ ‘ಚಾಂಗಭಲೆರೆ’ ಎಂಬ ಭಕ್ತಿಯ ಉದ್ಘೋಷ ಮುಗಿಲು ಮುಟ್ಟಿತು. ಭಕ್ತರು ಚೀಲಗಟ್ಟಲೆ ಭಂಡಾರವನ್ನು ಎರಚಿ ಸಂಭ್ರಮಿಸಿದರು. ಭಂಡಾರದಲ್ಲಿ ಮಿಂದೆದ್ದ ಭಕ್ತರು ಭಕ್ತಿಪೂರ್ವಕವಾಗಿ ಬೀರೇಶ್ವರನ ರಥವನ್ನು ಎಳೆದು, ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದರು.

ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಜಾತ್ರೆಗೆ ಮೆರುಗು ತಂದರು. ಯುವಕರು, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಎನ್ನದೆ ಎಲ್ಲ ವಯೋಮಾನದ ಭಕ್ತರೂ ಭಂಡಾರ ಎರಚುವ ಸಂಪ್ರದಾಯದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಗ್ರಾಮದ ಪ್ರತಿಯೊಂದು ಮನೆಯಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು.

ಜಾತ್ರೆಗೆ ಆಗಮಿಸಿದ್ದ ಬಂಧು-ಬಳಗ ಹಾಗೂ ಸ್ನೇಹಿತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಸಾಂಪ್ರದಾಯಿಕ ರಸಬಾಳೆ ಊಟದ ಸವಿಯನ್ನು ಸವಿದರು. ಇದರಿಂದ ಜಾತ್ರೆಯ ಸಂಭ್ರಮ ಮತ್ತಷ್ಟು ಹೆಚ್ಚಾಯಿತು.

ರಥೋತ್ಸವದ ಅಂಗವಾಗಿ ಬೀರೇಶ್ವರ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಭಕ್ತರು ಹಣ್ಣು-ಕಾಯಿ ಸಮರ್ಪಿಸಿ ದೇವರ ದರ್ಶನ ಪಡೆದು ತಮ್ಮ ಹರಕೆ ತೀರಿಸಿಕೊಂಡರು.

ಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ರಥೋತ್ಸವದಲ್ಲಿ ಪಾಲ್ಗೊಂಡು ಬೀರೇಶ್ವರನ ದರ್ಶನ ಪಡೆದರು. ಬಳಿಕ ಸಾಂಪ್ರದಾಯಿಕವಾಗಿ ಡೊಳ್ಳು ಬಾರಿಸಿ, ಭಂಡಾರ ಎರಚುವ ಮೂಲಕ ಭಕ್ತರೊಂದಿಗೆ ಸಂಭ್ರಮದಲ್ಲಿ ಭಾಗಿಯಾದರು.