ಬೆಂಗಳೂರು: ರೊಮ್ಯಾಂಟಿಕ್ ಕಥಾಹಂದರದ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡಿರುವ ನಿರ್ದೇಶಕ ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ ಚಿತ್ರದಿಂದ ಹೊಸ ಅಪ್ಡೇಟ್ ಹೊರಬಿದ್ದಿದೆ. ಚಿತ್ರದ ಮೊದಲ ರೊಮ್ಯಾಂಟಿಕ್ ಹಾಡು ‘ಮಾತು ನೀನೆ’ ನವೆಂಬರ್ 11ರಂದು ಶ್ರೋತೃಗಳ ಮುನ್ನೆಲೆಗೆ ಬರಲಿದೆ. ಈ ಹಾಡನ್ನು ಆಸ್ಕರ್ ವಿಜೇತ, ಗ್ಲೋಬಲ್ ಮ್ಯೂಸಿಕ್ ಐಕಾನ್ ಎ.ಆರ್. ರೆಹಮಾನ್ ಬಿಡುಗಡೆ ಮಾಡುತ್ತಿರುವುದು ಚಿತ್ರತಂಡಕ್ಕೆ ಹೆಚ್ಚಿನ ಉತ್ಸಾಹ ತಂದಿದೆ.
ಸುಂದರವಾದ ಗಿರಿಧಾಮ ಹಾಗೂ ಪ್ರಕೃತಿಯ ವೈಭವದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಮೆಲೋಡಿ ಗೀತೆಗೆ ಯುವ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಸ್ವರಸಂಯೋಜನೆ ಮಾಡಿದ್ದಾರೆ. ನಾಗಾರ್ಜುನ್ ಶರ್ಮಾ ಬರೆದಿರುವ ಈ ಭಾವಪೂರ್ಣ ಸಾಲುಗಳಿಗೆ ಜಸ್ಕಿರಣ್ ಸಿಂಗ್ ಅವರ ಕಂಠಸಿರಿ ಸಾಥ್ ನೀಡಿದ್ದು, ಯೂತ್ಸ್ಗೆ ತಕ್ಷಣವೇ ಇಷ್ಟವಾಗುವ ಲಕ್ಷಣಗಳನ್ನು ಹೊಂದಿದೆ.
ಚಿತ್ರದ ನಾಯಕ ಸುಮುಖ್ ಹಾಗೂ ನಾಯಕಿ ಇಶಾ ಲಂಕೇಶ್ ಅವರ ಪ್ರಣಯ ಪಯಣವನ್ನು ಛಾಯಾಗ್ರಾಹಕ ಅಭಿಲಾಷ್ ಕಳತ್ತಿ ಕಣ್ಣಿಗೆ ಕಟ್ಟುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರ ಗಮನ ಸೆಳೆಯುವಂತಿದೆ. ‘ನಿಧಿ ಫಿಲ್ಮ್ಸ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ರಂಗನಾಥ್ ಕೆಂಪನಹಳ್ಳಿ (ಆರ್.ಕೆ) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದು, ಕೆ.ಎಂ. ಪ್ರಕಾಶ್ ಎಡಿಟಿಂಗ್ ಹೊಣೆ ಹೊತ್ತಿದ್ದಾರೆ. ಮೊದಲ ಹಾಡಿನ ಬಿಡುಗಡೆಯ ಸುದ್ದಿಯೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಹೆಚ್ಚಿಸಿದೆ.





















