SK Home Ad
Home ಸುದ್ದಿ ದೇಶ ICSE, ISC ಬೋರ್ಡ್ ಪರೀಕ್ಷೆ 2027ರ ವೇಳಾಪಟ್ಟಿ ಪ್ರಕಟ

ICSE, ISC ಬೋರ್ಡ್ ಪರೀಕ್ಷೆ 2027ರ ವೇಳಾಪಟ್ಟಿ ಪ್ರಕಟ

0
33
ಸಾಂದರ್ಭಿಕ ಚಿತ್ರ

ಫೆಬ್ರವರಿಯಿಂದ ಪರೀಕ್ಷೆ ಆರಂಭ, 3.79 ಲಕ್ಷ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ!

ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) 2027ನೇ ಸಾಲಿನ 10ನೇ ತರಗತಿಯ ICSE ಹಾಗೂ 12ನೇ ತರಗತಿಯ ISC ಬೋರ್ಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, 12ನೇ ತರಗತಿಯ ISC ಪರೀಕ್ಷೆಗಳು ಫೆಬ್ರವರಿ 9ರಿಂದ ಏಪ್ರಿಲ್ 8ರವರೆಗೆ ನಡೆಯಲಿದ್ದು, 10ನೇ ತರಗತಿಯ ICSE ಪರೀಕ್ಷೆಗಳು ಫೆಬ್ರವರಿ 15ರಿಂದ ಮಾರ್ಚ್ 31ರವರೆಗೆ ನಡೆಯಲಿವೆ. ವಿಷಯವಾರು ಪರೀಕ್ಷಾ ದಿನಾಂಕಗಳ ಸಂಪೂರ್ಣ ಮಾಹಿತಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

2027ರ ಪರೀಕ್ಷೆಗಳಿಗೆ ICSE ವಿಭಾಗದಲ್ಲಿ 3,106 ಶಾಲೆಗಳ ಸುಮಾರು 2.70 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ದೇಶ ಮತ್ತು ವಿದೇಶಗಳ 2,835 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ISC ವಿಭಾಗದಲ್ಲಿ 1,651 ಶಾಲೆಗಳ 1.10 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 1,477 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ICSEಯಲ್ಲಿ 76 ವಿಷಯಗಳು ಹಾಗೂ ISCಯಲ್ಲಿ 60 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.

ICSE 10ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15ರಂದು ಇಂಗ್ಲಿಷ್ ಭಾಷೆ ವಿಷಯದೊಂದಿಗೆ ಆರಂಭವಾಗಲಿವೆ. ಫೆಬ್ರವರಿ 22ರಂದು ಗಣಿತ, ಫೆಬ್ರವರಿ 26ರಂದು ಇತಿಹಾಸ ಮತ್ತು ಪೌರಶಾಸ್ತ್ರ, ಮಾರ್ಚ್ 1ರಂದು ಭೂಗೋಳಶಾಸ್ತ್ರ, ಮಾರ್ಚ್ 4ರಂದು ಹಿಂದಿ, ಮಾರ್ಚ್ 8ರಂದು ಭೌತಶಾಸ್ತ್ರ, ಮಾರ್ಚ್ 12ರಂದು ರಸಾಯನಶಾಸ್ತ್ರ ಹಾಗೂ ಮಾರ್ಚ್ 15ರಂದು ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 31ರಂದು ಅರ್ಥಶಾಸ್ತ್ರ ಪರೀಕ್ಷೆಯೊಂದಿಗೆ 10ನೇ ತರಗತಿಯ ಪರೀಕ್ಷೆಗಳು ಮುಕ್ತಾಯಗೊಳ್ಳಲಿವೆ.

ಇನ್ನು ISC 12ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 9ರಂದು ಪರಿಸರ ವಿಜ್ಞಾನ ಮತ್ತು ಪಾಶ್ಚಾತ್ಯ ಸಂಗೀತ ವಿಷಯಗಳೊಂದಿಗೆ ಆರಂಭವಾಗಲಿವೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ವಾಣಿಜ್ಯಶಾಸ್ತ್ರ ಸೇರಿದಂತೆ ವಿವಿಧ ವಿಷಯಗಳ ಪರೀಕ್ಷೆಗಳು ನಿಗದಿತ ದಿನಾಂಕಗಳಲ್ಲಿ ನಡೆಯಲಿದ್ದು, ಏಪ್ರಿಲ್ 8ರಂದು ಕಾನೂನು ಅಧ್ಯಯನ ವಿಷಯದ ಪರೀಕ್ಷೆಯೊಂದಿಗೆ ಮುಕ್ತಾಯಗೊಳ್ಳಲಿವೆ.

ಈ ಬಾರಿಯ ICSE ಪರೀಕ್ಷೆಯಲ್ಲಿ ಸಮಯಕ್ಕೆ ಸಂಬಂಧಿಸಿದ ಮಹತ್ವದ ಬದಲಾವಣೆಯನ್ನೂ ಮಾಡಲಾಗಿದೆ. ಸಾಮಾನ್ಯ ಲಿಖಿತ ಪರೀಕ್ಷೆಗಳಿಗೆ ಬೆಳಗ್ಗೆ 10 ಗಂಟೆಯಿಂದ 15 ನಿಮಿಷಗಳ ಕಾಲ ಪ್ರಶ್ನೆಪತ್ರಿಕೆ ಓದಲು ಅವಕಾಶ ನೀಡಲಾಗುತ್ತದೆ. ಬಳಿಕ ಬೆಳಗ್ಗೆ 10:15ಕ್ಕೆ ಉತ್ತರ ಬರೆಯುವ ಸಮಯ ಆರಂಭವಾಗಲಿದೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಮೊದಲೇ ಓದಿ ಉತ್ತರಗಳನ್ನು ಯೋಜಿಸಿಕೊಳ್ಳಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.

ವಿದ್ಯಾರ್ಥಿಗಳು ಪರೀಕ್ಷಾ ವೇಳಾಪಟ್ಟಿಯನ್ನು ಪರಿಶೀಲಿಸಲು cisce.org ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ICSE ಅಥವಾ ISC 2027ರ ಪರೀಕ್ಷಾ ದಿನಾಂಕ ಪಟ್ಟಿಯ PDF ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರೀಕ್ಷೆಯ ದಿನಾಂಕ, ಸಮಯ ಮತ್ತು ವಿಷಯದ ವಿವರಗಳನ್ನು ಮುಂಚಿತವಾಗಿ ಪರಿಶೀಲಿಸಿ ಅಧ್ಯಯನದ ವೇಳಾಪಟ್ಟಿ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.