BBK13: ‘ಬಿಗ್ ಬಾಸ್’ ಸೀಸನ್ 13ರಲ್ಲಿ ಪ್ರತಿ ವಾರವೂ ಹೊಸ ಟ್ವಿಸ್ಟ್‌ಗಳು ಹಾಗೂ ಅನಿರೀಕ್ಷಿತ ಬೆಳವಣಿಗೆಗಳು ವೀಕ್ಷಕರಿಗೆ ಧಮಾಕಾ ನೀಡುತ್ತಿವೆ. ಈ ವಾರದ ಎಲಿಮಿನೇಷನ್ ಕೌತುಕದ ನಡುವೆಯೇ ಬಿಗ್ ಬಾಸ್ ತಂಡ ದೊಡ್ಮನೆಯ ವೀಕ್ಷಕರಿಗೆ ದೊಡ್ಡದೊಂದು ಸರ್ಪ್ರೈಸ್ ನೀಡಿದ್ದು, ‘ಮಾಡರ್ನ್ ಮಹಾಕವಿ’ ಮಂಜ ಮತ್ತೆ ಮನೆಗೆ ಮರಳಿದ್ದಾರೆ.
ಆರಂಭದಲ್ಲಿ ‘ಅಗ್ನಿಪರೀಕ್ಷೆ’ ಹಂತವನ್ನು ದಾಟಿ ಮನೆ ಪ್ರವೇಶಿಸಿದ್ದ ಮಂಜ, ತಮ್ಮ ವಿಶಿಷ್ಟ ಶೈಲಿ ಹಾಗೂ ಚುರುಕಿನ ಆಟದಿಂದ ಗಮನ ಸೆಳೆದಿದ್ದರು. ಆದರೆ ಆಟದ ಭರದಲ್ಲಿ ಶಿಸ್ತು ಮತ್ತು ನಿಯಮಾವಳಿಗಳನ್ನು ಮೀರಿ, ಸಹಸ್ಪರ್ಧಿ ಯಶಸ್‌ಗೆ ವೈಯಕ್ತಿಕವಾಗಿ ನಿಂದಿಸಿ ಅಸಭ್ಯ ಪದ ಬಳಸಿದ್ದಕ್ಕಾಗಿ ಅವರಿಗೆ ‘ರೆಡ್ ಕಾರ್ಡ್’ ನೀಡಿ ಶೋನಿಂದ ಮಧ್ಯದಲ್ಲೇ ಹೊರಹಾಕಲಾಗಿತ್ತು.
ಇದೀಗ ದೀಪಾವಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಮಂಜ ಅವರನ್ನು ಮತ್ತೆ ಅತಿಥಿಯಾಗಿ ಮನೆಗೆ ಕರೆತರಲಾಗಿದೆ. “ಮಾಡಿದ ತಪ್ಪಿಗೆ ನನ್ನ ಒಪ್ಪಿಗೆ ಇದೆ. ಈ ಬಾರಿ ನನ್ನ ಕಣ್ಣು ಬಿಗ್ ಬಾಸ್ ಸೀಸನ್ 13ರ ಕಪ್ ಮೇಲಿದೆ” ಎಂದು ವೇದಿಕೆ ಮೇಲೆ ನಿರೂಪಕ ಸುದೀಪ್ ಎದುರು ಹೇಳಿರುವ ಮಂಜ, ಮನೆಯವರಿಗೆ ಪಟಾಕಿ ಹಚ್ಚುವುದಾಗಿ ಖಡಕ್ ಸೂಚನೆ ನೀಡಿದ್ದಾರೆ.
ಈ ಹಿಂದೆ ಮಂಜ ಎಕ್ಸಿಟ್ ಆದಾಗ, ಶೋ ಬಿಡುವ ನಿರ್ಧಾರ ಬಿಗ್ ಬಾಸ್ ತಂಡದ್ದೇ ಹೊರತು ತನ್ನದಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದರು. ಇದೀಗ ಹಬ್ಬದ ಸವಿಯ ಜೊತೆಗೆ ಮನೆಗೆ ‘ಖಾರ’ ತರುವ ಉದ್ದೇಶದಿಂದ ಮಂಜನಿಗೆ ಮರುಪ್ರವೇಶ ನೀಡಲಾಗಿದೆ. ಭಾನುವಾರದ ಎಪಿಸೋಡ್‌ನಿಂದ ಮನೆಗೆ ಎಂಟ್ರಿ ಕೊಡುತ್ತಿರುವ ಮಂಜ, ಹಳೆಯ ಕಹಿ ನೆನಪು ಮರೆತು ಸ್ಪರ್ಧಿಗಳೊಂದಿಗೆ ಹೇಗೆ ಬೆರೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.






















