ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದ ರೂ.4 ಸಾವಿರ ಕೋಟಿ ಬಜೆಟ್ ಹಾಗೂ ಭರ್ಜರಿ ವಿಎಫ್‌ಎಕ್ಸ್ (VFX) ಬಗ್ಗೆ ಎಲ್ಲೆಡೆ ಭಾರೀ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಬಾಲಿವುಡ್ ‘ಭಾಯಿಜಾನ್’ ಸಲ್ಮಾನ್ ಖಾನ್ ವಿಭಿನ್ನ ಹಾಗೂ ಮಹತ್ವದ ಅಭಿಪ್ರಾಯ ಹೊರಹಾಕಿದ್ದಾರೆ.
ಸಿನಿಮಾ ಎಷ್ಟು ಕೋಟಿ ಖರ್ಚು ಮಾಡಿದೆ, ಗ್ರಾಫಿಕ್ಸ್ ಹೇಗಿದೆ ಅನ್ನೋದಕ್ಕಿಂತ ಹೆಚ್ಚಾಗಿ, ಕಥೆ ಮತ್ತು ಅದರಲ್ಲಿನ ರಾಮ-ಸೀತೆ-ರಾವಣನ ಪಾತ್ರಗಳು ಹಾಗೂ ಅವು ಸಾರುವ ಮೌಲ್ಯಗಳ ಬಗ್ಗೆ ಚರ್ಚೆ ನಡೆಯಬೇಕು ಎಂದು ಸಲ್ಮಾನ್ ಸ್ಪಷ್ಟವಾಗಿ ಹೇಳಿದ್ದಾರೆ.
ತಮ್ಮ ಮುಂಬರುವ ಚಿತ್ರ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್ ಖಾನ್, “ರಾಮಾಯಣದ ಚರ್ಚೆ ರಾಮಾಯಣದ ಮೇಲೆಯೇ ಆಗಬೇಕು ಹೊರತು ವಿಎಫ್‌ಎಕ್ಸ್ ಅಥವಾ 4 ಸಾವಿರ ಕೋಟಿ ಬಜೆಟ್ ಬಗ್ಗೆಯಲ್ಲ.
ರೂಪಾಯಿ 4 ಸಾವಿರ ಕೋಟಿ ವೆಚ್ಚ, ವಿಎಫ್‌ಎಕ್ಸ್… ವಿಎಫ್‌ಎಕ್ಸ್ ಅಂತಲೇ ಬಿಲ್ಡಪ್ ಕೊಡುವುದು ಸರಿಯಲ್ಲ ಎಂದೆನಿಸುತ್ತದೆ. ರಾಮ, ಸೀತೆ ಹಾಗೂ ರಾವಣನ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಬೇಕು” ಎಂದು ಕಿವಿಮಾತು ಹೇಳಿದ್ದಾರೆ.
ಇದೇ ವೇಳೆ ಶ್ರೀರಾಮನ ಸದ್ಗುಣಗಳನ್ನು ತಮ್ಮ ‘ಮಾತೃಭೂಮಿ’ ಚಿತ್ರದ ನಾಯಕನ ಪಾತ್ರಕ್ಕೆ ಹೋಲಿಸಿದ ಸಲ್ಮಾನ್, “ರಾಮ ಕೇವಲ ಒಬ್ಬ ಮಹಾನ್ ಯೋಧನಷ್ಟೇ ಅಲ್ಲ; ಆತ ಆದರ್ಶ ಮಗ, ಆದರ್ಶ ಪತಿ ಮತ್ತು ಆದರ್ಶ ತಂದೆ. ಈ ಎಲ್ಲಾ ಶ್ರೇಷ್ಠ ಗುಣಗಳನ್ನು ‘ಮಾತೃಭೂಮಿ’ ಚಿತ್ರದ ನಾಯಕನ ಪಾತ್ರವೂ ಒಳಗೊಂಡಿದೆ” ಎಂದು ವಿವರಿಸಿದ್ದಾರೆ.
ತಾಂತ್ರಿಕ ಆಡಂಬರಗಳ ನಡುವೆ ಮಹಾಕಾವ್ಯದ ಮೂಲ ಸತ್ವ ಕಳೆದುಹೋಗಬಾರದು ಎಂಬ ಸಲ್ಮಾನ್ ಖಾನ್ ಅವರ ಈ ನೇರ ನುಡಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.






















