ಚಳ್ಳಕೆರೆ: ಪಿಎಂಶ್ರೀ ಸರ್ಕಾರಿ ಹಿರಿಯ ಬಾಲಕಿಯರ ಶಾಲೆಯಲ್ಲಿ ಇನ್ನರ್ವೀಲ್ ಕ್ಲಬ್ ವತಿಯಿಂದ ವಿದ್ಯಾರ್ಥಿನಿಯರಿಗೆ ಸ್ಟೀಲ್ ಬೌಲ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇನ್ನರ್ವೀಲ್ ಅಧ್ಯಕ್ಷೆ ಅಪರ್ಣಾ ದೇವೇಂದ್ರಪ್ಪ ಅವರು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಆರೋಗ್ಯ ಮತ್ತು ಪೌಷ್ಟಿಕ ಆಹಾರವೂ ಅತ್ಯಂತ ಮುಖ್ಯವಾಗಿದೆ. ಮಕ್ಕಳಿಗೆ ಸಂಜೆ ಸಮಯದಲ್ಲಿ ಪೌಷ್ಟಿಕ ಆಹಾರ ವಿತರಿಸುವಾಗ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಮ್ಮ ಕ್ಲಬ್ ವತಿಯಿಂದ ಸ್ಟೀಲ್ ಬೌಲ್ಗಳನ್ನು ವಿತರಿಸಲಾಗುತ್ತಿದೆ. ಇವು ದೀರ್ಘಕಾಲ ಬಾಳಿಕೆ ಬರುವುದರ ಜೊತೆಗೆ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಪರಿಸರ ಸಂರಕ್ಷಣೆಗೂ ಸಹಕಾರಿಯಾಗಲಿವೆ. ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಪೂರಕವಾದ ಇಂತಹ ಸೇವಾ ಕಾರ್ಯಗಳನ್ನು ಸಂಸ್ಥೆ ಮುಂದುವರಿಸಲಿದೆ ಎಂದರು.
ನಂತರ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಿ.ಟಿ. ಮಂಜುನಾಥಸ್ವಾಮಿ ಅವರು, 2026-27ನೇ ಸಾಲಿನಲ್ಲಿ ಈ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಸೇರಿದಂತೆ ಒಂದರಿಂದ ಏಳನೇ ತರಗತಿವರೆಗೆ ಒಟ್ಟು 571 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ಚಳ್ಳಕೆರೆ ತಾಲೂಕು ಒಳಪಟ್ಟಿರುವುದರಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಸಂಜೆ ವೇಳೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಕಡಲೆಕಾಳು, ಹೆಸರುಕಾಳು ಉಸ್ಲಿ ಹಾಗೂ ನೆಲಗಡಲೆ ಉಸ್ಲಿ ಸೇರಿದಂತೆ ಪೌಷ್ಟಿಕ ಆಹಾರವನ್ನು ಈ ಹಿಂದೆ ಪೇಪರ್ನಲ್ಲಿ ನೀಡಲಾಗುತ್ತಿತ್ತು. ಇದನ್ನು ಗಮನಿಸಿದ ಇನ್ನರ್ವೀಲ್ ಸಂಸ್ಥೆಯವರು ದೀರ್ಘಕಾಲ ಬಾಳಿಕೆ ಬರುವ ಸ್ಟೀಲ್ ಬೌಲ್ಗಳನ್ನು ವಿತರಿಸಿರುವುದು ಮಕ್ಕಳಿಗೆ ಅನುಕೂಲವಾಗುವುದರ ಜೊತೆಗೆ ಪರಿಸರ ಸ್ನೇಹಿ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಮಕ್ಕಳಿಗೆ ಬೌಲ್ ವಿತರಿಸುವುದರ ಜೊತೆಗೆ ನಗರದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಬಿಸಿಲಿನ ತಾಪಕ್ಕೆ ತತ್ತರಿಸುವ ಪ್ರಾಣಿ-ಪಕ್ಷಿಗಳಿಗೆ ನೀರು ಕುಡಿಯಲು ಅನುಕೂಲವಾಗುವಂತೆ ನೀರಿನ ಬೌಲ್ಗಳನ್ನು ಇಡುವ ಕಾರ್ಯವನ್ನು ಸಂಸ್ಥೆ ಕೈಗೊಂಡಿರುವುದು ಶ್ಲಾಘನೀಯ. ಇಂತಹ ಸಮಾಜಮುಖಿ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಇನ್ನರ್ವೀಲ್ ಅಧ್ಯಕ್ಷೆ ಅಪರ್ಣಾ ದೇವೇಂದ್ರಪ್ಪ, ಕೆ.ಸಿ. ರತ್ನಮ್ಮ, ಖಜಾಂಚಿ ಡಾ. ಕವಿತಾ, ಕಾರ್ಯದರ್ಶಿ ವಿದ್ಯಾ, ಸದಸ್ಯರಾದ ಮೀನಾ ವಿನಯ್ ಕುಮಾರ್, ನಳಿನಬಾಬು, ಮಂಜುಳಾ, ಯಮುನಾ, ಡಾ. ವೀರೇಶ್ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಹೇಮಂತ್ ರಾಜ್ ಸೇರಿದಂತೆ ಇತರರಿದ್ದರು.






















