ಹಾವೇರಿ: ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವಕ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಯುವತಿಯ ಕುಟುಂಬಸ್ಥರು ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ರಟ್ಟಿಹಳ್ಳಿ ಮೂಲದ ಪ್ರಮೋದ್ ಹಾಗೂ ಬತ್ತಿಕೊಪ್ಪ ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು. ಕೆಲ ದಿನಗಳ ಹಿಂದೆ ಇಬ್ಬರೂ ಮನೆ ಬಿಟ್ಟು ಮದುವೆಯಾಗಲು ತೆರಳಿದ್ದರು. ಈ ವಿಷಯ ತಿಳಿದ ಯುವತಿಯ ಕುಟುಂಬಸ್ಥರು ಆಕೆಯನ್ನು ಮನವೊಲಿಸಿ ವಾಪಸ್ ಮನೆಗೆ ಕರೆತಂದಿದ್ದರು.
ಆದರೆ, ಬಳಿಕ ಯುವತಿ ತನ್ನ ಪ್ರಿಯತಮ ಪ್ರಮೋದ್ಗೆ ಪತ್ರ ಬರೆದು ಮದುವೆಯಾಗುವಂತೆ ಸಂದೇಶ ಕಳುಹಿಸಿದ್ದಳು. ಇದರಿಂದ ಪ್ರಮೋದ್ ತನ್ನ ಸ್ನೇಹಿತರಾದ ಪ್ರಕಾಶ್ ಹಾಗೂ ಪರಶುರಾಮ ಅವರೊಂದಿಗೆ ಬತ್ತಿಕೊಪ್ಪ ಗ್ರಾಮಕ್ಕೆ ತೆರಳಿ ಯುವತಿಯನ್ನು ಕರೆದುಕೊಂಡು ಹೋಗಲು ಮುಂದಾಗಿದ್ದ.
ಈ ವೇಳೆ ಮೂವರನ್ನೂ ಯುವತಿಯ ಕುಟುಂಬಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯ ವೇಳೆ ಪೊಲೀಸರು ಸ್ಥಳಕ್ಕೆ ಬಂದಿದ್ದರೂ ಗ್ರಾಮದಲ್ಲಿ ಗುಂಪು ಸೇರಿದ್ದರಿಂದ ಪರಿಸ್ಥಿತಿ ನಿಯಂತ್ರಿಸುವಲ್ಲಿ ಅಸಹಾಯಕರಾಗಿದ್ದರು.
ಹಲ್ಲೆಗೊಳಗಾದ ಮೂವರು ಯುವಕರ ಕುಟುಂಬಸ್ಥರು ಇದೀಗ ಯುವತಿಯ ಕುಟುಂಬಸ್ಥರ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.






















