ಧಾರವಾಡ: ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಪಾಟೀಲ ಪುಟ್ಟಪ್ಪನವರು ಮತ್ತಿತರ ಕನ್ನಡ ಕಟ್ಟಿದ ಧಾರವಾಡದ ಧುರೀಣರ ಕೊಡುಗೆಯನ್ನು ಮರೆಯಬಾರದು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವಿದೆ. ಪಂಪನ ಕಾವ್ಯ, ವಚನಕಾರರ ವಚನಗಳು, ದಾಸರ ಪದಗಳು, ಸರ್ವಜ್ಞನ ನುಡಿಗಳು, ಕುವೆಂಪು ಅವರ ವಿಶ್ವಮಾನವ ಸಂದೇಶ, ಡಿ.ವಿ.ಜಿ. ಮತ್ತು ಇತರರ ಚಿಂತನೆಗಳು ನಮ್ಮ ಭಾಷೆಯ ವಿಶಾಲತೆಯನ್ನು ಸಾರುತ್ತವೆ ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡ ಜಿಲ್ಲಾಡಳಿತವು ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 71ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೇರವೇರಿಸಿ, ವಿವಿಧ ದಳಗಳಿಂದ ಗೌರವ ರಕ್ಷೆ ಸ್ವೀಕರಿಸಿ, ಜಿಲ್ಲೆಯ ಸಾರ್ವಜನಿಕರನ್ನು ಉದ್ದೇಶಿಸಿ, ಅವರು ಮಾತನಾಡಿದರು.
1956 ರಲ್ಲಿ ಏಕೀಕರಣಗೊಂಡ ನಮ್ಮ ಕರ್ನಾಟಕ ಇಂದಿಗೆ 71ನೇ ವರ್ಷಕ್ಕೆ ಕಾಲಿಡುತ್ತಿದೆ. ಧಾರವಾಡ ಜಿಲ್ಲೆಯವರಾದ ಸಂಗೀತ ದಿಗ್ಗಜರಾದ ಪಂಡಿತ್ ಭೀಮಸೇನ ಜೋಶಿ, ವರಕವಿ ದ.ರಾ. ಬೇಂದ್ರೆ, ಚನ್ನವೀರ ಕಣವಿ, ಮಲ್ಲಿಕಾರ್ಜುನ ಮನ್ಸೂರ್ ರವರಂತಹ ಮಹಾನ್ ಸಾಧಕರು ನಾಡಿನ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ್ದಾರೆ. ಕನ್ನಡವನ್ನು ನಾವು ಕೇವಲ ಆಡಳಿತದಲ್ಲಿ ಬಳಸುವುದಲ್ಲದೇ, ನಮ್ಮ ದಿನನಿತ್ಯದ ಬದುಕಿನಲ್ಲಿ, ಮನೆಗಳಲ್ಲಿ ಮತ್ತು ವ್ಯವಹಾರದಲ್ಲಿ ಹೆಚ್ಚು-ಹೆಚ್ಚಾಗಿ ಬಳಸಬೇಕು. ಕನ್ನಡ ಕೇವಲ ಮಾತನಾಡುವ ಭಾಷೆಯಲ್ಲ; ಅದು ನಮ್ಮ ಅಭಿಮಾನದ ಸಂಕೇತವಾಗಿದೆ ಎಂದು ಹೇಳಿದರು.
ಭಾರತ್ ಜೋಡೊ ಯುವ ಸಂಘ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವದಲ್ಲಿ ಭಾರತ್ ಜೋಡೊ ಯುವ ಸಂಘ ಮಿಷನ್ ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 249 ಯುವ ಸಂಘಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗಿದೆ. ರೈತ ಮಿತ್ರ, ನೇಗಿಲ ಯೋಗಿ, ತೇಗದ ಸಿರಿ, ಗ್ರಾಮ ಅನುಭವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಉದ್ಯೋಗ ನಿಧಿ ಹಾಗೂ ಯುವ ಉದ್ಯೋಗ ಸೇತು, ಭೂ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ನಾಗರಿಕರ ಕುಂದುಕೊರತೆಗಳನ್ನು ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ನೀಡಲು ಸರ್ಕಾರವು ಹೊಸದಾಗಿ ‘ಪ್ರಜಾ ಸೇವೆ ಇಲಾಖೆಯನ್ನು’ ಆರಂಭಿಸಿದೆ. ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಹಾಗೂ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕ ಹೂಡಿಕೆ ಮತ್ತು ಅನಿವಾಸಿ ಭಾರತೀಯರ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಖಾಲಿ ಇರುವ 72,000 ಸರ್ಕಾರಿ ಹುದ್ದೆಗಳ ಭರ್ತಿ ಮಾಡಲು ಕ್ರಮ ವಹಿಸಲಾಗಿದೆ. ಕರ್ನಾಟಕವನ್ನು ‘ನಶೆ ಮುಕ್ತವನ್ನಾಗಿ’ ಮಾಡಲಾಗುವುದು. ವಸತಿ ರಹಿತರಿಗೆ “ಉಚಿತ ಮನೆ ಮತ್ತು ನಿವೇಶನ ಹಂಚಿಕೆ” ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು. ಯುವ ಜನತೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಗ್ಯಾರಂಟಿಗಳಿಂದ ನೆರವು: ಧಾರವಾಡ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 45 ಕೋಟಿ ಮಹಿಳಾ ಪ್ರಯಾಣಿಕರಿಗೆ ರೂ.995 ಕೋಟಿಗಳ ಉಚಿತ ಸೇವೆ ಒದಗಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 4,04,827 ಮಹಿಳೆಯರಿಗೆ ರೂ.2,345 ಕೋಟಿ ನೆರವು ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿಯಲ್ಲಿ 5,21,046 ಕುಟುಂಬಗಳಿಗೆ ರೂ.846 ಕೋಟಿ ಸಹಾಯಧನ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 3,75,996 ಬಿಪಿಎಲ್ ಕುಟುಂಬಗಳಿಗೆ ಉಚಿತ ಪಡಿತರ ಒದಗಿಸಲಾಗಿದೆ. ಯುವನಿಧಿ ಯೋಜನೆಯಡಿಯಲ್ಲಿ ಯುವಜನರಿಗೆ 12,340 ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಮಾಡಲಾಗಿದೆ.
2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 39,134 ರೈತರಿಗೆ ರೂ. 43.98 ಕೋಟಿ ಬೆಳೆ ವಿಮೆ ಪರಿಹಾರ ಜಮೆ ಮಾಡಲಾಗಿದೆ. 2025-26 ನೇ ಸಾಲಿನ ಬೆಳೆ ಹಾನಿ ಪರಿಹಾರವಾಗಿ 66,834 ರೈತರಿಗೆ ರೂ, 128.73 ಕೋಟಿ ಮೊತ್ತವನ್ನು ಪಾವತಿಸಲಾಗಿದೆ. ಬೇಸಿಗೆಯಲ್ಲಿ ಅಕಾಲಿಕ ಆಣೆಕಲ್ಲು ಮಳೆ ಹಾನಿ ಪರಿಹಾರವಾಗಿ 1,221 ರೈತರಿಗೆ ರೂ, 1.72 ಕೋಟಿ ಮೊತ್ತವನ್ನು ಪಾವತಿಸಲಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವಸತಿ ನಿಲಯದ ವಿದ್ಯಾರ್ಥಿನಿಯರ ಕಲಾತಂಡ, ಶಾಲಾ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ವಿದ್ಯಾರ್ಥಿಗಳು ಸಾಂಸ್ಕಂತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಚಿವರ ವಾಹನವನ್ನು ಸ್ವತಃ ಚಲಾಯಿಸಿದ ಜಿಲ್ಲಾಧಿಕಾರಿ: ಕಾರ್ಯಕ್ರಮದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ವಾಹನವನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸ್ವತಃ ತಾವೇ ಚಲಾಯಿಸಿದರು.





















