ಎಸ್ಐಆರ್ ವಿರುದ್ಧ ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ: ನವೆಂಬರ್ನಲ್ಲಿ ಬಿಜೆಪಿಯಿಂದ ‘ಅರಾಜಕತೆ ಹಟಾವೋ’ ಅಭಿಯಾನ
ಚಿಕ್ಕಮಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯ ಕುರಿತು ಕಾಂಗ್ರೆಸ್ ಜನರಲ್ಲಿ ಗೊಂದಲ ಮೂಡಿಸುವ ಹಾಗೂ ಸುಳ್ಳು ಸುದ್ದಿಗಳ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಈ ಧೋರಣೆಯನ್ನು ಖಂಡಿಸಿ ನವೆಂಬರ್ 1ರಿಂದ 30ರವರೆಗೆ ರಾಜ್ಯಾದ್ಯಂತ ‘ಅರಾಜಕತೆ ಹಟಾವೋ’ ಅಭಿಯಾನ ಹಮ್ಮಿಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯಾನಂತರ ದೇಶದಲ್ಲಿ 12 ಬಾರಿ ಎಸ್ಐಆರ್ ಪ್ರಕ್ರಿಯೆ ನಡೆದಿದ್ದು, ಈ ಅವಧಿಯಲ್ಲಿ ಹಲವು ಬಾರಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಮತದಾರರ ಪಟ್ಟಿಯ ಪರಿಷ್ಕರಣೆ ಚುನಾವಣಾ ಆಯೋಗದ ನಿರಂತರ ಹಾಗೂ ಸಾಂವಿಧಾನಿಕ ಪ್ರಕ್ರಿಯೆಯಾಗಿದೆ. ಆದರೂ ಕಾಂಗ್ರೆಸ್, ಎಸ್ಐಆರ್ ಪ್ರಕ್ರಿಯೆಯನ್ನು ರಾಜಕೀಯ ವಿವಾದವನ್ನಾಗಿ ಮಾಡುತ್ತಿದೆ ಎಂದು ಟೀಕಿಸಿದರು.
ಎಸ್ಐಆರ್ ಪ್ರಕ್ರಿಯೆ ಆರಂಭಕ್ಕೂ ಮುನ್ನ ಚುನಾವಣಾಧಿಕಾರಿಗಳು ರಾಜ್ಯಮಟ್ಟದಿಂದ ತಾಲೂಕು ಮಟ್ಟದವರೆಗೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ. ಆಗ ಆಕ್ಷೇಪ ವ್ಯಕ್ತಪಡಿಸದ ಕಾಂಗ್ರೆಸ್, ಇದೀಗ ಜನರಲ್ಲಿ ಗೊಂದಲ ಮೂಡಿಸುವ ರೀತಿಯಲ್ಲಿ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ದಾಖಲಾಗಿರುವುದು, ಮೃತಪಟ್ಟವರ ಹೆಸರುಗಳು ಮುಂದುವರಿದಿರುವುದು, ಸ್ಥಳಾಂತರಗೊಂಡ ಮತದಾರರ ವಿವರಗಳು ಹಾಗೂ ಅಗತ್ಯ ದಾಖಲೆಗಳಿಲ್ಲದೆ ಹೆಸರು ಸೇರ್ಪಡೆಯಾಗಿರುವಂತಹ ಅಂಶಗಳನ್ನು ಪರಿಶೀಲಿಸಲು ಪರಿಷ್ಕರಣೆ ಸಹಕಾರಿಯಾಗಲಿದೆ. ಇಂತಹ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳು ಸ್ವಾಗತಿಸಬೇಕೇ ಹೊರತು, ವಿರೋಧಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸಬಾರದು ಎಂದರು.
ಕಾಂಗ್ರೆಸ್ನ ರಾಜಕೀಯ ನಿಲುವುಗಳನ್ನು ಟೀಕಿಸಿದ ಸುನಿಲ್ ಕುಮಾರ್, ಚುನಾವಣೆಗಳಲ್ಲಿ ಸೋಲನುಭವಿಸಿದಾಗಲೆಲ್ಲ ಕಾಂಗ್ರೆಸ್ ಚುನಾವಣಾ ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿದೆ ಎಂದು ಆರೋಪಿಸಿದರು. ಈ ಹಿಂದೆ ಇವಿಎಂ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್, ನಂತರ ಮತದಾರರ ಪಟ್ಟಿಯ ಬಗ್ಗೆ ಪ್ರಶ್ನೆ ಎತ್ತಿತ್ತು. ಇದೀಗ ಎಸ್ಐಆರ್ ಪ್ರಕ್ರಿಯೆಯನ್ನು ಗುರಿಯಾಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮತದಾರರನ್ನೇ ದೂಷಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ವ್ಯಂಗ್ಯವಾಡಿದರು
- ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಬೆಂಗಳೂರಿನ ಐವರ ದುರಂತ ಅಂತ್ಯ
- India vs New Zealand: 260 ರನ್ಗಳ ಬೆನ್ನಟ್ಟಲು ಹೋಗಿ ಪೆವಿಲಿಯನ್ ಪರೇಡ್: ನಾಯಕ ಅಯ್ಯರ್ ಬೌಲ್ಡ್, ಆಕ್ಲೆಂಡ್ನಲ್ಲಿ ಭಾರತಕ್ಕೆ ತೀವ್ರ ಸಂಕಷ್ಟ
- ಫಿಲಿಪ್ಸ್ ಬಿರುಗಾಳಿಗೆ ಪುಡಿಪುಡಿಯಾದ ಬೌಲರ್ಸ್: ಆಕ್ಲೆಂಡ್ನಲ್ಲಿ ಭಾರತಕ್ಕೆ 260 ರನ್ಗಳ ಅಸಾಧ್ಯ ಗುರಿ ಕೊಟ್ಟ ಕಿವೀಸ್!
- ರೋಬೋಟ್ಗಳ ಹೊಸ ಲೋಕಕ್ಕೆ ಬೆಂಗಳೂರು ಸಜ್ಜು: ಪರದೆಯಿಂದ ನೈಜ ಜಗತ್ತಿಗೆ AI
- ಮಾಜಿ ಸಚಿವ ಶ್ರೀರಾಮುಲು ಸೋದರಳಿಯ ಸುರೇಶ್ ಬಾಬುಗೆ ಬಿಹಾರ ನ್ಯಾಯಾಲಯದಿಂದ NBW






















