SK Home Ad
Home ಸಿನಿ ಮಿಲ್ಸ್ ದುಡ್ಡು ಸುರಿದರೆ ಸಿನಿಮಾ ಓಡುತ್ತೆ ಎಂಬುದು ಭ್ರಮೆ

ದುಡ್ಡು ಸುರಿದರೆ ಸಿನಿಮಾ ಓಡುತ್ತೆ ಎಂಬುದು ಭ್ರಮೆ

0
37

ಚಿತ್ರದುರ್ಗ: ‘ದುಡ್ಡು ಸುರಿದರೆ ಸಿನಿಮಾ ಓಡುತ್ತೆ ಎಂಬುದು ಭ್ರಮೆ. ಸಿನಿಮಾದ ಕಥೆ ಜನರನ್ನು ಆಕರ್ಷಿಸಬೇಕು. ಜನರಿಗೆ ಸಬ್ಜೆಕ್ಟ್ ಅರ್ಥವಾಗುವಂತಿರಬೇಕು. ಕುಟುಂಬ ಸಮೇತರಾಗಿ ಕುಳಿತು ನೋಡುವಂತಿರಬೇಕು’ ಎಂದು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹೇಳಿದರು.

ಚಿತ್ರದುರ್ಗಕ್ಕೆ ಸೋಮವಾರ ಭೇಟಿ ನೀಡಿದ ಶಿವರಾಜಕುಮಾರ್, ನಗರದ ಖಾಸಗಿ ಶೋರೂಂನಲ್ಲಿ ಆಯೋಜಿಸಿದ್ದ ತಮ್ಮ ನೂತನ ‘ಬೇಲ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶಿವಣ್ಣ ಚಿತ್ರದುರ್ಗಕ್ಕೆ ಆಗಮಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಶೋರೂಂ ಬಳಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಹಾಗೂ ಅವರೊಂದಿಗೆ ಫೋಟೊ, ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಸುದ್ದಿಗೋಷ್ಠಿಯಲ್ಲಿ ‘ಬೇಲ್’ ಚಿತ್ರದ ಕುರಿತು ಮಾತನಾಡಿದ ಶಿವರಾಜಕುಮಾರ್, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ‘ಬೇಲ್’ ಒಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಎಲ್ಲಾ ಸಿನಿಮಾಗಳೂ ಸಿನಿಮಾಗಳೇ. ಇದರಲ್ಲಿ ಬಿಗ್ ಬಜೆಟ್, ಸ್ಮಾಲ್ ಬಜೆಟ್ ಎಂಬುದಿಲ್ಲ. ಬಿಗ್ ಬಜೆಟ್ ಸಿನಿಮಾ ಮಾಡಿದರೆ ಅದು ಯಶಸ್ವಿಯಾಗುತ್ತದೆ ಎಂಬುದು ಸರಿಯಲ್ಲ. ಸಿನಿಮಾದ ಕಥೆ ಹಾಗೂ ವಿಷಯ ಜನರನ್ನು ಆಕರ್ಷಿಸಬೇಕು ಎಂದು ಹೇಳಿದರು.

‘ಪ್ರೇಮದ ಊರಲ್ಲಿ’ ಸೇರಿದಂತೆ ಕೆಲವು ಸಿನಿಮಾಗಳು ಹಾಗೂ ಇದೀಗ ‘ಬೇಲ್’ ಚಿತ್ರವೂ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಜನರಿಗೆ ಸಿನಿಮಾದ ಸಬ್ಜೆಕ್ಟ್ ಅರ್ಥವಾಗಬೇಕು. ಕುಟುಂಬದವರೊಂದಿಗೆ ಕುಳಿತು ನೋಡುವಂತಿರಬೇಕು. ಕೆಲವೊಮ್ಮೆ ಒಳ್ಳೆಯ ಸಿನಿಮಾಗಳೂ ಓಡುವುದಿಲ್ಲ. ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ದುಡ್ಡು ಸುರಿದರೆ ಸಿನಿಮಾ ಓಡುತ್ತದೆ ಎಂಬ ಭಾವನೆ ಭ್ರಮೆ. ಭ್ರಮೆಯಲ್ಲಿ ಬದುಕಬಾರದು, ರಿಯಾಲಿಟಿಯಲ್ಲಿ ಬದುಕಬೇಕು. ಸಿನಿಮಾ ಸರಳವಾಗಿ ಪ್ರೇಕ್ಷಕರಿಗೆ ಅರ್ಥವಾಗುವಂತಿರಬೇಕು. ಆಗ ಅದು ಜನರನ್ನು ತಲುಪುತ್ತದೆ ಎಂದು ಶಿವರಾಜಕುಮಾರ್ ಅಭಿಪ್ರಾಯಪಟ್ಟರು.

ಶಿವರಾಜಕುಮಾರ್ ಬಳಿಯೇ ಪಟಾಕಿ ಸ್ಫೋಟ, ತಪ್ಪಿದ ಅನಾಹುತ: ಹ್ಯಾಟ್ರಿಕ್ ಹೀರೋ ನಟ ಶಿವರಾಜಕುಮಾರ್ ಅವರ ಆಗಮನದ ವೇಳೆ ಪಟಾಕಿ ಸ್ಫೋಟಗೊಂಡು ಆತಂಕ ಸೃಷ್ಟಿಯಾದ ಘಟನೆ ನಗರದಲ್ಲಿ ನಡೆದಿದೆ.

ಖಾಸಗಿ ಶೋರೂಂ ಪ್ರವೇಶಿಸುವ ವೇಳೆ ಅಭಿಮಾನಿಗಳು ಸಂಭ್ರಮದಿಂದ ಸಿಡಿಸಿದ ಪಟಾಕಿ ದಿಢೀರ್ ಸ್ಫೋಟಗೊಂಡಿದೆ. ನಟ ಶಿವಣ್ಣ ಅವರ ಸಮೀಪದಲ್ಲೇ ಪಟಾಕಿ ಸಿಡಿದಿದ್ದರಿಂದ ಕೆಲ ಕ್ಷಣ ಗೊಂದಲ ಉಂಟಾಯಿತು. ಸ್ಫೋಟದಿಂದ ಶಿವಣ್ಣ ಬೆಚ್ಚಿ ಬಿದ್ದಿದ್ದು ಕಂಡುಬಂತು. ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಪೊಲೀಸರು ಮತ್ತು ಆಪ್ತರು ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಿಸಿದರು.