SK Home Ad
Home ಸುದ್ದಿ ರಾಜ್ಯ ರೈತರ ಸಂಕಷ್ಟ ಬಿಟ್ಟು SIR ಗುಮ್ಮ ಸೃಷ್ಟಿ: ಡಿಕೆಶಿ ವಿರುದ್ಧ ಜೋಶಿ ಕಿಡಿ

ರೈತರ ಸಂಕಷ್ಟ ಬಿಟ್ಟು SIR ಗುಮ್ಮ ಸೃಷ್ಟಿ: ಡಿಕೆಶಿ ವಿರುದ್ಧ ಜೋಶಿ ಕಿಡಿ

0
5

ನವದೆಹಲಿ: ಕರ್ನಾಟಕದಲ್ಲಿ ಬರ ಪರಿಸ್ಥಿತಿ, ರೈತರ ಸಂಕಷ್ಟ ಹಾಗೂ ಜನರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕಾದ ಮುಖ್ಯಮಂತ್ರಿ ರಾಜ್ಯ ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿರುವುದು ನಿಜಕ್ಕೂ ದುರಂತವೇ ಸರಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಕಲಿ ಗಾಂಧಿಗಳನ್ನು ಓಲೈಸಲು ಇಲ್ಲದ SIR ಗುಮ್ಮವನ್ನು ಸೃಷ್ಟಿಸಿ ಜನರ ದಿಕ್ಕು ತಪ್ಪಿಸುವ ನಾಟಕವಾಡುತ್ತಿದ್ದಾರೆ. ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮರೆಮಾಚಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ.

ರಾಜ್ಯದ ಒಬ್ಬ ಮುಖ್ಯಮಂತ್ರಿಯಾಗಿ ಬರದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸುವ ಬದಲು ರಾಜ್ಯ ಸಚಿವ ಸಂಪುಟ ಸಭೆಯನ್ನೇ ಮುಂದೂಡಿ ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಎದುರು ಏಕಾಏಕಿ ಧರಣಿ ನಡೆಸುತ್ತಿರುವುದು ನಿಜಕ್ಕೂ ಖಂಡನೀಯ. ಇದು ರೈತರ ಮತ್ತು ಜನಸಾಮಾನ್ಯರ ಮೇಲೆ ಇವರಿಗೆ ಅದೆಷ್ಟು ಕಾಳಜಿಯಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ ಎಂದು ದೂರಿದ್ದಾರೆ.

ರಾಜ್ಯದ ದೊರೆಯಾಗಿ ರೈತರ ಸಂಕಷ್ಟ, ಬರಗಾಲದ ಪರಿಸ್ಥಿತಿ ಹಾಗೂ ಜನರ ಮೂಲಭೂತ ಅಗತ್ಯಗಳಿಗೆ ಆದ್ಯತೆ ನೀಡುವುದನ್ನು ಬಿಟ್ಟು ಆಡಳಿತವನ್ನು ಸಂಪೂರ್ಣ ನಿರ್ಲಕ್ಷಿಸಿ, ನಕಲಿ ಗಾಂಧಿಗಳನ್ನು ಓಲೈಸಲು ಮತ್ತು ಸಂದೇಹಾಸ್ಪದ ಮತದಾರರನ್ನು ರಕ್ಷಿಸಲು ಈ ರೀತಿ ಧರಣಿ ನಡೆಸುತ್ತಿರುವುದು ವಿಷಾದನೀಯ ಎಂದಿದ್ದಾರೆ.

ಚುನಾವಣಾ ಪ್ರಕ್ರಿಯೆ, ಎಸ್‌ಐಆರ್ ಪ್ರಕ್ರಿಯೆ, ಫಾರ್ಮ್ ನಂಬರ್-7, ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ಹಾಗೂ ಬಿಎಲ್‌ಒ, ಬಿಎಲ್‌ಎಗಳಿಗೂ ಸ್ಪಷ್ಟ ಅರಿವಿರುತ್ತದೆ ಮತ್ತು ಚುನಾವಣಾ ಆಯೋಗವೂ ಈ ಬಗ್ಗೆ ನಿರಂತರವಾಗಿ ಗಮನಹರಿಸುತ್ತಿರುತ್ತದೆ. ಹೀಗಿದ್ದರೂ ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಧರಣಿಯ ಹಾದಿ ತುಳಿದಿರುವುದು ಅಕ್ಷಮ್ಯ ಎಂದು ಹೇಳಿದ್ದಾರೆ.