34,000 ಅಡಿ ಎತ್ತರದಲ್ಲಿ ಸಂಕಷ್ಟ – ಗಾಯಗೊಂಡರೂ ಹೋರಾಡಿ ಗಾಯಗೊಂಡರೂ ಕಾಕ್‌ಪಿಟ್ ಬಾಗಿಲು ತೆರೆದು 174 ಜೀವ ಉಳಿಸಿದ ಪೈಲಟ್: ಕ್ಯಾಪ್ಟನ್ ಸ್ಮಿತ್‌ಗೆ ಪ್ರಶಂಸೆ
ನವದೆಹಲಿ: ಫ್ಲೈದುಬೈ ವಿಮಾನದಲ್ಲಿ ನಡೆದ ಹೈಜಾಕ್ ಯತ್ನದ ವೇಳೆ ಅಸಾಧಾರಣ ಧೈರ್ಯ ಮತ್ತು ಸಮಯಪ್ರಜ್ಞೆ ಪ್ರದರ್ಶಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೌರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಹಲವು ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದರೂ ಪ್ರಯಾಣಿಕರ ಜೀವ ರಕ್ಷಿಸುವ ನಿಟ್ಟಿನಲ್ಲಿ ಅವರು ಕೈಗೊಂಡ ತ್ವರಿತ ಕ್ರಮವು ದೊಡ್ಡ ದುರಂತವನ್ನು ತಪ್ಪಿಸಲು ನೆರವಾಯಿತು ಎಂದು ವರದಿಯಾಗಿದೆ.
ದುಬೈಯಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಬುಧವಾರ ಮಧ್ಯಂತರದಲ್ಲಿ ಆತಂಕಕಾರಿ ಬೆಳವಣಿಗೆ ನಡೆದಿತ್ತು. ವಿಮಾನದಲ್ಲಿ ಪೈಲಟ್‌ಗಳ ನಡುವೆ ಸಂಘರ್ಷ ಉಂಟಾದ ಸಂದರ್ಭದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದರು. ಪರಿಸ್ಥಿತಿ ಗಂಭೀರವಾಗಿದ್ದರೂ ಅವರು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಇದರಿಂದ ಕ್ಯಾಬಿನ್ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳಗೆ ಪ್ರವೇಶಿಸಿ ದಾಳಿಕೋರನನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದು ವರದಿಯಾಗಿದೆ.
ವಿಮಾನದಲ್ಲಿ ಒಟ್ಟು 174 ಪ್ರಯಾಣಿಕರಿದ್ದು, 27 ಮಕ್ಕಳು ಇದ್ದರು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ. ಕಾಕ್‌ಪಿಟ್‌ನಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ವಿಮಾನವನ್ನು ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ಗಾಯಗೊಂಡ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವರದಿಯಾಗಿದೆ.
ಪ್ರಧಾನಿ ಮೋದಿ ಹೇಳಿದ್ದೇನು? : ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ತೀವ್ರ ಅಪಾಯದ ಸಂದರ್ಭದಲ್ಲಿ, ಗಂಭೀರವಾಗಿ ಗಾಯಗೊಂಡಿದ್ದರೂ ಅವರು ತೋರಿದ ಅಸಾಧಾರಣ ಧೈರ್ಯ, ಮನೋಸ್ಥೈರ್ಯ ಮತ್ತು ಇತರರ ಜೀವ ಉಳಿಸುವ ಸಂಕಲ್ಪ ಪ್ರಶಂಸನೀಯ ಎಂದು ಪ್ರಧಾನಿ ಹೇಳಿದ್ದಾರೆ.
ನೂರಾರು ಪ್ರಯಾಣಿಕರ ಜೀವಗಳನ್ನು ರಕ್ಷಿಸಲು ಹಾಗೂ ಸಂಭವಿಸಬಹುದಾಗಿದ್ದ ಭಾರೀ ದುರಂತವನ್ನು ತಪ್ಪಿಸಲು ಕ್ಯಾಪ್ಟನ್ ಸ್ಮಿತ್ ಅವರ ಸಮಯೋಚಿತ ಕ್ರಮ ನೆರವಾಯಿತು ಎಂದು ಮೋದಿ ಹೇಳಿದ್ದಾರೆ. ಅವರ ಶೌರ್ಯಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ಅವರು ಶೀಘ್ರವಾಗಿ ಸಂಪೂರ್ಣ ಚೇತರಿಸಿಕೊಳ್ಳಲಿ ಎಂದು ಹಾರೈಸುವುದಾಗಿ ಪ್ರಧಾನಿ ತಿಳಿಸಿದ್ದಾರೆ.
ನೆತನ್ಯಾಹು ಕೂಡ ಮೆಚ್ಚುಗೆ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ. ಗಂಭೀರ ಗಾಯಗಳ ನಡುವೆಯೂ ಅವರು ಪರಿಸ್ಥಿತಿಯನ್ನು ಎದುರಿಸಿ ಕಾಕ್‌ಪಿಟ್ ಬಾಗಿಲು ತೆರೆಯುವ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಗೆ ದಾಳಿಕೋರನನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟರು ಎಂದು ಅವರು ಹೇಳಿದ್ದಾರೆ. ಈ ಕ್ರಮದಿಂದ ಆಕಾಶದಲ್ಲೇ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ಅನುಭವಿ ಭಾರತೀಯ ಪೈಲಟ್ : ಮುಂಬೈ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು 13 ವರ್ಷಕ್ಕೂ ಹೆಚ್ಚು ಕಾಲ ವಿಮಾನಯಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ಅನುಭವಿ ಪೈಲಟ್ ಎಂದು ವರದಿಯಾಗಿದೆ. ಬೋಯಿಂಗ್ 737 ವಿಮಾನಗಳಲ್ಲಿ 9,750ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅನುಭವ ಹೊಂದಿದ್ದು, ಅದರಲ್ಲಿ 6,400ಕ್ಕೂ ಹೆಚ್ಚು ಗಂಟೆಗಳನ್ನು ಕಮಾಂಡ್ ಪೈಲಟ್ ಆಗಿ ಸೇವೆ ಸಲ್ಲಿಸಿದ್ದಾರೆ ಎನ್ನಲಾಗಿದೆ. 2022ರಿಂದ ಅವರು ಫ್ಲೈದುಬೈನಲ್ಲಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಘಟನೆಯ ಸಂಪೂರ್ಣ ತನಿಖೆ ಮುಂದುವರಿದಿರುವ ನಡುವೆಯೇ, ಪ್ರಯಾಣಿಕರ ಸುರಕ್ಷತೆಗಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಕೈಗೊಂಡ ಕ್ರಮ ಇದೀಗ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















