SK Home Ad
Home ಸುದ್ದಿ ದೇಶ LPG Price Hike: ಹಬ್ಬದ ಹೊಸ್ತಿಲಲ್ಲೇ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ

LPG Price Hike: ಹಬ್ಬದ ಹೊಸ್ತಿಲಲ್ಲೇ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ

0
38

ನವದೆಹಲಿ: ಹಬ್ಬದ ಋತುವಿನ ಆರಂಭದಲ್ಲೇ ಹೋಟೆಲ್, ರೆಸ್ಟೋರೆಂಟ್, ಕ್ಯಾಟರಿಂಗ್ ಸೇರಿದಂತೆ ವಾಣಿಜ್ಯ ಬಳಕೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಕ್ಟೋಬರ್ 1, 2026ರಿಂದ ಜಾರಿಗೆ ಬರುವಂತೆ 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್ ಬೆಲೆಯನ್ನು ₹62.50ರಷ್ಟು ಹೆಚ್ಚಿಸಲಾಗಿದೆ.

ದೆಹಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ₹2,747.50 ಇದ್ದ 19 ಕೆ.ಜಿ. ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ ₹2,810ಕ್ಕೆ ಏರಿಕೆಯಾಗಿದೆ. ಇದು ಸುಮಾರು ಶೇ.2.3ರಷ್ಟು ಹೆಚ್ಚಳವಾಗಿದೆ. ದೇಶದ ಇತರ ನಗರಗಳಲ್ಲಿಯೂ ವಾಣಿಜ್ಯ LPG ದರ ಏರಿಕೆಯಾಗಿದ್ದು, ಸ್ಥಳೀಯ ತೆರಿಗೆ ಹಾಗೂ ಇತರ ಅಂಶಗಳ ಕಾರಣ ಅಂತಿಮ ಬೆಲೆಯಲ್ಲಿ ವ್ಯತ್ಯಾಸವಿದೆ.

ಗೃಹಬಳಕೆಯ LPG ದರದಲ್ಲಿ ಬದಲಾವಣೆ ಇಲ್ಲ : ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದ ನಡುವೆಯೇ ಮನೆಗಳಲ್ಲಿ ಬಳಸುವ 14.2 ಕೆ.ಜಿ. ಗೃಹಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೆಹಲಿಯಲ್ಲಿ ಇದರ ಬೆಲೆ ₹942ರಷ್ಟೇ ಮುಂದುವರಿದಿದೆ.

ವಾಣಿಜ್ಯ LPG ಬೆಲೆಗಳು ಮಾರುಕಟ್ಟೆ ಆಧಾರಿತವಾಗಿದ್ದು, ಅಂತಾರಾಷ್ಟ್ರೀಯ LPG ಬೆಲೆಗಳು ಮತ್ತು ಸಂಬಂಧಿತ ವೆಚ್ಚಗಳ ಚಲನವಲನಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಸ್ಪಷ್ಟಪಡಿಸಿತ್ತು. ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೆಚ್ಚುವರಿ ಹೊರೆಯಾಗಿದೆ.

ವಾಣಿಜ್ಯ LPG ಸಿಲಿಂಡರ್‌ಗಳ ದರ ಏರಿಕೆಯ ನೇರ ಪರಿಣಾಮ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು, ಕ್ಯಾಂಟೀನ್‌ಗಳು ಮತ್ತು ಇತರ ಆಹಾರ ಸೇವಾ ವಲಯದ ಸಂಸ್ಥೆಗಳ ಮೇಲೆ ಬೀಳಲಿದೆ. ಹಬ್ಬದ ಸಮಯದಲ್ಲಿ ವ್ಯಾಪಾರ ಚಟುವಟಿಕೆ ಹೆಚ್ಚಾಗುವ ಸಂದರ್ಭದಲ್ಲೇ ಇಂಧನ ವೆಚ್ಚ ಏರಿಕೆಯಾಗಿರುವುದರಿಂದ ವಾಣಿಜ್ಯ ಸಂಸ್ಥೆಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗುವ ಸಾಧ್ಯತೆಯಿದೆ.

ಅಕ್ಟೋಬರ್ 1ರಿಂದ ವಾಣಿಜ್ಯ LPG ದರ ಪರಿಷ್ಕರಣೆಯ ಜೊತೆಗೆ, ಸಬ್ಸಿಡಿ ದರದಲ್ಲಿ ಗೃಹಬಳಕೆಯ LPG ರಿಫಿಲ್ ಪಡೆಯುವ ಗ್ರಾಹಕರಿಗೆ ಬಯೋಮೆಟ್ರಿಕ್ ಆಧಾರ್ ದೃಢೀಕರಣಕ್ಕೆ ಸಂಬಂಧಿಸಿದ ಹೊಸ ನಿಯಮವೂ ಜಾರಿಗೆ ಬಂದಿದೆ. ಈಗಾಗಲೇ ದೃಢೀಕರಣ ಪೂರ್ಣಗೊಳಿಸಿರುವ ಗ್ರಾಹಕರು ಮತ್ತೊಮ್ಮೆ ಪ್ರಕ್ರಿಯೆ ನಡೆಸಬೇಕಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.