SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವಿವಿಗಳಲ್ಲಿ ‘ವಚನ ನಾದಲೋಕ’ ಪಠ್ಯಕ್ರಮ ಆರಂಭಿಸಿ

ವಿವಿಗಳಲ್ಲಿ ‘ವಚನ ನಾದಲೋಕ’ ಪಠ್ಯಕ್ರಮ ಆರಂಭಿಸಿ

0
30

ದಾವಣಗೆರೆ: ಯುವ ಪೀಳಿಗೆಗೆ ಬಸವಣ್ಣನವರ ವಚನಗಳ ತತ್ವ ಹಾಗೂ ಸಂದೇಶವನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ‘ವಚನ ನಾದಲೋಕ’ ಎಂಬ ವಿಶೇಷ ಸಂಗೀತ ಪಠ್ಯಕ್ರಮವನ್ನು ಆರಂಭಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.

ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಲಿಂಗಾಯತ ಮಠಾಧಿಪತಿಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ವಚನ ನಾದಲೋಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ವಚನ ಸಂಗೀತಕ್ಕೆ ಪ್ರತ್ಯೇಕ ವಿಭಾಗ ಅಥವಾ ಪಠ್ಯಕ್ರಮ ಆರಂಭಿಸುವ ಕುರಿತು ಪೂಜ್ಯರು ಮಾರ್ಗದರ್ಶನ ನೀಡಿದರೆ, ಸರ್ಕಾರದ ಮಟ್ಟದಲ್ಲಿ ಅಗತ್ಯ ಸಹಕಾರ ನೀಡಲು ತಾವು ಸಿದ್ಧವಿರುವುದಾಗಿ ತಿಳಿಸಿದರು.

ಇಂದಿನ ಯುವಪೀಳಿಗೆಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಬಸವಣ್ಣನವರ ವಚನಗಳು ಕೇವಲ ಸಾಹಿತ್ಯವಲ್ಲ, ಸಮಾಜಕ್ಕೆ ದಾರಿ ತೋರಿಸುವ ಮೌಲ್ಯಗಳಾಗಿವೆ. ಇಂತಹ ವಚನಗಳನ್ನು ಸಂಗೀತದ ಮೂಲಕ ಯುವಜನರಿಗೆ ತಲುಪಿಸುವ ಪ್ರಯತ್ನವಾಗಬೇಕು ಎಂದು ಹೇಳಿದರು.

‘ಇಂದಿನ ಅಪಸಂಗೀತದ ನಡುವೆ ಬಸವಣ್ಣನವರ ವಚನಗಳ ನಾದಲೋಕ ನಮಗೆ ಅತ್ಯಗತ್ಯವಾಗಿದೆ. ಬಸವಣ್ಣನವರ ಅನುಭವ ಮಂಟಪದ ತತ್ವಗಳನ್ನು ಯುವಜನರು ಅರಿತುಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಜಾತ್ಯತೀತ ಮನೋಭಾವ ಬೆಳೆಸಲು ಸಾಧ್ಯ’ ಎಂದರು.

ಈಗಾಗಲೇ ನೀವು ಈಗಿನ ಸಂಗೀತವನ್ನು ಕೇಳ್ತೀರಿ. ಹೊಡಿ ಮಗ, ಹೊಡಿ ಮಗ ಅಂತಕ್ಕಂತಹ ಸಂಗೀತವನ್ನು ಕೇಳ್ತೀರಿ, ಇದು ಬೇಕಾಗಿಲ್ಲ. ಈ ರಾಜ್ಯಕ್ಕೆ, ಈ ದೇಶಕ್ಕೆ ಬೇಕಾಗಿರುವುದು ಬಸವಣ್ಣನವರ ವಚನದ ನಾದಲೋಕ ಬೇಕಾಗಿದೆ. ಅಲ್ಲಿ ಶಾಂತಿಯನ್ನು ನಿರ್ಮಾಣ ಮಾಡಲಿಕ್ಕೆ ಇದೆ. ಅಲ್ಲಿ ಜಾತ್ಯತೀತ ಧರ್ಮವನ್ನು ನಿರ್ಮಾಣ ಮಾಡಲಿಕ್ಕೆ ಇದೆ. ಅಂತಹ ಒಂದು ಧರ್ಮವನ್ನು ನಾವೇನಾದರೂ ಕಾಣಬೇಕಾಗಿದೆ ಎಂದರೆ ನಮ್ಮ ಬಸವಣ್ಣನವರ ಅನುಭವ ಮಂಟಪದ ಧರ್ಮದಲ್ಲಿ ಕಾಣಬಹುದು ಎಂದರು.

‘ವೇದಿಕೆಯ ಮೇಲಿರುವ ಪೂಜ್ಯರನ್ನು ನೋಡಿದರೆ ನಿಜವಾದ ಬಸವಣ್ಣನವರೇ ಕುಳಿತಂತೆ ಭಾಸವಾಗುತ್ತಿದೆ. ಬಸವಣ್ಣನವರ ತತ್ವಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಸೋದರತೆ ಮತ್ತು ಸಹಬಾಳ್ವೆ ಬೆಳೆಸಬೇಕು’ ಎಂದು ಹೇಳಿದರು.