SK Home Ad
Home ನಮ್ಮ ಜಿಲ್ಲೆ ವಿಜಯಪುರ ಬಸವನಬಾಗೇವಾಡಿಯಲ್ಲಿ ಮತ್ತೆ 3.5 ತೀವ್ರತೆಯ ಭೂಕಂಪನ: ಜನರಲ್ಲಿ ಆತಂಕ

ಬಸವನಬಾಗೇವಾಡಿಯಲ್ಲಿ ಮತ್ತೆ 3.5 ತೀವ್ರತೆಯ ಭೂಕಂಪನ: ಜನರಲ್ಲಿ ಆತಂಕ

0
62
ಬಸವನಬಾಗೇವಾಡಿ ಬಳಿ 3.5 ತೀವ್ರತೆಯ ಭೂಕಂಪನ; 50–60 ಕಿ.ಮೀ ವ್ಯಾಪ್ತಿಯಲ್ಲಿ ಕಂಪನದ ಅನುಭವ

ಬಸವನಬಾಗೇವಾಡಿ (ವಿಜಯಪುರ): ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಸುತ್ತಮುತ್ತ ಬುಧವಾರ ಮುಂಜಾನೆ ಮತ್ತೊಮ್ಮೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಭಾಗದಲ್ಲಿ ಪದೇಪದೇ ಕಂಪನಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮೂಡಿದೆ. ಆದರೆ ಭೂಕಂಪನದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿಯಂತೆ, ಸೆಪ್ಟೆಂಬರ್ 30ರಂದು ಮುಂಜಾನೆ 2.04ಕ್ಕೆ ಭೂಕಂಪನ ದಾಖಲಾಗಿದೆ. ಇದರ ಕೇಂದ್ರಬಿಂದು ಬಸವನಬಾಗೇವಾಡಿಯಿಂದ ಸುಮಾರು 3.9 ಕಿ.ಮೀ ಈಶಾನ್ಯ ದಿಕ್ಕಿನಲ್ಲಿ ಹಾಗೂ ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ.

ಕೇಂದ್ರಬಿಂದುವಿನ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಲಘು ಕಂಪನದ ಅನುಭವವಾಗಿದೆ. ಹುಣಶ್ಯಾಳ ಗ್ರಾಮ ಪಂಚಾಯಿತಿ ಪ್ರದೇಶದ ಪಶ್ಚಿಮಕ್ಕೆ ಸುಮಾರು 7.8 ಕಿ.ಮೀ ಹಾಗೂ ಹುವಿನ ಹಿಪ್ಪರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಶ್ಚಿಮಕ್ಕೆ ಸುಮಾರು 11.2 ಕಿ.ಮೀ ದೂರದಲ್ಲೂ ಕಂಪನದ ಪರಿಣಾಮ ದಾಖಲಾಗಿದೆ. ಅಲಮಟ್ಟಿ ಅಣೆಕಟ್ಟಿನಿಂದ ಸುಮಾರು 31 ಕಿ.ಮೀ ಈಶಾನ್ಯಕ್ಕೆ ಹಾಗೂ ವಿಜಯಪುರ ನಗರದಿಂದ ಸುಮಾರು 38 ಕಿ.ಮೀ ನೈಋತ್ಯಕ್ಕೆ ಈ ಪ್ರದೇಶವಿದೆ. ಸುಮಾರು 50–60 ಕಿ.ಮೀ ವ್ಯಾಪ್ತಿಯಲ್ಲಿ ಸ್ಥಳೀಯವಾಗಿ ಕಂಪನ ಅನುಭವವಾಗುವ ಸಾಧ್ಯತೆ ಇದೆ ಎಂದು KSNDMC ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಪದೇಪದೇ ಕಂಪನ : ಬಸವನಬಾಗೇವಾಡಿ ಸುತ್ತಮುತ್ತ ಸೆಪ್ಟೆಂಬರ್ 29ರ ಮಧ್ಯರಾತ್ರಿಯಲ್ಲೂ 3.6 ತೀವ್ರತೆಯ ಭೂಕಂಪನ ರಾಷ್ಟ್ರೀಯ ಭೂಕಂಪನ ಕೇಂದ್ರದ ದಾಖಲೆಗಳಲ್ಲಿ ಕಾಣಿಸಿಕೊಂಡಿದೆ. ಅದರ ಕೇಂದ್ರವೂ ಬಸವನಬಾಗೇವಾಡಿ ಸಮೀಪದಲ್ಲೇ, 10 ಕಿ.ಮೀ ಆಳದಲ್ಲಿ ದಾಖಲಾಗಿತ್ತು.

ಇದಕ್ಕೂ ಮುನ್ನ ಸೆಪ್ಟೆಂಬರ್ 29ರಂದು ಇದೇ ತಾಲ್ಲೂಕಿನ ದಿಂಡವಾರ ಗ್ರಾಮ ಪಂಚಾಯಿತಿ ಸಮೀಪ 3.5 ತೀವ್ರತೆಯ ಮತ್ತೊಂದು ಕಂಪನ ದಾಖಲಾಗಿತ್ತು ಎಂದು KSNDMC ವರದಿಯನ್ನು ಉಲ್ಲೇಖಿಸಿ ವರದಿಯಾಗಿತ್ತು. ಇದರಿಂದ ಅಲ್ಪಾವಧಿಯಲ್ಲಿ ಪದೇಪದೇ ಭೂಕಂಪನದ ಅನುಭವವಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಆತಂಕ ಬೇಡ ಎಂದ ಅಧಿಕಾರಿಗಳು : ಪ್ರಸ್ತುತ ದಾಖಲಾಗಿರುವ ಕಂಪನದ ಪ್ರಮಾಣ ಕಡಿಮೆಯಾಗಿದ್ದು, ಯಾವುದೇ ಹಾನಿಯ ವರದಿಯಾಗಿಲ್ಲ. KSNDMC ಕೂಡ ಸ್ಥಳೀಯ ಪರಿಸ್ಥಿತಿಯನ್ನು ಗಮನಿಸುತ್ತಿದೆ. ಭೂಕಂಪನದ ತೀವ್ರತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೊಳಗಾಗಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ಒಂದೇ ಪ್ರದೇಶದಲ್ಲಿ ಸತತವಾಗಿ ಲಘು ಕಂಪನಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ಅಧಿಕಾರಿಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಯಾವುದೇ ಅಸಹಜ ಕಂಪನ ಅಥವಾ ಹಾನಿ ಕಂಡುಬಂದಲ್ಲಿ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಪ್ರಸ್ತುತ ಬಸವನಬಾಗೇವಾಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದು, ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಯಾವುದೇ ವರದಿ ಲಭ್ಯವಾಗಿಲ್ಲ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.