SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಕರ್ನಾಟಕದ ವೈಭವವನ್ನು ವಿಡಿಯೋದಲ್ಲಿ ಕಟ್ಟಿಕೊಟ್ಟ ನಂದಿನಿ; ರಾಜ್ಯ ಸರ್ಕಾರದಿಂದ ಕ್ರಿಯೇಟರ್ ಅವಾರ್ಡ್

ಕರ್ನಾಟಕದ ವೈಭವವನ್ನು ವಿಡಿಯೋದಲ್ಲಿ ಕಟ್ಟಿಕೊಟ್ಟ ನಂದಿನಿ; ರಾಜ್ಯ ಸರ್ಕಾರದಿಂದ ಕ್ರಿಯೇಟರ್ ಅವಾರ್ಡ್

0
9

ಬೆಂಗಳೂರು: ಪತ್ರಕರ್ತೆ, ಕಂಟೆಂಟ್ ಕ್ರಿಯೇಟರ್ ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಡಾ. ನಂದಿನಿ ಕೆ.ಎಲ್. ಅವರಿಗೆ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಪ್ರತಿಷ್ಠಿತ ‘ವೀಡಿಯೋ ಕ್ರಿಯೇಟರ್ ಅವಾರ್ಡ್ 2026’ ನೀಡಿ ಗೌರವಿಸಲಾಯಿತು.

ಕರ್ನಾಟಕದ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು, ಕಲೆ, ಸಂಸ್ಕೃತಿ, ಪರಂಪರೆ ಹಾಗೂ ರಾಜ್ಯದ ವೈವಿಧ್ಯಮಯ ಪ್ರವಾಸೋದ್ಯಮ ಸಾಧ್ಯತೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ಪರಿಚಯಿಸುತ್ತಿರುವ ಅವರ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವತಿಯಿಂದ ಭಾನುವಾರ ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ನಂದಿನಿ ಕೆ.ಎಲ್. ಅವರು ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಇಲಾಖೆಯ ಹಲವು ಗಣ್ಯರು ಉಪಸ್ಥಿತರಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸ್ತುತ ಪ್ರಮುಖ ವೀಡಿಯೋ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ಡಾ. ನಂದಿನಿ ಕೆ.ಎಲ್. ಅವರ ಹಲವು ವೀಡಿಯೋಗಳು ಕೋಟ್ಯಂತರ ವೀಕ್ಷಣೆಗಳನ್ನು ಪಡೆದಿವೆ. ಸ್ಥಳೀಯ ಇತಿಹಾಸ, ಪ್ರವಾಸಿ ತಾಣಗಳು, ಪರಂಪರೆ ಹಾಗೂ ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯನ್ನು ಸರಳ ಮತ್ತು ಆಕರ್ಷಕ ವೀಡಿಯೋಗಳ ಮೂಲಕ ಜನರಿಗೆ ತಲುಪಿಸುತ್ತಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಅವರು, ‘Digital Maadhyama’ ಸೇರಿದಂತೆ ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ಕರ್ನಾಟಕದ ಪ್ರವಾಸೋದ್ಯಮ, ಇತಿಹಾಸ, ಸಂಸ್ಕೃತಿ ಹಾಗೂ ಜನಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ವೀಡಿಯೋ ರೂಪದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರದ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ, ಕಂಟೆಂಟ್ ಕ್ರಿಯೇಟರ್‌ಗಳ ಮೂಲಕ ರಾಜ್ಯದ ಪ್ರವಾಸಿ ತಾಣಗಳನ್ನು ದೇಶ-ವಿದೇಶಗಳ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನಕ್ಕೆ ಈ ಪ್ರಶಸ್ತಿ ಮತ್ತಷ್ಟು ಉತ್ತೇಜನ ನೀಡಿದೆ.

ಸಮಾರಂಭದಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾದ್ ಮನೋಹರ್, KSTDC ಅಧ್ಯಕ್ಷ ಶ್ರೀನಿವಾಸ್, KST ಅಧ್ಯಕ್ಷ ಕೆ. ಶ್ಯಾಮರಾಜು, KSTDC ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್, JLR ವ್ಯವಸ್ಥಾಪಕ ನಿರ್ದೇಶಕ ಶಿವರಾಂ ಬಾಬು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿದ ಡಾ. ನಂದಿನಿ ಕೆ.ಎಲ್., ಕರ್ನಾಟಕದ ಪ್ರವಾಸೋದ್ಯಮವನ್ನು ಡಿಜಿಟಲ್ ಮಾಧ್ಯಮದ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿ ದೇಶ-ವಿದೇಶಗಳ ಜನರಿಗೆ ಪರಿಚಯಿಸುವ ತಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.