SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪ್ರಜಾಪ್ರಭುತ್ವ, ಮತದಾನದ ಹಕ್ಕಿನ ರಕ್ಷಣೆಗೆ ನಿರಂತರ ಹೋರಾಟ: ಸಂಸದೆ ಡಾ. ಪ್ರಭಾ

ಪ್ರಜಾಪ್ರಭುತ್ವ, ಮತದಾನದ ಹಕ್ಕಿನ ರಕ್ಷಣೆಗೆ ನಿರಂತರ ಹೋರಾಟ: ಸಂಸದೆ ಡಾ. ಪ್ರಭಾ

0
8

ದಾವಣಗೆರೆ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಪ್ರಮುಖ ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ನಿಷ್ಪಕ್ಷಪಾತತೆ ಮತ್ತು ವಿಶ್ವಾಸಾರ್ಹತೆ ಕುರಿತು ಪ್ರಶ್ನೆಗಳು ಎದುರಾದಾಗ ಪಾರದರ್ಶಕತೆ ಅಗತ್ಯ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕು ಅತ್ಯಂತ ಮಹತ್ವದ್ದಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಕುರಿತು ಪಾರದರ್ಶಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಕರ್ನಾಟಕದ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ 1.07 ಕೋಟಿಗೂ ಹೆಚ್ಚು ಮತದಾರರು ASDDO ವರ್ಗಕ್ಕೆ ಸೇರಿರುವ ಅಂಕಿ-ಅಂಶಗಳು ಪ್ರಕಟವಾಗಿವೆ. ಈ ವರ್ಗದಲ್ಲಿ ಗೈರುಹಾಜರು, ಸ್ಥಳಾಂತರಗೊಂಡವರು, ಮೃತರು ಹಾಗೂ ನಕಲಿ/ದ್ವಂದ್ವ ನೋಂದಣಿಗಳಂತಹ ಕಾರಣಗಳನ್ನು ಒಳಗೊಂಡಿದ್ದು, ಹೆಸರುಗಳನ್ನು ಅಂತಿಮವಾಗಿ ಕೈಬಿಡುವ ಮುನ್ನ ಸಂಬಂಧಪಟ್ಟ ಮತದಾರರಿಗೆ ಸೂಕ್ತ ಅವಕಾಶ ನೀಡುವುದು ಅಗತ್ಯವಾಗಿದೆ ಎಂದರು.

ಚುನಾವಣಾ ಆಯೋಗದ ಮುಖ್ಯಸ್ಥರ ಕಾರ್ಯವೈಖರಿ ಕುರಿತು ವ್ಯಕ್ತವಾಗಿರುವ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಹಾಗೂ ಎಸ್‌ಐಆರ್‌ ಸಂಬಂಧಿತ ಬೆಳವಣಿಗೆಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಡಾ. ಪ್ರಭಾ ಮಲ್ಲಿಕಾರ್ಜುನ್ ಒತ್ತಾಯಿಸಿದರು.

ಸೆ. 30ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಸಭೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮತದಾನದ ಹಕ್ಕಿನ ರಕ್ಷಣೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.

ಎಸ್‌ಐಆರ್‌ನಿಂದ ಜನರಲ್ಲಿ ಆತಂಕ: ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಮಾತನಾಡಿ, ಎಸ್‌ಐಆರ್‌ ಪ್ರಕ್ರಿಯೆಯಿಂದ ಜನಸಾಮಾನ್ಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಚುನಾವಣಾ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ತಮ್ಮ ರೇಷನ್ ಕಾರ್ಡ್‌ಗೆ ತೊಂದರೆಯಾಗಬಹುದೇ, ಮತದಾನದ ಹಕ್ಕು ಕಳೆದುಹೋಗಬಹುದೇ, ಸರ್ಕಾರದ ಯೋಜನೆಗಳು ನಿಲ್ಲಬಹುದೇ ಎಂಬ ಭಯ ಜನರಲ್ಲಿ ಮೂಡಿತ್ತು ಎಂದು ಹೇಳಿದರು.

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಪಾರದರ್ಶಕ ವ್ಯವಸ್ಥೆ ಅಗತ್ಯವಾಗಿದೆ. ಜನರ ಮತದಾನದ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕು ಎಂದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು. ಯಾವುದೇ ಸಂಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದು ಯಾವುದೇ ಒಂದು ಪಕ್ಷದ ಹೋರಾಟವಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಣೆಗೆ ನಡೆಯುತ್ತಿರುವ ಹೋರಾಟವಾಗಿದ್ದು, ಸಂವಿಧಾನದ ಮೇಲೆ ನಂಬಿಕೆ ಇರುವವರು ಒಂದಾಗಿ ಹೋರಾಡಬೇಕಿದೆ ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಖಲೀಲ್‌ಉಲ್ಲಾ, ಮುಖಂಡರಾದ ಡಿ. ಬಸವರಾಜ್, ಕೆ.ಜಿ. ಶಿವಕುಮಾರ್, ಮಾಗಾನಹಳ್ಳಿ ಪರಶುರಾಮ್, ಹದಡಿ ನಿಂಗಪ್ಪ, ಕೆ. ಚಮನ್‌ಸಾಬ್, ಸಯೀದ್ ಚಾರ್ಲಿ, ಕೆ.ಪಿ. ಪಾಲಯ್ಯ, ಮಹಿಳಾ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.