SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಾಮಾಜಿಕ ಬದಲಾವಣೆಗೆ ಬಸವಂತಪ್ಪ ಸಚಿವರಾಗಿರುವುದೇ ಸಾಕ್ಷಿ

ಸಾಮಾಜಿಕ ಬದಲಾವಣೆಗೆ ಬಸವಂತಪ್ಪ ಸಚಿವರಾಗಿರುವುದೇ ಸಾಕ್ಷಿ

0
38

ದಾವಣಗೆರೆ: ಸ್ವಾತಂತ್ರ‍್ಯಾನಂತರದ ಅವಧಿಯಲ್ಲಿ ದೇವಸ್ಥಾನ ಪ್ರವೇಶ ಸೇರಿದಂತೆ ಹಲವು ಸಾಮಾಜಿಕ ನಿರ್ಬಂಧಗಳನ್ನು ಎದುರಿಸಿದ್ದ ಸಮುದಾಯದ ನಾಯಕರೊಬ್ಬರು ಇಂದು ಮುಜರಾಯಿ ಇಲಾಖೆಯ ಸಚಿವರಾಗಿರುವುದು ಸಾಮಾಜಿಕ ಬದಲಾವಣೆಯ ಪ್ರಮುಖ ಬೆಳವಣಿಗೆಯಾಗಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಅಭಿಪ್ರಾಯಪಟ್ಟರು.

ದಾವಣಗೆರೆಯ ಗಾಂಧಿನಗರದಲ್ಲಿ ಮಾದಿಗ ಸಮಾಜ ಹಾಗೂ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಹೃದಯಸ್ಪರ್ಶಿ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧಿನಗರದ ಅಳಿಯ ಕೆ.ಎಸ್. ಬಸವಂತಪ್ಪ ಅವರು ಮುಜರಾಯಿ ಸಚಿವರಾಗಿರುವುದು ಕ್ಷೇತ್ರದ ಜನತೆಗೆ ಹೆಮ್ಮೆಯ ಸಂಗತಿ. ಅವರಿಗೆ ಸನ್ಮಾನಿಸುವ ಮೂಲಕ ಗಾಂಧಿನಗರದ ಜನತೆ ತಮ್ಮ ಪ್ರೀತಿ ಮತ್ತು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಅರ್ಚಕರು ಹಾಗೂ ಪೂಜಾರಿಗಳು ಗೌರವದಿಂದ ಸಚಿವರನ್ನು ಆಹ್ವಾನಿಸಿ ದೇವಾಲಯಗಳ ರಕ್ಷಣೆ ಮತ್ತು ಅಭಿವೃದ್ಧಿಗೆ ಸಹಕಾರ ಕೋರುತ್ತಿರುವುದು ಸಮಾಜದಲ್ಲಾಗುತ್ತಿರುವ ಬದಲಾವಣೆಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರಿಗೂ ಧಾರ್ಮಿಕ ಆಚರಣೆಗಳ ಸ್ವಾತಂತ್ರ‍್ಯವಿದ್ದರೂ, ಆಚರಣೆಗಳ ಹೆಸರಿನಲ್ಲಿ ಅನಾಗರಿಕವಾಗಿ ನಡೆದುಕೊಳ್ಳದೆ ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು ಎಂದರು.

ಸಮಾಜದ ಪ್ರಗತಿಗೆ ದೇವಸ್ಥಾನಗಳಷ್ಟೇ ಮುಖ್ಯವಲ್ಲ. ಶಾಲೆಗಳಿಗೆ ಪ್ರವೇಶ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಇನ್ನಷ್ಟು ಮಹತ್ವದ್ದಾಗಿವೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಗಳ ಗಂಟೆಯ ಶಬ್ದ ಹೆಚ್ಚಾಗಿ ಕೇಳಿಸಬೇಕು, ಶೈಕ್ಷಣಿಕ ವಾತಾವರಣ ನಿರ್ಮಾಣವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಬಸವಂತಪ್ಪ ಅವರ ರಾಜಕೀಯ ಹಾಗೂ ಸಾಮಾಜಿಕ ಸೇವೆಯ ದಿನಗಳನ್ನು ಸ್ಮರಿಸಿದರು. ಆರಂಭದಲ್ಲಿ ಸಹಕಾರಿ ಸಂಘಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸಿದ ಬಸವಂತಪ್ಪ ಅವರು ಬಿ.ಎಡ್., ಡಿ.ಎಡ್. ಕಾಲೇಜುಗಳನ್ನು ಸ್ಥಾಪಿಸಿ, ಅಲ್ಲಿಂದ ಲಭ್ಯವಾದ ಸಂಪನ್ಮೂಲಗಳನ್ನು ಸಾರ್ವಜನಿಕ ಸೇವೆ ಹಾಗೂ ಆಂಬ್ಯುಲೆನ್ಸ್ ಸೇವೆಗಳಿಗೆ ಬಳಸಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ತೆರಳಿ ನೆರವು ನೀಡುವುದು, ಮೃತರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವುದು ಹಾಗೂ ಸಂಕಷ್ಟದಲ್ಲಿದ್ದ ರೈತರ ಬೆಳೆ ಖರೀದಿಸಿ ನೆರವಾಗುವಂತಹ ಸೇವಾ ಕಾರ್ಯಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಜನರೊಂದಿಗೆ ಬೆರೆತು ಮಾಡಿದ ಸೇವೆಯಿಂದಲೇ ಬಸವಂತಪ್ಪ ಅವರಿಗೆ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಬೆಂಬಲ ದೊರೆತಿದೆ ಎಂದು ಎಚ್.ಆಂಜನೇಯ ಹೇಳಿದರು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವರ ಆಶೀರ್ವಾದ ಮತ್ತು ಬೆಂಬಲದಿಂದ ಅವರಿಗೆ ಅವಕಾಶ ದೊರೆತು ಯಶಸ್ಸು ಸಾಧಿಸಿದ್ದಾರೆ ಎಂದರು.

ಪೌರಕಾರ್ಮಿಕರ ನೇಮಕಾತಿ ಹಾಗೂ ವಿವಿಧ ಸೌಲಭ್ಯಗಳ ವಿತರಣೆಯಲ್ಲಿ ಯಾವುದೇ ಒಂದು ಕುಟುಂಬ ಅಥವಾ ಮನೆತನಕ್ಕೆ ಸೀಮಿತಗೊಳಿಸದೆ, ಸಮಾಜದ ಪ್ರತಿಯೊಂದು ಬಡ ಕುಟುಂಬಕ್ಕೂ ಸಮಾನ ಅವಕಾಶ ದೊರೆಯಬೇಕು ಎಂದು ಎಚ್.ಆಂಜನೇಯ ಹೇಳಿದರು.

ರಾಜಕೀಯ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅವು ಸಮಾಜದಲ್ಲಿ ಘರ್ಷಣೆ ಮತ್ತು ಅಶಾಂತಿಗೆ ಕಾರಣವಾಗಬಾರದು. ಎಲ್ಲರೂ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವದಿಂದ ಬದುಕುವ ವಾತಾವರಣ ನಿರ್ಮಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಚಿವ ಕೆ.ಎಸ್. ಬಸವಂತಪ್ಪ ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರತಿಯೊಬ್ಬರಿಗೂ ಅಗತ್ಯ ಸೌಲಭ್ಯಗಳು ಹಾಗೂ ಸಮಾನ ಅವಕಾಶಗಳು ದೊರೆಯಲಿ ಎಂದು ಅವರು ಶುಭ ಹಾರೈಸಿದರು.