SK Home Ad
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಸೌಜನ್ಯ ಸಾವಿನ ಸತ್ಯ ಹೊರತರಲು ವೈಜ್ಞಾನಿಕ ತನಿಖೆ ಅಗತ್ಯ

ಸೌಜನ್ಯ ಸಾವಿನ ಸತ್ಯ ಹೊರತರಲು ವೈಜ್ಞಾನಿಕ ತನಿಖೆ ಅಗತ್ಯ

0
55

ಚಿಕ್ಕಮಗಳೂರು: ಸೌಜನ್ಯ ಪ್ರಕರಣದ ಕುರಿತು ಪಾರದರ್ಶಕ ಹಾಗೂ ವೈಜ್ಞಾನಿಕ ತನಿಖೆ ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದು 14 ವರ್ಷ ಕಳೆದಿದ್ದರೂ ಸತ್ಯ ಹೊರಬರಬೇಕಿದೆ. ಸೌಜನ್ಯ ಸಾವಿಗೆ ಕಾರಣರಾದವರು ಯಾರೇ ಆಗಿದ್ದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ತನಿಖೆಯನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂಬುದು ಎಸ್‌ಐಟಿಗೆ ಬಿಟ್ಟ ವಿಚಾರ. ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.

ಹಳೆಯ ಪ್ರಕರಣಗಳನ್ನೂ ಆಧುನಿಕ ವೈಜ್ಞಾನಿಕ ತಂತ್ರಜ್ಞಾನ ಹಾಗೂ ಸಾಕ್ಷ್ಯಗಳ ನೆರವಿನಿಂದ ಮರುತನಿಖೆ ನಡೆಸಲು ಸಾಧ್ಯವಿದೆ. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸತ್ಯವನ್ನು ಹೊರತರಬೇಕು ಎಂದು ಹೇಳಿದರು.

ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆಯಂತೆ ವಿಶೇಷ ತನಿಖಾ ತಂಡ ರಚಿಸಿ, ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸಬೇಕು. ತನಿಖೆಯನ್ನೇ ಪ್ರಶ್ನಿಸಿ ಸರ್ಕಾರ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರೆ, ಸರ್ಕಾರದ ನಡೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡುವ ಸಾಧ್ಯತೆ ಇದೆ ಎಂದು ಹೇಳಿದರು.

ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಓಎಂಆರ್ ಶೀಟ್ ತಿದ್ದಲಾಗಿದೆ ಎಂಬ ಆರೋಪ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಸಮಗ್ರ, ನಿಷ್ಪಕ್ಷಪಾತ ಹಾಗೂ ವೈಜ್ಞಾನಿಕ ತನಿಖೆ ನಡೆಯುವ ಅಗತ್ಯವಿದೆ ಎಂದರು.