SK Home Ad
Home ನಮ್ಮ ಜಿಲ್ಲೆ ಕೊಪ್ಪಳ ತರಬೇತಿ ಮುಗಿಸಿ ಮನೆಗೆ ಬರುತ್ತಿದ್ದ ಅಗ್ನಿವೀರ ರೈಲು ಅಪಘಾತದಲ್ಲಿ ಸಾವು

ತರಬೇತಿ ಮುಗಿಸಿ ಮನೆಗೆ ಬರುತ್ತಿದ್ದ ಅಗ್ನಿವೀರ ರೈಲು ಅಪಘಾತದಲ್ಲಿ ಸಾವು

0
61

ಕೊಪ್ಪಳ: ದೇಶಸೇವೆ ಮಾಡುವ ಕನಸಿನೊಂದಿಗೆ ಅಗ್ನಿವೀರ ತರಬೇತಿ ಪಡೆಯುತ್ತಿದ್ದ ಕುಷ್ಟಗಿ ತಾಲೂಕಿನ ಮಡಕೇರಿ ಗ್ರಾಮದ ಯುವಕನೊಬ್ಬ ರಜೆಯ ಮೇಲೆ ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಕಲ್ಯಾಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮಡಕೇರಿ ಗ್ರಾಮದ ಹನಮಪ್ಪ ಮುದಗಲ್ ಅವರ ಪುತ್ರ ಶಿವಪ್ಪ (24) ಮೃತ ಯುವಕ. ನಾಸಿಕ್‌ನ ಆರ್ಮಿ ತರಬೇತಿ ಶಿಬಿರದಲ್ಲಿ ಅಗ್ನಿವೀರ ತರಬೇತಿ ಪಡೆಯುತ್ತಿದ್ದ ಶಿವಪ್ಪ, ಐದು ದಿನಗಳ ಕಾಲ ರಜೆ ಪಡೆದುಕೊಂಡು ಸ್ವಗ್ರಾಮಕ್ಕೆ ಆಗಮಿಸು ವೇಳೆಯಲ್ಲಿ ಘಟನೆ ಜರುಗಿದೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅವರು ಕಲ್ಯಾಣ ರೈಲ್ವೆ ನಿಲ್ದಾಣದಲ್ಲಿ ಇಳಿದ ಬಳಿಕ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಲು ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ರೈಲು ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ತಿಂಗಳ ಹಿಂದೆ ಶಿವಪ್ಪ ಸೇನಾ ಸೇವೆಗೆ ಆಯ್ಕೆಯಾಗಿದ್ದು, ಮೂರು ತಿಂಗಳಿನಿಂದ ತರಬೇತಿಯಲ್ಲಿದ್ದ. ಈ ಸಂದರ್ಭದಲ್ಲಿ ಸಂಭವಿಸಿದ ಈ ದುರಂತ ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ. ದೇಶಸೇವೆಯ ಕನಸು ಹೊತ್ತು ತರಬೇತಿ ಪಡೆಯುತ್ತಿದ್ದ ಯುವಕನ ಬದುಕು ದುರಂತ ಅಂತ್ಯ ಕಂಡಿರುವುದು ಗ್ರಾಮದಲ್ಲಿ ಶೋಕದ ವಾತಾವರಣಕ್ಕೆ ಕಾರಣವಾಗಿದೆ.

ಮೃತದೇಹವು ಶನಿವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಮಡಕೇರಿ ಗ್ರಾಮಕ್ಕೆ ತಲುಪುವ ನಿರೀಕ್ಷೆಯಿದೆ. ಬಳಿಕ ಶನಿವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ.