ಬೆಳ್ತಂಗಡಿ: ಶಿಶಿಲ ಗ್ರಾಮದ ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ.
ಕಳೆದ ಎರಡು–ಮೂರು ದಿನಗಳಿಂದ ತನಿಯಪ್ಪ ಗೌಡ ಅವರು ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹುಡುಕಾಟ ನಡೆಸಿದಾಗ, ಮನೆಯೊಳಗೆ ತನಿಯಪ್ಪ ಗೌಡ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇತ್ತೀಚೆಗೆ ಅವರ ಪತ್ನಿ ಚಿನ್ನಮ್ಮ ಅವರ ಮೃತದೇಹ ಪಕ್ಕದ ಜಮೀನಿನ ಕೆರೆಯಲ್ಲಿ ಪತ್ತೆಯಾಗಿತ್ತು. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿರಲಿಲ್ಲ. ಈ ಸಾವಿನ ಬಗ್ಗೆ ಸಂಶಯವಿದೆ ಎಂದು ಚಿನ್ನಮ್ಮ ಅವರ ಸಹೋದರ ಗಂಗಾಧರ ಗೌಡ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಪತಿಯೂ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಎರಡೂ ಘಟನೆಗಳ ನಡುವಿನ ಸಂಬಂಧ ಸೇರಿದಂತೆ ಸಾವಿನ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.






















