SK Home Ad
Home ಸುದ್ದಿ ದೇಶ ಬ್ಯಾಂಕ್ ಮುಷ್ಕರದ ಎಫೆಕ್ಟ್: ಭಾನುವಾರವೂ ತೆರೆಯಲಿದೆ ಶಾಖೆಗಳು!

ಬ್ಯಾಂಕ್ ಮುಷ್ಕರದ ಎಫೆಕ್ಟ್: ಭಾನುವಾರವೂ ತೆರೆಯಲಿದೆ ಶಾಖೆಗಳು!

0
113
ಬ್ಯಾಂಕ್ ಗ್ರಾಹಕರಿಗೆ ಗುಡ್‌ನ್ಯೂಸ್: ಸೆ.27 ಭಾನುವಾರವೂ ಬ್ಯಾಂಕ್‌ಗಳು ಕಾರ್ಯನಿರ್ವಹಣೆ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಸೆಪ್ಟೆಂಬರ್ 28ರಿಂದ 30ರವರೆಗೆ ಪ್ರಸ್ತಾವಿತವಾಗಿರುವ ರಾಷ್ಟ್ರವ್ಯಾಪಿ ಮೂರು ದಿನಗಳ ಬ್ಯಾಂಕ್ ಮುಷ್ಕರದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 27ರ ಭಾನುವಾರ ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಶಾಖೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿವೆ. ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಅನುಮೋದನೆಯೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 28, 29 ಮತ್ತು 30ರಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಬ್ಯಾಂಕ್ ಸಿಬ್ಬಂದಿಗೆ ಐದು ದಿನಗಳ ಕೆಲಸದ ವಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಹಣಕಾಸು ಸಚಿವಾಲಯವು ಮುಷ್ಕರದಿಂದ ಹಿಂದೆ ಸರಿದು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸುವಂತೆ ಬ್ಯಾಂಕ್ ಸಿಬ್ಬಂದಿ ಮತ್ತು ಸಂಘಟನೆಗಳಿಗೆ ಮನವಿ ಮಾಡಿದೆ.

ಈ ಬೆಳವಣಿಗೆಯ ನಡುವೆ ಸೆಪ್ಟೆಂಬರ್ 26 ಶನಿವಾರವಾಗಿದ್ದು, ಅದು ಎರಡನೇ ಶನಿವಾರದ ಬ್ಯಾಂಕ್ ರಜೆಯಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ 27 ಭಾನುವಾರವೂ ಬ್ಯಾಂಕ್‌ಗಳಿಗೆ ರಜೆಯಾಗಬೇಕಿತ್ತು. ಇದರ ಬೆನ್ನಲ್ಲೇ ಸೆ.28ರಿಂದ ಮೂರು ದಿನಗಳ ಮುಷ್ಕರ ನಡೆದರೆ, ಸೆ.26ರಿಂದ 30ರವರೆಗೆ ಸತತ ಐದು ದಿನಗಳ ಕಾಲ ಶಾಖಾ ಮಟ್ಟದ ಬ್ಯಾಂಕಿಂಗ್ ಸೇವೆಗಳು ವ್ಯತ್ಯಯಗೊಳ್ಳುವ ಸಾಧ್ಯತೆ ಇತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಮುಷ್ಕರಕ್ಕೂ ಮುನ್ನವೇ ಬ್ಯಾಂಕಿಂಗ್ ಸೇವೆ ಪಡೆಯಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಭಾನುವಾರ ಶಾಖೆಗಳನ್ನು ತೆರೆಯುವ ಕ್ರಮ ಕೈಗೊಳ್ಳಲಾಗಿದೆ.

ಗ್ರಾಹಕರು ಗಮನಿಸಬೇಕಾದದ್ದು ಏನು? : ಸೆಪ್ಟೆಂಬರ್ 27ರಂದು ಶಾಖಾ ಸೇವೆ ಪಡೆಯಲು ಸಾಧ್ಯವಾಗುವುದರಿಂದ, ಚೆಕ್, ನಗದು, ದಾಖಲೆ ಸಲ್ಲಿಕೆ ಅಥವಾ ಇತರೆ ಶಾಖಾ ಆಧಾರಿತ ಅಗತ್ಯ ಬ್ಯಾಂಕಿಂಗ್ ಕೆಲಸಗಳನ್ನು ಮುಷ್ಕರಕ್ಕೂ ಮುನ್ನ ಪೂರ್ಣಗೊಳಿಸಲು ಗ್ರಾಹಕರಿಗೆ ಅವಕಾಶ ಸಿಗಲಿದೆ. SBI ಸೇರಿದಂತೆ ಹಲವು ಬ್ಯಾಂಕುಗಳು ಈಗಾಗಲೇ ಗ್ರಾಹಕರಿಗೆ ಅಗತ್ಯ ಶಾಖಾ ವ್ಯವಹಾರಗಳನ್ನು ಮುಷ್ಕರಕ್ಕೂ ಮುನ್ನವೇ ಪೂರ್ಣಗೊಳಿಸುವಂತೆ ಸಲಹೆ ನೀಡಿವೆ.

ಮುಷ್ಕರದ ಅವಧಿಯಲ್ಲಿ ಶಾಖಾ ಸೇವೆಗಳು ಪರಿಣಾಮಕ್ಕೆ ಒಳಗಾಗುವ ಸಾಧ್ಯತೆ ಇದ್ದರೂ, ATM, UPI, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಮತ್ತು ಪರ್ಯಾಯ ಬ್ಯಾಂಕಿಂಗ್ ಮಾರ್ಗಗಳು ಲಭ್ಯವಿರುವ ನಿರೀಕ್ಷೆಯಿದೆ. ಹಣಕಾಸು ಸಚಿವಾಲಯವೂ ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಅಗತ್ಯ ಸೇವೆಗಳನ್ನು ಮುಂದುವರಿಸಲು ಮತ್ತು ATMಗಳಲ್ಲಿ ಸಮರ್ಪಕ ನಗದು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಹೀಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಮಾಡಬೇಕಿರುವ ತುರ್ತು ಕೆಲಸಗಳಿದ್ದರೆ ಸೆಪ್ಟೆಂಬರ್ 27ರ ಭಾನುವಾರವನ್ನು ಬಳಸಿಕೊಳ್ಳುವುದು ಗ್ರಾಹಕರಿಗೆ ಪ್ರಮುಖ ಅವಕಾಶವಾಗಲಿದೆ. ಆದರೆ ಸೆ.28ರಿಂದ 30ರವರೆಗಿನ ಮುಷ್ಕರದ ಅಂತಿಮ ಪರಿಸ್ಥಿತಿಯಲ್ಲಿ ಬದಲಾವಣೆಗಳಾದರೆ, ಸಂಬಂಧಪಟ್ಟ ಬ್ಯಾಂಕ್‌ಗಳ ಅಧಿಕೃತ ಸೂಚನೆಗಳನ್ನು ಗಮನಿಸುವುದು ಸೂಕ್ತ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.