ನವದೆಹಲಿ: ದೇಶದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾದ ಆಯುಷ್ಮಾನ್ ಭಾರತ–ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY) ಇದೀಗ ಎಂಟನೇ ವರ್ಷಕ್ಕೆ ಕಾಲಿಟ್ಟಿದೆ. ಯೋಜನೆಯಡಿ ಸೆಪ್ಟೆಂಬರ್ 21, 2026ರ ವೇಳೆಗೆ 48.51 ಕೋಟಿಗೂ ಹೆಚ್ಚು ಜನರು ಆಯುಷ್ಮಾನ್ ಕಾರ್ಡ್ ಹೊಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
AB PM-JAY ಅಡಿಯಲ್ಲಿ ಅರ್ಹ ಕುಟುಂಬಗಳಿಗೆ ಪ್ರತಿ ವರ್ಷ ₹5 ಲಕ್ಷದವರೆಗೆ ನಗದುರಹಿತ ಆಸ್ಪತ್ರೆ ಚಿಕಿತ್ಸಾ ಕವಚ ಒದಗಿಸಲಾಗುತ್ತದೆ. 2026ರ ಆಗಸ್ಟ್ 31ರವರೆಗೆ ದೇಶಾದ್ಯಂತ 38,000ಕ್ಕೂ ಹೆಚ್ಚು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಯೋಜನೆಯಡಿ ನೋಂದಣಿಯಾಗಿದ್ದು, 13.25 ಕೋಟಿ ಆಸ್ಪತ್ರೆ ದಾಖಲಾತಿಗಳಿಗೆ ₹2.03 ಲಕ್ಷ ಕೋಟಿ ಮೌಲ್ಯದ ಚಿಕಿತ್ಸೆ ಅನುಮೋದಿಸಲಾಗಿದೆ.
70 ವರ್ಷ ಮೇಲ್ಪಟ್ಟವರಿಗೂ ವಿಸ್ತರಣೆ : ಯೋಜನೆಯ ಪ್ರಮುಖ ವಿಸ್ತರಣೆಗಳಲ್ಲಿ ಒಂದಾಗಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೂ ಆದಾಯ ಅಥವಾ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಪರಿಗಣಿಸದೆ ಆರೋಗ್ಯ ಕವಚ ಒದಗಿಸಲಾಗಿದೆ. ಈ ವಿಸ್ತರಣೆಯಡಿ ದೇಶದ ಸುಮಾರು 6 ಕೋಟಿ ಹಿರಿಯ ನಾಗರಿಕರು ಒಳಗೊಳ್ಳುತ್ತಾರೆ. 2026ರ ಆಗಸ್ಟ್ ವೇಳೆಗೆ ಹಿರಿಯ ನಾಗರಿಕರಿಗಾಗಿ 1.20 ಕೋಟಿ ಆಯುಷ್ಮಾನ್ ಕಾರ್ಡ್‌ಗಳು/ನೋಂದಣಿಗಳು ನಡೆದಿದ್ದು, 13.84 ಲಕ್ಷಕ್ಕೂ ಹೆಚ್ಚು ಚಿಕಿತ್ಸೆಗಳ ಬಳಕೆಯಾಗಿದೆ ಎಂದು ಕೇಂದ್ರದ ಮಾಹಿತಿ ತಿಳಿಸಿದೆ.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ಕುಟುಂಬಗಳನ್ನೂ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ. 2024ರಲ್ಲಿ ಈ ವಿಸ್ತರಣೆ ಕೈಗೊಳ್ಳಲಾಗಿತ್ತು.
ರಾಜ್ಯದ ಹೊರಗೂ ಚಿಕಿತ್ಸೆ ಪಡೆಯುವ ಅವಕಾಶ : AB PM-JAYನ ಮತ್ತೊಂದು ಪ್ರಮುಖ ಅಂಶ ಇಂಟರ್-ಸ್ಟೇಟ್ ಪೋರ್ಟಬಿಲಿಟಿ. ಅಂದರೆ, ಅರ್ಹ ಫಲಾನುಭವಿಗಳು ತಮ್ಮ ಸ್ವಂತ ರಾಜ್ಯದ ಹೊರಗಿರುವ ಯೋಜನೆಯಡಿ ನೋಂದಾಯಿತ ಆಸ್ಪತ್ರೆಯಲ್ಲಿಯೂ ನಗದುರಹಿತ ಚಿಕಿತ್ಸೆ ಪಡೆಯಬಹುದು.
2026ರ ಜೂನ್ 30ರವರೆಗೆ 29.05 ಲಕ್ಷ ಅಂತರರಾಜ್ಯ ಆಸ್ಪತ್ರೆ ದಾಖಲಾತಿಗಳಿಗೆ ₹8,383.97 ಕೋಟಿ ಮೌಲ್ಯದ ಚಿಕಿತ್ಸೆಯನ್ನು ಅನುಮೋದಿಸಲಾಗಿದೆ. ವಲಸೆ ಕಾರ್ಮಿಕರು, ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಲ್ಲಿ ವಾಸಿಸುವವರು ಹಾಗೂ ಪ್ರಯಾಣಿಸುವ ಫಲಾನುಭವಿಗಳಿಗೆ ಈ ವ್ಯವಸ್ಥೆ ವಿಶೇಷವಾಗಿ ನೆರವಾಗುತ್ತದೆ.
ಡಿಜಿಟಲ್ ಆರೋಗ್ಯ ವ್ಯವಸ್ಥೆಗೂ ವೇಗ : ಆಯುಷ್ಮಾನ್ ಭಾರತ ಯೋಜನೆಯೊಂದಿಗೆ ದೇಶದ ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನೂ ವಿಸ್ತರಿಸಲಾಗುತ್ತಿದೆ. ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ (ABDM) ಅಡಿಯಲ್ಲಿ ಸೆಪ್ಟೆಂಬರ್ 17, 2026ರ ವೇಳೆಗೆ 97.61 ಕೋಟಿಗೂ ಹೆಚ್ಚು ABHA ಐಡಿಗಳು ಸಕ್ರಿಯವಾಗಿದ್ದು, 119.95 ಕೋಟಿಗೂ ಹೆಚ್ಚು ಆರೋಗ್ಯ ದಾಖಲೆಗಳನ್ನು ಅವುಗಳಿಗೆ ಲಿಂಕ್ ಮಾಡಲಾಗಿದೆ. ದೇಶಾದ್ಯಂತ 5.78 ಲಕ್ಷಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳು ಮತ್ತು 11 ಲಕ್ಷಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರು ಡಿಜಿಟಲ್ ವ್ಯವಸ್ಥೆಯಲ್ಲಿ ನೋಂದಣಿಯಾಗಿದ್ದಾರೆ.
ABHA ವ್ಯವಸ್ಥೆಯ ಮೂಲಕ ವ್ಯಕ್ತಿಯ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ, ಅಗತ್ಯವಿದ್ದಾಗ ವಿವಿಧ ಸ್ಥಳಗಳಲ್ಲಿ ಪ್ರವೇಶಿಸುವ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಇದರಿಂದ ರೋಗಿಯ ಆರೋಗ್ಯ ಮಾಹಿತಿಯನ್ನು ಒಂದೇ ಡಿಜಿಟಲ್ ವ್ಯವಸ್ಥೆಯಲ್ಲಿ ನಿರ್ವಹಿಸುವ ಸಾಧ್ಯತೆ ಹೆಚ್ಚುತ್ತಿದೆ.
ಆರೋಗ್ಯ ವೆಚ್ಚದ ಹೊರೆ ಕಡಿಮೆ ಮಾಡುವ ಪ್ರಯತ್ನ : ಕೇಂದ್ರ ಸರ್ಕಾರದ ಪ್ರಕಾರ, AB PM-JAY ಸೇರಿದಂತೆ ಸಾರ್ವಜನಿಕ ಆರೋಗ್ಯ ಯೋಜನೆಗಳ ವಿಸ್ತರಣೆಯಿಂದ ಕುಟುಂಬಗಳ ನೇರ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ. 2022-23ರ ರಾಷ್ಟ್ರೀಯ ಆರೋಗ್ಯ ಖಾತೆಗಳ ಅಂದಾಜಿನ ಪ್ರಕಾರ, ಒಟ್ಟು ಆರೋಗ್ಯ ವೆಚ್ಚದಲ್ಲಿ ಕುಟುಂಬಗಳು ನೇರವಾಗಿ ಭರಿಸುವ ವೆಚ್ಚದ ಪಾಲು 2014-15ರ 62.6%ರಿಂದ 2022-23ರಲ್ಲಿ 43.4%ಕ್ಕೆ ಇಳಿದಿದೆ ಎಂದು ಸರ್ಕಾರ ತಿಳಿಸಿದೆ.
ಇದೀಗ AB PM-JAY, ಆಯುಷ್ಮಾನ್ ಆರೋಗ್ಯ ಮಂದಿರಗಳು, ABDM ಹಾಗೂ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಮೂಲಕ ದೇಶದ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಸಮಗ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ. 2026-27ರ ಕೇಂದ್ರ ಬಜೆಟ್‌ನಲ್ಲಿ PM-JAYಗೆ ₹9,500 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ.
ಎಂಟನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಯೋಜನೆಯ ಮುಂದಿನ ಹಂತದಲ್ಲಿ ವ್ಯಾಪ್ತಿಯನ್ನು ಬಲಪಡಿಸುವುದು, ಆಸ್ಪತ್ರೆಗಳ ಜಾಲವನ್ನು ವಿಸ್ತರಿಸುವುದು, ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಫಲಾನುಭವಿಗಳಿಗೆ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವುದಕ್ಕೆ ಒತ್ತು ನೀಡಲಾಗುತ್ತಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















