SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ‘ಹೈರಾಕ್ಸ್’ ಫಿಟ್ನೆಸ್ ಸ್ಪರ್ಧೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಪರೂಪದ ಸಾಧನೆ

‘ಹೈರಾಕ್ಸ್’ ಫಿಟ್ನೆಸ್ ಸ್ಪರ್ಧೆ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಪರೂಪದ ಸಾಧನೆ

0
58

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ಮಂಗಳೂರಿನ ಪ್ರಸಿದ್ಧ ಫಿಟ್ನೆಸ್ ತರಬೇತುದಾರ, ಅಂತಾರಾಷ್ಟ್ರೀಯ ಪವರ್‌ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಜೋಡಿ, ಮುಂಬೈನಲ್ಲಿ ನಡೆದ ವಿಶ್ವಪ್ರಸಿದ್ಧ ‘ಹೈರಾಕ್ಸ್’ ಜಾಗತಿಕ ಫಿಟ್ನೆಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮುಂಬೈನ ಗೋರೆಗಾಂವ್‌ನ ನೆಸ್ಕೋ ಸೆಂಟರ್‌ನಲ್ಲಿ ಸೆ. 17ರಿಂದ 20ರವರೆಗೆ ನಡೆದ ಸ್ಪರ್ಧೆಯ ಪುರುಷರ ಡಬಲ್ಸ್ ವಿಭಾಗದಲ್ಲಿ ಈ ಜೋಡಿ ಸ್ಪರ್ಧಿಸಿತ್ತು. ಒಟ್ಟು 8 ಕಿ.ಮೀ. ಓಟದೊಂದಿಗೆ 8 ಕಠಿಣ ಫಂಕ್ಷನಲ್ ವ್ಯಾಯಾಮಗಳನ್ನು ಒಳಗೊಂಡ ರೇಸ್ ಅನ್ನು 1 ಗಂಟೆ 39 ನಿಮಿಷ 9 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದೆ.

ಜರ್ಮನಿಯಲ್ಲಿ 2017ರಲ್ಲಿ ಆರಂಭವಾದ ‘ಹೈರಾಕ್ಸ್’ ವಿಶ್ವದ ಪ್ರಮುಖ ಒಳಾಂಗಣ ಫಿಟ್ನೆಸ್ ಸ್ಪರ್ಧೆಗಳಲ್ಲಿ ಒಂದಾಗಿದೆ. ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ, ಶಕ್ತಿ, ಸ್ಟ್ಯಾಮಿನಾ, ಸಹಿಷ್ಣುತೆ ಹಾಗೂ ತಂಡದ ಸಮನ್ವಯವನ್ನು ಪರೀಕ್ಷಿಸುವುದು ಇದರ ವಿಶೇಷತೆ.

ಸ್ಪರ್ಧೆಯಲ್ಲಿ ಪ್ರತಿ 1 ಕಿ.ಮೀ. ಓಟದ ಬಳಿಕ ನಿಗದಿತ ಫಂಕ್ಷನಲ್ ವ್ಯಾಯಾಮವನ್ನು ಪೂರ್ಣಗೊಳಿಸಬೇಕು. ಸ್ಕೀಯಿಂಗ್, ಸ್ಲೆಡ್ ಪುಶ್, ಸ್ಲೆಡ್ ಪುಲ್, ಬರ್ಪೀ ಬ್ರಾಡ್ ಜಂಪ್ಸ್, ರೋಯಿಂಗ್, ಫಾರ್ಮರ್ಸ್ ಕ್ಯಾರಿ, ಸ್ಯಾಂಡ್‌ಬ್ಯಾಗ್ ಲಂಜಸ್ ಹಾಗೂ ವಾಲ್ ಬಾಲ್ಸ್ ಸೇರಿದಂತೆ 8 ಕಠಿಣ ವ್ಯಾಯಾಮಗಳನ್ನು ಸ್ಪರ್ಧಿಗಳು ಪೂರ್ಣಗೊಳಿಸಬೇಕಾಗುತ್ತದೆ.

ಡಬಲ್ಸ್ ವಿಭಾಗದಲ್ಲಿ ಇಬ್ಬರೂ ಸ್ಪರ್ಧಿಗಳು 8 ಕಿ.ಮೀ. ಓಟವನ್ನು ಒಟ್ಟಿಗೆ ಪೂರ್ಣಗೊಳಿಸುವ ಜೊತೆಗೆ, ವ್ಯಾಯಾಮಗಳಲ್ಲಿನ ತೂಕ ಹಾಗೂ ಶ್ರಮವನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶವಿರುತ್ತದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಈ ಫಿಟ್ನೆಸ್ ಸಾಧನೆಗೆ ಕರಾವಳಿ ಭಾಗದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.