ಅಜೇಯ್ ರಾವ್ ಹಾಗೂ ಬೃಂದಾ ಆಚಾರ್ಯ ನಟನೆಯ “ಪಾರ್ಟ್ನರ್” ಚಿತ್ರ ಬಿಡುಗಡೆಗೆ ಅಣಿಯಾಗುತ್ತಿದೆ. ಇತ್ತೀಚೆಗೆ ಸೆನ್ಸಾರ್ ಪ್ರಕ್ರಿಯೆ ಮುಗಿಸಿರುವ ಚಿತ್ರತಂಡಕ್ಕೆ ಯು/ಎ ಸರ್ಟಿಫಿಕೆಟ್ ದೊರಕಿದೆ. ಯಾವುದೇ ಕಟ್ ಹಾಗೂ ಮ್ಯೂಟ್ ಸೂಚಿಸದೇ ಅರ್ಹತಾ ಪತ್ರ ನೀಡಿರುವುದು ವಿಶೇಷ.
ಈಗಾಗಲೇ ಕುನಾಲ್ ಗಾಂಜಾವಾಲ ಹಾಡಿರುವ ‘ಅಮೋರ’ ಹಾಡು ಸಖತ್ ಕಮಾಲ್ ಮಾಡಿದ್ದು, ಬರೋಬ್ಬರಿ ಮೂರು ಮಿಲಿಯನ್‌ಗೂ ಅಧಿಕ ಹಿಟ್ಸ್ ದಾಖಲಿಸಿ ಕೇಳುಗರ ಮನ ಗೆದ್ದಿದೆ. ಇದೇ ಖುಷಿಯಲ್ಲಿ ಮತ್ತೊಂದು ಹಾಡನ್ನು ಹರಿಬಿಡುವ ಆಲೋಚನೆ ಚಿತ್ರತಂಡಕ್ಕಿದೆ.
ವಿಶೇಷವೆಂದರೆ ಈ ಚಿತ್ರದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದ್ದು, ದೊಡ್ಡ ಮೊತ್ತಕ್ಕೆ ಬಿಕರಿಯಾಗಿರುವ ಸಂತಸದಲ್ಲಿದೆ ಚಿತ್ರತಂಡ. ಅಜೇಯ್‌ರಾವ್ ಈವರೆಗೂ ನಟಿಸಿರುವ ಸಿನಿಮಾಗಳ ದಾಖಲೆಯನ್ನು ‘ಪಾರ್ಟ್ನರ್’ ಮುರಿದಿರುವುದು ಮತ್ತೊಂದು ವಿಶೇಷ.
ಈ ಹಿಂದೆ ಮಳೆ, ಧೈರ್ಯಂ, ದಿಲ್ ಪಸಂದ್ ಸಿನಿಮಾಗಳನ್ನು ನಿರ್ದೇಶಿಸಿರುವ ಶಿವತೇಜಸ್, ಇದೀಗ ‘ಪಾರ್ಟ್ನರ್’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಜೇಯ್ ರಾವ್ ಹಾಗೂ ಶಿವತೇಜಸ್ ಜೋಡಿಯ ಮೂರನೇ ಸಿನಿಮಾವಿದು. ಈ ಮೊದಲು ಧೈರ್ಯಂ, ದಿಲ್ ಪಸಂದ್ ಸಿನಿಮಾಗಳಿಗೆ ಅಜೇಯ್ ರಾವ್‌ಗೆ ಆಕ್ಷನ್ ಕಟ್ ಹೇಳಿದ್ದ ಶಿವತೇಜಸ್, ಇದೀಗ ‘ಪಾರ್ಟ್ನರ್’ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಈ ಚಿತ್ರವನ್ನು ಹೆಚ್.ಪಿ.ಆರ್ ಎಂಟರ್‌ಪ್ರೈಸಸ್ ಬ್ಯಾನರ್ ಅಡಿ ಹರೀಶ್ ದೇವಿತಂದ್ರೆ ನಿರ್ಮಿಸಿದ್ದಾರೆ.
‘ಈವರೆಗೂ ಎಲ್ಲವೂ ಪಾಸಿಟಿವ್ ಆಗಿಯೇ ಹೋಗುತ್ತಿದೆ. ಅಮೋರ ಹಾಡಿಗೆ ಸಿಕ್ಕ ರೆಸ್ಪಾನ್ಸ್ ಅದ್ಭುತ. ಇನ್ನು ಇತ್ತೀಚೆಗೆ ಸಿನಿಮಾ ನೋಡಿದ ಸೆನ್ಸಾರ್ ಮಮಡಳಿಯಿಂದ ಪ್ರಶಂಸೆ ದೊರೆತಿದೆ. ಆಡಿಯೋ ರೈಟ್ಸ್ ಸಹ ಒಳ್ಳೆ ಬೆಲೆಗೆ ಮಾರಾಟವಾಗಿದೆ. ಬಿಡುಗಡೆಗೂ ಮುನ್ನವೇ ಸ್ಯಾಟಲೈಟ್, ಓಟಿಟಿ ಕುರಿತು ಮಾತುಕತೆಯಾಗುತ್ತಿದೆ… ಹೀಗೆ ಎಲ್ಲಾ ವಿಷಯದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ಹರೀಶ್ ದೇವಿತಂದ್ರೆ.
ಇನ್ನು ಸಿನಿಮಾ ಕುರಿತು ಮಾತನಾಡುವ ನಿರ್ದೇಶಕ ಶಿವತೇಜಸ್, ‘ಈಗಿನ ಜನರೇಶನ್‌ನಲ್ಲಿ ಲವ್, ಬ್ರೇಕಪ್, ಲಿವಿಂಗ್ ಟುಗೆದರ್ ಇವೆಲ್ಲವೂ ಕಾಮನ್. ಪಾರ್ಟ್ನರ್ ಎಂದರೆ ಜೀವನಪೂರ್ತಿ ನಂಬಿಕೆ ಇಟ್ಟುಕೊಂಡು ಜತೆಗಿರುವಂಥ ಜೀವನ ಸಂಗಾತಿ. ನಮ್ಮ ಮೇಲೆ ನಂಬಿಕೆ ಇರುವ ಪಾರ್ಟ್ನರ್ ಜೊತೆಗಿದ್ದರೆ ಜೀವನ ಸುಸೂತ್ರ’ ಎಂದು ಈ ಚಿತ್ರದ ಮೂಲಕ ಮನರಂಜನೆಯ ಅಂಶಗಳೊಂದಿಗೆ ಹೇಳಿದ್ದೇನೆ’ ಎನ್ನುತ್ತಾರೆ.
ರಂಗಾಯಣ ರಘು, ಗೌರವ್ ಶೆಟ್ಟಿ, ಮನೋಹರ್ ಗೌಡ, ಚಿತ್ಕಲಾ, ಗಿರಿ ಶಿವಣ್ಣ, ಸುಷ್ಮಿತಾ ಗೌಡ, ಅರವಿಂದ ರಾವ್, ಶ್ರೀಭವ್ಯ ಹಾಗೂ ಮಧು ಮತ್ತಿತರರು ಚಿತ್ರದ ತಾರಾಗಣದಲ್ಲಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿರುವ ಈ ಸಿನಿಮಾಕ್ಕೆ ಸುಜ್ಞಾನ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.





















