SK Home Ad
Home ನಮ್ಮ ಜಿಲ್ಲೆ ಶಿವಮೊಗ್ಗ ಕಸ್ತೂರಿರಂಗನ್ ವರದಿ ಜಾರಿ ಬೇಡ: ಜನಸಾಮಾನ್ಯರು, ತಜ್ಞರು, ಜನಪ್ರತಿನಿಧಿಗಳ ಒಕ್ಕೊರಲ ದನಿ

ಕಸ್ತೂರಿರಂಗನ್ ವರದಿ ಜಾರಿ ಬೇಡ: ಜನಸಾಮಾನ್ಯರು, ತಜ್ಞರು, ಜನಪ್ರತಿನಿಧಿಗಳ ಒಕ್ಕೊರಲ ದನಿ

0
14

ಶಿವಮೊಗ್ಗ: ಸಿಎಂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿ ವಿಚಾರವಾಗಿ ಶಿವಮೊಗ್ಗದ ತೀರ್ಥಹಳ್ಳಿಗೆ ಶನಿವಾರ ನಡೆದ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕಸ್ತೂರಿ ರಂಗನ್ ವರದಿ ಬೇಡ ಎನ್ನುವ ಒಕ್ಕೊರಲ ದನಿ ವ್ಯಕ್ತವಾಯಿತು.

“ಕರ್ನಾಟಕ ಅರಣ್ಯ ಕಾಯ್ದೆ 1963, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, 1980 ಕಾಯ್ದೆಗಳು ಈಗಾಗಲೇ ಜಾರಿಯಲ್ಲಿವೆ. ಕಂದಾಯ ಭೂಮಿಗೆ ಸಂಬಂಧಿಸಿದಂತೆ ಅನೇಕ ಕಾಯ್ದೆಗಳಿಂದ ಮಲೆನಾಡಿಗರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕಸ್ತೂರಿ ರಂಗನ್ ವರದಿ ಜಾರಿಯಾದರೆ ನಮ್ಮ ಬದುಕು ಬೀದಿಗೆ ಬೀಳಲಿದೆ” ಎಂದು ಶಿವಮೊಗ್ಗ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ ತಮ್ಮ ಅಭಿಪ್ರಾಯ ತಿಳಿಸಿದರು.

“ವರದಿಯಲ್ಲಿ ಆಸ್ತಿ ಹಕ್ಕಿಗೆ ತೊಂದರೆಯಿಲ್ಲ ಎಂದಿದ್ದಾರೆ. ಆದರೆ ಬಗರ್ ಹುಕುಂ ಸೇರಿದಂತೆ ಇತರೇ ಭೂಮಿ ಹೊಂದಿದವರಿಗೆ ತೊಂದರೆಯಾಗಲಿದೆ. ಹೀಗೆ ಅನೇಕ ವಿಚಾರಗಳ ಬಗ್ಗೆ ಇಲ್ಲಿ ಸ್ಪಷ್ಟೆತೆಯಿಲ್ಲ” ಎಂದು ಹೇಳಿದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, “ನಾವು ಬಗರ್ ಹುಕುಂ, ಉಳುವವನೇ ಭೂಮಿ ಮೂಲಕ ಜನರನ್ನ ಕಾಪಾಡಿದ್ದೇವೆ. ಆದರೆ ಈಗ ಭೂಮಿ ಹೋಗುವ ಭಯವಿದೆ. ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಮಾಡಬೇಕು” ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, “ಅರಣ್ಯ ‌ಇಲಾಖೆಗಿಂತ ಮಲೆನಾಡಿನ ಜನ ಅರಣ್ಯ ಉಳಿಸಿದ್ದಾರೆ. ನಾವು ಈ ವರದಿ ಒಪ್ಪಲ್ಲ ಎನ್ನುವುದರ ಜೊತೆಗೆ ಇಲ್ಲಿರುವ ರೈತರ ಭೂಮಿಯ ಸಂಪೂರ್ಣ ಮಾಹಿತಿ ಕೇಂದ್ರಕ್ಕೆ ನೀಡಬೇಕು. ಸರ್ವೇ ನಂಬರ್, ವಾಸದ ಜಾಗ ಸೇರಿದಂತೆ ಪ್ರತಿ ಮಾಹಿತಿಯೂ ನೀಡಬೇಕು” ಎಂದರು.

ಮಾಜಿ‌ ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿ, “ಸಂಸತ್ತೇ ಇಡೀ ದೇಶದಲ್ಲಿ ಸುಪ್ರೀಂ. ಯಾವ ಸುಪ್ರೀಂಕೋರ್ಟ್ ಕೂಡ ದೊಡ್ಡದಲ್ಲ. ಅದು ವಿಮರ್ಶೆ, ಟೀಕೆ, ಸಲಹೆ ನೀಡಬಹುದು. ಆದರೆ ಜನರನ್ನು ಉಳಿಸುವುದು ಸಂಸತ್. ಆದ ಕಾರಣ ಕರ್ನಾಟಕದ ಎಲ್ಲಾ ಸಂಸದರು ಕಸ್ತೂರಿ ರಂಗನ್ ವರದಿ ವಿರುದ್ಧ ನಿಲ್ಲಬೇಕು” ಎಂದು ಸಲಹೆ ನೀಡಿದರು.

ಕೃಷಿ ತಜ್ಞ ಕಮ್ಮರಡಿ ಪ್ರಕಾಶ್ ಅವರು ಮಾತನಾಡಿ, “ಕಸ್ತೂರಿ ರಂಗನ್ ವಿಚಾರವಾಗಿ ಮೂರು ದಿನಗಳ ವಿಶೇಷ ಅಧಿವೇಶನ ಕರೆದಿರುವುದು ಅತ್ಯಂತ ಶ್ಲಾಘನೀಯ. ಪಶ್ಚಿಮಘಟ್ಟ ಹೊಂದಿರುವ ಆರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸೇರಿಸಿ ಒಂದು ಅಭಿಪ್ರಾಯ ಮೂಡಿಸಬೇಕು. ಬಡ ರೈತರನ್ನು ಉಳಿಸೋಣ” ಎಂದರು.

ರೈತ ಮುಖಂಡ ರಾಜೇಂದ್ರ ಕಮ್ಮಳಿಗೆರೆ ಮಾತನಾಡಿ, “ಕಸ್ತೂರಿ ರಂಗನ್ ವರದಿ ಆಗಿರುವುದು ವಿದೇಶಿ ದುಡ್ಡಿನಿಂದ. ಇದು ಜನ ವಿರೋಧಿ ಅರಣ್ಯ ಕಾಯ್ದೆಯಾಗಿದೆ. ಇದರಿಂದ ಪರಿಸರ ಸಂರಕ್ಷಣೆಯಾಗುವುದಿಲ್ಲ. ರಾಜ್ಯ ಸರ್ಕಾರದ ಜೊತೆ ನಾವು ನಿಲ್ಲುತ್ತೇವೆ.‌ ಕೇಂದ್ರ ಸರ್ಕಾರಕ್ಕೆ ಪ್ರಬಲ ಸಂದೇಶ ನೀಡಿ” ಎಂದರು.

“ಕೇಂದ್ರ ಸಚಿವರಾಗಿದ್ದ ಭೂಪೇಂದ್ರ ಯಾದವ್ ಅವರ ಬಳಿ ಈ ವರದಿ ಜಾರಿಯಾದರೆ ಪಶ್ಚಿಮ ಘಟ್ಟದ ಹಳ್ಳಿಗಳಲ್ಲಿ ರಕ್ತಕ್ರಾಂತಿಯಾಗಲಿದೆ ಎಂದಿದ್ದೇ” ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, “ಡಿ‌.ಕೆ. ಶಿವಕುಮಾರ್ ಅವರು ನಮ್ಮ ಜಿಲ್ಲೆಗೆ ಬಂದ ನಂತರ ನಮ್ಮ ಆತಂಕ ದೂರವಾಗಿದೆ. ಏಕೆಂದರೆ ಅವರು ನಮ್ಮ ಪರವಾಗಿ ನಿಲ್ಲುತ್ತಾರೆ ಎನ್ನುವ ಭರವಸೆಯಿದೆ. ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರ ಮನಸು ಮಾಡಿದರೆ ಬದಲಾವಣೆ ಮಾಡುವ ಅಥವಾ ಕೈ ಬಿಡುವ ಮನಸು ಮಾಡಬಹುದು ಎಂದು ಹಸಿರು ನ್ಯಾಯ ಮಂಡಳಿ ಹೇಳಿದೆ. ಆದರೆ ಅನೇಕರು ವರದಿ ಓದದೇ ಈಗಿನ ಪರಿಸ್ಥಿತಿಗೆ ಬಂದಿದ್ದೇವೆ” ಎಂದರು.

“ಶಿವಕುಮಾರ್ ಎಂದರೆ ಕಠೋರ ಎನ್ನುವ ಭಾವನೆ ಜನರಲ್ಲಿತ್ತು ಆದರೆ ಅವರು ಜನರ ನಡುವೆ ಬೆರೆಯುವುದು ನೋಡಿ ಅವರ ಸರಳತೆ ನಮಗೆಲ್ಲಾ ಅರ್ಥವಾಗಿದೆ. ಅಭಿಪ್ರಾಯ ಬದಲಾವಣೆಯಾಗಿದೆ” ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, “ಕಾಡುಕೋಣ, ಆನೆ, ಕೋತಿ, ಕೊಳೆರೋಗ, ಎಲೆಚುಕ್ಕೆ ರೋಗ ಜೊತೆಗೆ ಈ ಕಸ್ತೂರಿ ರಂಗನ್ ವರದಿ. ನಮ್ಮ ಭಾಗದ 457 ಹಳ್ಳಿಗಳು ಈ ವರದಿಯಲ್ಲಿ ಸೇರಿಕೊಂಡಿವೆ. ಜನರ ಆತಂಕವನ್ನು ಎಲ್ಲರೂ ಸೇರಿ ದೂರ ಮಾಡೋಣ” ಎಂದರು‌.