ವಿಲಾಸ ಜೋಶಿ
ಬೆಳಗಾವಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ಮುಗಿಸಿ ತೆರಳಿದ್ದಾರೆ. ದಾಖಲೆ, ಹಣಕಾಸು ವ್ಯವಹಾರ ಹಾಗೂ ವಿದೇಶಿ ಹೂಡಿಕೆಯ ಕುರಿತ ತನಿಖೆ ತನ್ನ ಹಾದಿಯಲ್ಲಿ ಸಾಗುತ್ತಿದೆ. ಆದರೆ ದಾಳಿಯ ನಂತರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎತ್ತಿರುವ ಒಂದೇ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ನಮ್ಮ ಬಗ್ಗೆ ಇಡಿಗೆ ದೂರು ಕೊಟ್ಟವರು ಯಾರು? ನಮ್ಮವರೋ, ಹೊರಗಿನವರೋ ಎಂಬುದನ್ನು ಹುಡುಕುತ್ತಿದ್ದೇವೆ. ಅವರು ನಮಗೆ ಸಿಗಬೇಕು; ಪತ್ತೆಹಚ್ಚುತ್ತೇವೆ ಎಂದು.' ಸತೀಶ್ ಅವರ ಈ ಹೇಳಿಕೆ ಸಾಮಾನ್ಯ ಪ್ರತಿಕ್ರಿಯೆಯಂತೆ ಕಾಣುತ್ತಿಲ್ಲ. ವಿಶೇಷವಾಗಿ, ಅವರು ಬಳಸಿದನಮ್ಮವರು’ ಎಂಬ ಪದ ಕಾಂಗ್ರೆಸ್ನ ಒಳವಲಯದಲ್ಲೇ ಅನುಮಾನದ ಅಲೆ ಎಬ್ಬಿಸಿದೆ.
ದೂರು ನೀಡಿದವರು ರಾಜಕೀಯ ಎದುರಾಳಿಗಳೇ? ಸ್ವಪಕ್ಷದೊಳಗಿನ ವಿರೋಧಿಗಳೇ? ಬೆಳಗಾವಿ ರಾಜಕಾರಣದಲ್ಲಿ ಸತೀಶ್ ಅವರ ಬೆಳವಣಿಗೆ ಸಹಿಸದವರೇ? ಅಥವಾ ಅವರ ಆಪ್ತ ವಲಯದಲ್ಲಿದ್ದವರೇ? ಎಂಬ ಪ್ರಶ್ನೆಗಳು ಒಂದರ ಹಿಂದೆ ಒಂದರಂತೆ ಎದ್ದಿವೆ.
ಸತೀಶ್ ಹೇಳಿಕೆಯಲ್ಲಿನ ಹೊರಗಿನವರು' ಎಂಬ ಪದವನ್ನು ರಾಜಕೀಯ ಎದುರಾಳಿಗಳಿಗೆ ಅನ್ವಯಿಸುವುದು ಸುಲಭ. ಆದರೆನಮ್ಮವರು’ ಎಂಬ ಪದದ ವ್ಯಾಪ್ತಿ ದೊಡ್ಡದು. ಅದು ಪಕ್ಷದವರನ್ನೇ ಸೂಚಿಸುತ್ತದೆಯೇ? ಆಪ್ತವಲಯದಲ್ಲಿರುವ ಯಾರನ್ನಾದರೂ ಉದ್ದೇಶಿಸಿದೆಯೇ? ಇಲ್ಲವೇ ಉದ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಹತ್ತಿರದಲ್ಲಿದ್ದವರ ಬಗ್ಗೆಯೂ ಅನುಮಾನವಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಸತೀಶ್ ಜಾರಕಿಹೊಳಿ ಈಗ ಬೆಳಗಾವಿ ಜಿಲ್ಲೆಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಅಹಿಂದ ವರ್ಗಗಳಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೆಂಬಲಿಗರ ಜಾಲ ವಿಸ್ತರಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಪ್ರಮುಖ ಖಾತೆ ನಿರ್ವಹಿಸುತ್ತಿರುವುದರ ಜೊತೆಗೆ, ಪಕ್ಷದೊಳಗಿನ ಪ್ರಭಾವಿ ಶಕ್ತಿಕೇಂದ್ರವಾಗಿಯೂ ಗುರುತಿಸಿಕೊಂಡಿದ್ದಾರೆ.
ದೂರುದಾರರ ಗುರುತು ಬಹಿರಂಗವಾದರೆ ಎರಡು ಪ್ರಮುಖ ರಾಜಕೀಯ ಸಾಧ್ಯತೆಗಳು ಎದುರಾಗಬಹುದು. ದೂರು ನೀಡಿದವರು ಹೊರಗಿನ ರಾಜಕೀಯ ಎದುರಾಳಿಗಳಾಗಿದ್ದರೆ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಎಂಬ ಕಾಂಗ್ರೆಸ್ನ ಆರೋಪಕ್ಕೆ ಮತ್ತಷ್ಟು ಬಲ ಸಿಗಬಹುದು. ಬಿಜೆಪಿ-ಕಾಂಗ್ರೆಸ್ ನಡುವೆ ಹೊಸ ಸಂಘರ್ಷಕ್ಕೂ ಇದು ಕಾರಣವಾಗಬಹುದು.
ಒಂದು ವೇಳೆ ದೂರು ನೀಡಿದವರು ಕಾಂಗ್ರೆಸ್ನೊಳಗಿನವರೇ ಎಂಬುದು ಗೊತ್ತಾದರೆ, ಅದರ ಪರಿಣಾಮ ಇನ್ನಷ್ಟು ಗಂಭೀರವಾಗಬಹುದು. ಪಕ್ಷದೊಳಗಿನ ನಾಯಕತ್ವದ ಪೈಪೋಟಿ, ಬೆಳಗಾವಿ ಜಿಲ್ಲೆಯ ಹಿಡಿತ ಮತ್ತು ಭವಿಷ್ಯದ ಅಧಿಕಾರದ ಲೆಕ್ಕಾಚಾರಗಳು ಬಹಿರಂಗ ಸಮರವಾಗಿ ಪರಿವರ್ತನೆಯಾಗುವ ಸಾಧ್ಯತೆ ತಳ್ಳಿಹಾಕಲಾಗದು. ಆ ಕಾರಣಕ್ಕಾಗಿಯೇ, `ದೂರು ಕೊಟ್ಟವರು ಯಾರು?’ ಎಂಬ ಪ್ರಶ್ನೆ ಈಗ ತನಿಖೆಗಿಂತಲೂ ದೊಡ್ಡ ರಾಜಕೀಯ ಪ್ರಶ್ನೆಯಾಗಿ ರೂಪುಗೊಂಡಿದೆ.
ದೂರು ಮಾತ್ರವೇ ದಾಳಿಗೆ ಕಾರಣವೇ?: ಇಡಿ ತನಿಖೆಯು ಕೇವಲ ವ್ಯಕ್ತಿಯೊಬ್ಬರು ಸಲ್ಲಿಸಿದ ದೂರಿನ ಆಧಾರದಲ್ಲೇ ನಡೆಯುತ್ತದೆ ಎಂದು ನೇರವಾಗಿ ನಿರ್ಧರಿಸಲಾಗದು. ತನಿಖಾ ಸಂಸ್ಥೆಗಳು ಪ್ರಾಥಮಿಕ ಮಾಹಿತಿ, ಬ್ಯಾಂಕ್ ವ್ಯವಹಾರಗಳು, ಹಣ ವರ್ಗಾವಣೆ ದಾಖಲೆಗಳು ಇತರ ಸಂಸ್ಥೆಗಳಿಂದ ದೊರೆತ ಮಾಹಿತಿ ಪರಿಶೀಲಿಸಬಹುದು. ಸತೀಶ್ ಜಾರಕಿಹೊಳಿ ಅವರೇ ಈ ಶೋಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ `ಫೆಮಾ’ ನಿಯಮಗಳ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದೆ ಎಂದು ಹೇಳಿದ್ದರು. ಹೀಗಾಗಿ, ದೂರುದಾರರು ಯಾರು ಎಂಬುದನ್ನು ಇಡಿ ಅಧಿಕೃತವಾಗಿ ಬಹಿರಂಗಪಡಿಸುವವರೆಗೆ ಅಥವಾ ಅದಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ ದಾಖಲೆಗಳು ಹೊರಬರುವವರೆಗೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಮಾತುಗಳೆಲ್ಲ ಅನುಮಾನಗಳಾಗಿಯೇ ಉಳಿಯಲಿವೆ.
ದೂರುದಾರರಿಗಾಗಿ ಶೋಧ ಶುರು: ಇಡಿ ಅಧಿಕಾರಿಗಳ ಶೋಧ ಒಂದು ಹಂತಕ್ಕೆ ಮುಗಿದಿರಬಹುದು. ಆದರೆ ಸತೀಶ್ ಪಾಳಯದಲ್ಲಿ ಈಗ ಮತ್ತೊಂದು ಶೋಧ ಆರಂಭವಾಗಿದೆ, ಅದು ದೂರುದಾರರಿಗಾಗಿ!. `ಅವರು ನಮಗೆ ಸಿಗಬೇಕು’ ಎಂಬ ಮಾತಿನಲ್ಲಿ ಕುತೂಹಲವೂ ಇದೆ. ಎಚ್ಚರಿಕೆಯ ಧ್ವನಿಯೂ ಇದೆ.





















