SK Home Ad
Home ಸುದ್ದಿ ದೇಶ ‘ನೀವೇ ಯೋಚಿಸಿ…’; ಜಾರಕಿಹೊಳಿ ಇ.ಡಿ. ದಾಳಿ ಬಗ್ಗೆ ಮಲ್ಯ ಪೋಸ್ಟ್ ವೈರಲ್

‘ನೀವೇ ಯೋಚಿಸಿ…’; ಜಾರಕಿಹೊಳಿ ಇ.ಡಿ. ದಾಳಿ ಬಗ್ಗೆ ಮಲ್ಯ ಪೋಸ್ಟ್ ವೈರಲ್

0
27

ಹುಬ್ಬಳ್ಳಿ: ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿಯನ್ನು ಉದ್ಯಮಿ ಹಾಗೂ ಮದ್ಯದ ದೊರೆ ವಿಜಯ ಮಲ್ಯ ಖಂಡಿಸಿದ್ದಾರೆ.

ಈ ಕುರಿತು ಶನಿವಾರ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ವಿಜಯ ಮಲ್ಯ, ಇ.ಡಿ. ದಾಳಿಯು ಸತೀಶ್ ಜಾರಕಿಹೊಳಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.

‘ಇದು ಜಾರಕಿಹೊಳಿ ಅವರ ವ್ಯಕ್ತಿತ್ವದ ಹರಣ. ಇಂತಹ ಪದ್ಧತಿ ಬೇರೆ ಯಾವುದೇ ದೇಶದಲ್ಲೂ ನಡೆಯುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ವಿಚಾರಣೆಯೂ ಇಲ್ಲ, ಆರೋಪಪಟ್ಟಿಯೂ ಇಲ್ಲ. ಆದರೂ ದಾಳಿ ನಡೆಸಲಾಗಿದೆ. ಇಂತಹದ್ದು ಬೇರೆ ಯಾವುದೇ ದೇಶದಲ್ಲೂ ನಡೆಯುವುದಿಲ್ಲ. ಇ.ಡಿ. ಈ ಬಗ್ಗೆ ಹೆಮ್ಮೆಪಡುತ್ತಿರಬಹುದು. ದಯವಿಟ್ಟು ನೀವೇ ಯೋಚಿಸಿ’ ಎಂದು ವಿಜಯ ಮಲ್ಯ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಬೆಂಗಳೂರು ಹಾಗೂ ಬೆಳಗಾವಿ ಸೇರಿದಂತೆ ಒಟ್ಟು 21 ಸ್ಥಳಗಳ ಮೇಲೆ ಇ.ಡಿ. ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ದಾಳಿಯ ಬೆನ್ನಲ್ಲೇ ವಿಜಯ ಮಲ್ಯ ಅವರ ಹೇಳಿಕೆ ಇದೀಗ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.