ಬೆಂಗಳೂರು: ‘ಶೂನ್ಯ’ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಕನ್ನಡ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದ್ದು, ಕುತೂಹಲ ಮೂಡಿಸಿದೆ. ವೈ.ಕೆ. ನಿರ್ದೇಶನದ ಈ ಚಿತ್ರಕ್ಕೆ ‘ಲಾರ್ಡ್ ಗಾಗ’ ಎಂದು ಹೆಸರಿಡಲಾಗಿದ್ದು, ‘ಪರಿಶುದ್ಧವಾದ ಅಹಂಕಾರ ಲಭ್ಯ’ (Purest form of ego available) ಎಂಬ ಅಡಿಬರಹವಿದೆ.
2022ರಲ್ಲಿ ಚೈತ್ರಾ ಜೆ. ಆಚಾರ್ ಹಾಗೂ ತಾರಕ್ ಪೊನ್ನಪ್ಪ ಅಭಿನಯದ ‘ಗಿಲ್ಕಿ’ ಚಿತ್ರ ನಿರ್ದೇಶಿಸಿದ್ದ ವೈ.ಕೆ. ಇದೀಗ ವಿಭಿನ್ನ ಪರಿಕಲ್ಪನೆಯೊಂದಿಗೆ ‘ಲಾರ್ಡ್ ಗಾಗ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ‘ಝೀರೋ ಗ್ರಾವಿಟಿ ಫಿಲಂ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ‘ಮುಕಿ’ ಚಿತ್ರ ನಿರ್ಮಿಸುತ್ತಿದ್ದು, ‘ಹೆಡ್ ಬುಷ್’ ಖ್ಯಾತಿಯ ಶೂನ್ಯ ನಾಯಕನಾಗಿ ನಟಿಸುತ್ತಿದ್ದಾರೆ.
ಚಿತ್ರದ ಶೀರ್ಷಿಕೆ ಅನಾವರಣಕ್ಕಾಗಿ ಚಿತ್ರತಂಡ ಬಿಡುಗಡೆ ಮಾಡಿರುವ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಸಿನಿಮಾವನ್ನೇ ಆಮ್ಲಜನಕದಂತೆ ಉಸಿರಾಡುವ ನಾಯಕ, ಬಕೆಟ್‌ಗಟ್ಟಲೆ ಕಥೆಗಳನ್ನು ಹೊತ್ತು ತರುವ ನಿರ್ದೇಶಕ ಹಾಗೂ ಕಿರುಚಿತ್ರ ನಿರ್ಮಿಸಿ ಗ್ಲೂಕೋಸ್ ಬಾಟಲಿ ಹಾಕಿಸಿಕೊಂಡಿರುವ ನಿರ್ಮಾಪಕನ ಸುತ್ತ ಹೆಣೆದಿರುವ ವಿಡಿಯೋ ಹಾಸ್ಯಮಯವಾಗಿ ಮೂಡಿಬಂದಿದೆ.
ಇದರೊಂದಿಗೆ ರಕ್ಷಿತ್ ಶೆಟ್ಟಿ, ‘ಲೂಸಿಯಾ’ ಪವನ್, ಉಪೇಂದ್ರ, ಕಾಶಿನಾಥ್ ಹಾಗೂ ‘ಕಾಂತಾರ’ ಖ್ಯಾತಿಯ ರಿಷಬ್ ಶೆಟ್ಟಿ ಅವರ ಸಿನಿಮಾ ಕುರಿತ ಚರ್ಚೆಯನ್ನೂ ಪ್ರೋಮೋ ಒಳಗೊಂಡಿದ್ದು, ಚಿತ್ರದ ಶೀರ್ಷಿಕೆ ಅನಾವರಣಕ್ಕೆ ವಿಭಿನ್ನ ಸ್ಪರ್ಶ ನೀಡಿದೆ.
ತಲೆ, ಮೆದುಳು, ಗಂಡು-ಹೆಣ್ಣಿನ ಚಪ್ಪಲಿಗಳನ್ನು ಒಳಗೊಂಡಿರುವ ಟೈಟಲ್ ವಿನ್ಯಾಸದೊಂದಿಗೆ ‘ಪರಿಶುದ್ಧ ಅಹಂಕಾರ ಲಭ್ಯ’ ಎಂಬ ಅಡಿಬರಹ ಗಮನ ಸೆಳೆಯುತ್ತಿದೆ. ಉಪ್ಪಿ ಸಿನಿಮಾಗಳ ಶೈಲಿಯನ್ನು ನೆನಪಿಸುವ ಈ ವಿಚಿತ್ರ ಹಾಗೂ ಚಿಂತನೆಗೆ ಹಚ್ಚುವ ಶೀರ್ಷಿಕೆಯ ಹಿಂದಿನ ಕಥೆಯನ್ನು ಚಿತ್ರತಂಡ ಸದ್ಯ ಬಹಿರಂಗಪಡಿಸದೆ, ಪ್ರೇಕ್ಷಕರ ಊಹೆಗೆ ಬಿಟ್ಟಿದೆ.






















