SK Home Ad
Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ ಗಣೇಶ ವಿಸರ್ಜನೆಗೆ ನೋ ಟೆನ್ಷನ್‌: ಫ್ಲೈಓವರ್ ಕೆಳಗೆ ದಾರಿ ಕ್ಲಿಯರ್, ದೊಡ್ಡ ಗಣೇಶನಿಗೆ ‘ರೂಟ್‌...

ಹುಬ್ಬಳ್ಳಿ ಗಣೇಶ ವಿಸರ್ಜನೆಗೆ ನೋ ಟೆನ್ಷನ್‌: ಫ್ಲೈಓವರ್ ಕೆಳಗೆ ದಾರಿ ಕ್ಲಿಯರ್, ದೊಡ್ಡ ಗಣೇಶನಿಗೆ ‘ರೂಟ್‌ ಚೇಂಜ್’

0
59

ಹುಬ್ಬಳ್ಳಿ: ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮುಂಭಾಗದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಶುಕ್ರವಾರ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಫ್ಲೈ ಓವರ್‌ಗೆ ಅಳವಡಿಸಿರುವ ಗರ್ಡರ್ ಮತ್ತು ಪಿಲ್ಲರ್‌ಗಳ ಅಳತೆ 23 ಅಡಿ ಎತ್ತರ ಇರುವುದರಿಂದ 16 ರಿಂದ 18 ಅಡಿ ಎತ್ತರದ ಗಣಪತಿಗಳ ವಿಸರ್ಜನಾ ಮೆರವಣಿಗೆಗೆ ಯಾವುದೇ ತೊಂದರೆಯಾಗುವುದಿಲ್ಲ. 18 ಅಡಿಗೂ ಎತ್ತರದ ನಾಲ್ಕು ಬೃಹತ್ ಗಣಪತಿಗಳಿಗೆ ಮಾತ್ರ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಪ್ರತೀ ವರ್ಷದಂತೆ ಈ ವರ್ಷವೂ ಮರಾಠಾ ಗಲ್ಲಿ, ಮೇದಾರ್ ಓಣಿ ಹಾಗೂ ದಾಜೀಬಾನ್ ಪೇಟ್‌ನಲ್ಲಿ 25 ಅಡಿಗೂ ಎತ್ತರದ ಬೃಹತ್ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳನ್ನು ಕರೆಸಿ ಮಾರ್ಗಗಳ ಪರಿಶೀಲನೆ ನಡೆಸಲಾಗಿದೆ ಎಂದರು.

ಸೆ. 14ರಂದು ಪ್ರತಿಷ್ಠಾಪನೆಯಾಗುವ ಗಣಪತಿಗಳು ಕ್ರಮೇಣ 5ನೇ ದಿನವಾದ ಸೆ. 18, ಏಳನೇ ದಿನ ಸೆ. 20, ಒಂಭತ್ತನೇ ದಿನದ ಗಣಪತಿಗಳು ಸೆ. 22ರಂದು ವಿಸರ್ಜನೆಗೊಳ್ಳಲಿವೆ. ಸೆ. 25ರಂದು 11ನೇ ದಿನದ ಗಣಪತಿಗಳು ವಿಸರ್ಜನೆಗೊಳ್ಳಲಿವೆ ಎಂದರು.

ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಡಿಸಿಪಿಗಳಾದ ರವೀಶ್ ಸಿ.ಆರ್, ಶೃತಿ ಎನ್.ಎಸ್, ಆರ್‌ಎಫ್‌ಓ ಆರ್.ಎಸ್.ಉಪ್ಪಾರ, ಮಹಾಮಂಡಳದ ಪದಾಧಿಕಾರಿಗಳಾದ ಎಸ್.ಎಸ್.ಕಮಡೊಳ್ಳಿಶೆಟ್ಟರ್, ಶಾಂತರಾಜ ಪೋಳ, ಅಮರೇಶ ಹಿಪ್ಪರಗಿ, ಚನ್ನಬಸಪ್ಪ ಧಾರವಾಡಶೆಟ್ಟರ, ಮುಖಂಡರಾದ ರವಿ ನಾಯ್ಕ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

18 ಅಡಿಗೂ ಎತ್ತರದ ಮೂರು ಗಣಪತಿ ವಿಸರ್ಜನೆ ಕೊನೆಗೆ: 18 ಅಡಿಗೂ ಎತ್ತರದ ಮೂರು ಗಣಪತಿಗಳನ್ನು ಮಾತ್ರ ಎಲ್ಲ ಸಣ್ಣ ಪುಟ್ಟ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ಬಳಿಕ ಕೊನೆಯಲ್ಲಿ ಕಳುಹಿಸುವಂತೆ ಗಣೇಶ ಮಹಾಮಂಡಳದವರೊಂದಿಗೆ ಚರ್ಚಿಸಲಾಗಿದೆ. ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಬೃಹತ್ ಗಣಪತಿಗಳ ಸಂಚಾರದ ಮಾರ್ಗದಲ್ಲಿ ಅಗತ್ಯವಿರುವ ಕಡೆ ಮರಗಳ ಕೊಂಬೆಗಳನ್ನು ಟ್ರಿಮ್ಮಿಂಗ್ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವಿದ್ಯುತ್ ಲೈನ್ ಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮಾರ್ಗದಲ್ಲಿನ ರಸ್ತೆ ತಗ್ಗು ಗುಂಡಿಗಳನ್ನು ಮುಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಆಯುಕ್ತರಿಗೂ ಸೂಚಿಸಲಾಗಿದೆ ಎಂದರು.

ಹೀಗಿರಲಿದೆ ಮಾರ್ಗ: ಪ್ರತಿ ವರ್ಷದಂತೆ 16 ರಿಂದ 18 ಅಡಿ ಎತ್ತರದ ಗಣಪತಿಗಳು ಚನ್ನಮ್ಮ ವೃತ್ತದ ಮಾರ್ಗವಾಗಿ ಹಳೇ ಬಸ್ ನಿಲ್ದಾಣದ ಎದುರಿನಿಂದ ಸಾಗಿ ಸುಜಾತಾ-ಸಂಜೋತಾ ಥೇಟರ್ ಬದಿಯ ಮಾರ್ಗದಿಂದ ಸಾಗಿ ಗ್ಲಾಸ್ ಹೌಸ್ ಬಳಿಯ ಬಾವಿಯನ್ನು ತಲುಪಿ ವಿಸರ್ಜನೆಗೊಳ್ಳಲಿವೆ.

18 ಅಡಿಗೂ ಎತ್ತರದ ಗಣಪರಿಗಳು ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಪ್ರವೇಶಿಸದೇ, ಸಂಗೊಳ್ಳಿ ರಾಯಣ್ಣ ವೃತ್ತ, ಸಾಯಿಬಾಬಾ ದೇವಸ್ಥಾನದ ಎದುರಿನ ರಸ್ತೆ, ಪ್ರವಾಸಿ ಮಂದಿರದ ರಸ್ತೆಯಿಂದ ದೇಶಪಾಂಡೆ ನಗರದ ಮುಖ್ಯ ರಸ್ತೆ, ಕಾಟನ್ ಮಾರ್ಕೆಟ್, ಗಾಳಿ ದುರ್ಗಮ್ಮ ದೇವಸ್ಥಾನದ ಮಾರ್ಗವಾಗಿ ಹೊಸೂರು, ಕೆನರಾ ಹೋಟೆಲ್ ಎದುರಿನ ರಸ್ತೆಯಿಂದ ಹೊಸೂರು ಬಾವಿಯಲ್ಲಿ ವಿಸರ್ಜನೆಗೊಳ್ಳಲಿವೆ.

ಈ ಮಾರ್ಗದಲ್ಲಿರುವ ತಾತ್ಕಾಲಿಕ ಡಿವೈಡರ್‌ಗಳನ್ನು 12ನೇ ದಿನದ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ತೆರವುಗೊಳಿಸಲು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರೂ ಸಹಮತ ನೀಡಿದ್ದಾರೆ. ವಿಸರ್ಜನೆ ಬಳಿಕ ಡಿವೈಡರ್‌ಗಳನ್ನು ಪುನಃ ಅಳವಡಿಸಲಾಗುವುದು ಎಂದು ಮಹೇಶ ಟೆಂಗಿನಕಾಯಿ ತಿಳಿಸಿದರು.