ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದ ಆರೋಪ ಎದುರಿಸುತ್ತಿರುವ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಂಗೀಕರಿಸಿದ್ದಾರೆ. ಈ ಮೂಲಕ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಸಂಪುಟದಲ್ಲಿ ಮೊದಲ ಸಚಿವರ ರಾಜೀನಾಮೆ ಅಧಿಕೃತವಾಗಿ ಜಾರಿಯಾದಂತಾಗಿದೆ.
ಈ ಕುರಿತು ಲೋಕಭವನದಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ನಾಗೇಂದ್ರ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ ತಿಳಿಸಲಾಗಿದೆ.
ಸಿಎಂ ಶಿಫಾರಸಿನ ಮೇರೆಗೆ ರಾಜೀನಾಮೆ ಅಂಗೀಕಾರ: ಆಗಸ್ಟ್ 29ರಂದು ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ್ದರು. ಬಳಿಕ ಮುಖ್ಯಮಂತ್ರಿ ಅವರು ನಾಗೇಂದ್ರ ಅವರ ರಾಜೀನಾಮೆ ಪತ್ರವನ್ನು ಲೋಕಭವನಕ್ಕೆ ಕಳುಹಿಸಿ, ರಾಜೀನಾಮೆ ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು.
ಮುಖ್ಯಮಂತ್ರಿಗಳ ಶಿಫಾರಸಿನ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ರಾಜೀನಾಮೆ ಪತ್ರವನ್ನು ಪರಿಶೀಲಿಸಿ ಅಂಗೀಕರಿಸಿದ್ದಾರೆ. ಈ ಕುರಿತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮೂಲಕ ಮಾಹಿತಿ ರವಾನಿಸಲಾಗಿದೆ ಎಂದು ಲೋಕಭವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಜೀನಾಮೆ ವೇಳೆ ಭಾವುಕರಾಗಿದ್ದ ನಾಗೇಂದ್ರ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಘೋಷಿಸುವ ಸಂದರ್ಭದಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿರ್ಧಾರದ ಕುರಿತು ಮಾಹಿತಿ ನೀಡಿದ್ದರು.
ಈ ವೇಳೆ ನಾಗೇಂದ್ರ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದರು. ಪ್ರಕರಣದ ತನಿಖೆಗೆ ಸಹಕರಿಸುವ ಉದ್ದೇಶದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದರು.
ಪ್ರಮಾಣವಚನ ಸ್ವೀಕರಿಸಿ 25 ದಿನಗಳಲ್ಲೇ ರಾಜೀನಾಮೆ: ಬಿ. ನಾಗೇಂದ್ರ ಅವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಸಂಪುಟಕ್ಕೆ ಸೇರ್ಪಡೆಯಾದ ಕೇವಲ 25 ದಿನಗಳಲ್ಲೇ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಗಳು ತೀವ್ರಗೊಂಡ ಬೆನ್ನಲ್ಲೇ ನಾಗೇಂದ್ರ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೆಚ್ಚಾಗಿತ್ತು. ಅಂತಿಮವಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಅಧಿಕೃತವಾಗಿ ಮೊದಲ ವಿಕೆಟ್ ಪತನ: ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ನಾಗೇಂದ್ರ ಅವರ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಿರುವುದರಿಂದ, ಸಂಪುಟದ ಮೊದಲ ವಿಕೆಟ್ ಪತನಗೊಂಡಂತಾಗಿದೆ. ನಾಗೇಂದ್ರ ಅವರ ರಾಜೀನಾಮೆ ಅಂಗೀಕಾರದೊಂದಿಗೆ ಅವರ ಸಚಿವ ಸ್ಥಾನವೂ ಅಧಿಕೃತವಾಗಿ ಅಂತ್ಯಗೊಂಡಿದೆ.
ಮುಂದಿನ ದಿನಗಳಲ್ಲಿ ಖಾಲಿಯಾಗಿರುವ ಸಚಿವ ಸ್ಥಾನಕ್ಕೆ ಯಾರನ್ನು ನೇಮಕ ಮಾಡಲಾಗುತ್ತದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.






















