ಶಿವಕುಮಾರ ಹಳ್ಯಾಳ
ಹುಬ್ಬಳ್ಳಿ: ಗಣೇಶ ಹಬ್ಬದ ಹೊಸ್ತಿಲಲ್ಲೇ ಉತ್ತರ ಕರ್ನಾಟಕದ ಅಡುಗೆ ಮನೆಗೆ ಟ್ರಿಪಲ್ ಶಾಕ್ ತಟ್ಟಿದೆ. ಸಿಹಿ ಮಾಡೋಕೆ ಸಕ್ಕರೆ ಇಲ್ಲ, ಬಾಯಿ ಸಿಹಿ ಮಾಡೋಕೆ ಬೆಲ್ಲ ಇಲ್ಲ, ಒಗ್ಗರಣೆಗೆ ಈರುಳ್ಳಿ ಇಲ್ಲ – ಮೂರರ ದರ ಒಟ್ಟಿಗೆ ಏರಿದೆ.
ಈರುಳ್ಳಿ ಬೆಲೆ 65 ರಿಂದ 70 ರೂಗೆ ದಾಟಿದರೆ, ಸಕ್ಕರೆ ಬೆಲೆ ಕೆ.ಜಿಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 65 ರಿಂದ 70 ರೂಗೆ ಮಾರಾಟವಾಗುತ್ತಿದ್ದು, ಬೆಲ್ಲದ ಬೆಲೆ ಏನೂ ಕಮ್ಮಿ ಇಲ್ಲಾರಿ. ಅದರದ್ದೇ ಹೆಚ್ಚಿನ ಬೆಲೆಯಾಗಿದೆ. ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಉತ್ತಮ ಬೆಲ್ಲದ ಬೆಲೆ, ಮಹಾಲಿಂಗಪುರದ ಬೆಲ್ಲ ಪ್ರತಿ ಕೆ.ಜಿಗೆ 64, ಆರ್ಗೆನಿಕ್ ಬೆಲ್ಲ ಕೆ.ಜಿಗೆ 75, ಮಂಡ್ಯ ಅಚ್ಚು ಬೆಲ್ಲ ಕೆ.ಜಿಗೆ 80 ರೂ ಆಗಿದೆ. ಕೇಳಿದರೇನೆ ಬೆಚ್ಚಿ ಬೀಳಬೇಕು. ಹಾಗಾಗಿದೆ ಪರಿಸ್ಥಿತಿ ಗ್ರಾಹಕರದ್ದು.
ಗಣೇಶ ಹಬ್ಬದ ಹೊಸ್ತಿಲಲ್ಲಿ ಸಕ್ಕರೆ ದರ ದಿಢೀರ್ ಏರಿದ್ದು, ಜನಸಾಮಾನ್ಯರ ಜೇಬಿಗೆ ಬರೆ ಎಳೆದಿದೆ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಹಿ ತಯಾರಿಕೆ ಜೋರು. ಈ ಹಬ್ಬಗಳ ಮುನ್ನಾ ದಿನಗಳಲ್ಲೇ ಸಕ್ಕರೆ ಬೆಲೆ ಅಟ್ಟಕ್ಕೇರಿರುವುದು ಜನರಿಗೆ ಕಹಿಯಾಗಿ ಗೋಚರಿಸಿದೆ.
ಹುಬ್ಬಳ್ಳಿ-ಧಾರವಾಡದ ಚಿಲ್ಲರೆ ಅಂಗಡಿಯಲ್ಲಿ ತಿಂಗಳ ಹಿಂದೆ ಪ್ರತಿ ಕೆ.ಜಿಗೆ 50-52 ಇದ್ದ ಸಕ್ಕರೆ ಬೆಲೆ ಈಗ 65 ರಿಂದ 70 ರೂಗೆ ಮಾರಾಟ ಆಗುತ್ತಿದೆ! ಒಂದು ಕೆಜಿ ಸಕ್ಕರೆ ಜೊತೆ ಒಂದು ಪಾವು ಚಹಾಪುಡಿ ಫ್ರೀ ಕೊಡ್ತಿದ್ವಿ, ಈಗ ಸಕ್ಕರೆ ಬೆಲೆನೂ ಕಡಿಮೆ ಮಾಡಿ ಕೊಡೋ ಹಾಗಿಲ್ಲ ಅಂತಿದ್ದಾರೆ ವ್ಯಾಪಾರಸ್ಥರು. ಹೋಟೆಲ್, ಬೇಕರಿ, ಸಿಹಿ ಅಂಗಡಿಯವರಿಗೂ ಹೊಡೆತ – ಲಾಡು, ಬರ್ಫಿಗೆ ದರ ಏರಿಸೋ ಅನಿವಾರ್ಯತೆ ಎದುರಾಗಿದೆ. ಅನೇಕ ಹೊಟೇಲ್, ದರ್ಶಿನಿ, ಚಹಾ, ಕಾಫಿ ಮಾರಾಟ ಅಂಗಡಿಗಳಲ್ಲಿ ಬೆಲೆ ಹೆಚ್ಚಳ ಲೆಕ್ಕಾಚಾರ ಶುರುವಾಗಿದೆ.
ಹಬ್ಬಕ್ಕೆ ಹೋಳಿಗೆ ಮಾಡಬೇಕು ಅಂದ್ರೆ ಕಷ್ಟಕಷ್ಟ. ಈರುಳ್ಳಿ ಇಲ್ಲದೇ ಪಲ್ಯ ಮಾಡೋಕೆ ಆಗಲ್ಲ. ಮೂರು ಇಲ್ಲದೇ ಹಬ್ಬ ಮಾಡೋಕೂ ಆಗಲ್ಲ. ದೈನಂದಿನ ಜೀವನ ನಡೆಯಲ್ಲ. ಮೂರು ದಿನಸಿ ಖರೀದಿಗೆ ಸಾವಿರಾರು ರೂ ಕೊಡಲೇಬೇಕಾಗಿದೆ ಎನ್ನುತ್ತಾರೆ ಗ್ರಾಹಕರು.
ವಾರದ ಹಿಂದೆ 50 ರೂ ಕೆ.ಜಿ ಇದ್ದ ಈರುಳ್ಳಿ ಬೆಲೆ ಈಗ 60 ರಿಂದ 65ಕ್ಕೆ ಏರಿಕೆ ಕಂಡಿದೆ. ಸ್ಥಳೀಯ ಮಾರುಕಟ್ಟೆಗೆ ಈರುಳ್ಳಿ ಆವಕ ಕಡಿಮೆ ಆಗಿದೆ. ಇದೇ ಸ್ಥಿತಿ ಮುಂದುವರಿದರೆ ಕೆ.ಜಿ ಈರುಳ್ಳಿಗೆ 100 ದಾಟಬಹುದು! ಎಂಬ ಲೆಕ್ಕಾಚಾರ ಸಗಟು ವ್ಯಾಪಾರಸ್ಥರು ಹೇಳುತ್ತಾರೆ.
ಮಳೆ ಇಲ್ಲದೇ ಈರುಳ್ಳಿ ಕುಂಠಿತ: ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಮತ್ತು ಶೇ. 70ರಷ್ಟು ಈರುಳ್ಳಿ ಇಳುವರಿ ಕುಸಿತದಿಂದ ಈರುಳ್ಳಿ ಬೆಲೆ ತೀವ್ರ ಏರಿಕೆಯಾಗಿದೆ. ಸದ್ಯ ಕೆಜಿಗೆ 60 ರಿಂದ 75 ರೂ ಗಳಿಗೆ ಜಿಗಿತ ಕಂಡಿದ್ದು, ಕೆಲವೇ ದಿನಗಳಲ್ಲಿ 100 ರೂ. ಮುಟ್ಟುವ ಸಾಧ್ಯತೆಯಿದೆ. ಹೀಗಾಗಿ, ಈರುಳ್ಳಿ ಕತ್ತರಿಸುವ ಮೊದಲೇ ದರ ಕೇಳಿ ಗ್ರಾಹಕರು ಕಣ್ಣೀರು ಹಾಕುವಂತಾಗಿದೆ.
ಮಳೆ ಬಾರದೇ ಸ್ಥಳೀಯ ರೈತರು ಈ ಸಲ ಈರುಳ್ಳಿ ಬೆಳೆ ಬೆಳೆಯುವ ಗೋಜಿಗೆ ಹೋಗಿಲ್ಲ. ಪರಿಣಾಮ ಸುಮಾರು ಶೇ. 70 ರಷ್ಟು ಈರುಳ್ಳಿ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಕಡಿಮೆಯಾಗಿದೆ. ಸದ್ಯ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅಲ್ಪಸ್ವಲ್ಪ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹುಬ್ಬಳ್ಳಿ ಎಪಿಎಂಸಿಗೆ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕು, ಗದಗ ಜಿಲ್ಲೆಯ ವಿವಿಧ ತಾಲೂಕು, ಬಾಗಲಕೋಟೆಯಿಂದ ಅಲ್ಪಸ್ವಲ್ಪ ಈರುಳ್ಳಿ ಆವಕವಾಗುತ್ತಿದೆ. ಮಹಾರಾಷ್ಟ್ರದ ಸೊಲ್ಲಾಪುರ, ಪುಣೆ, ಅಹ್ಮದ್‌ನಗರ ಮತ್ತಿತರ ಕಡೆಯಿಂದ ಈರುಳ್ಳಿ ಆವಕವಾಗುತ್ತದೆ. ಇಲ್ಲಿಂದ ಕರ್ನಾಟಕದ ವಿವಿಧ ನಗರಗಳು ಮತ್ತು ಉತ್ತರ ಭಾರತದ ಮಾರುಕಟ್ಟೆಗೆ ಪೂರೈಕೆಯಾಗುತ್ತದೆ.
ಕರ್ನಾಟಕದಲ್ಲಿ ಈರುಳ್ಳಿ ಸುಗ್ಗಿ ಈಗ ಮುಗಿಯುವ ಹಂತಕ್ಕೆ ಬಂದಿದೆ. ಮಳೆ ಕೊರತೆಯಿಂದ ಈರುಳ್ಳಿ ಬೆಳೆದಿಲ್ಲ. ಪ್ರತಿ ವರ್ಷದಂತೆ ಗುಣಮಟ್ಟದ ಫಸಲೂ ಬಂದಿಲ್ಲ. ಆದರೆ, ಬೇಡಿಕೆಯಷ್ಟು ಈರುಳ್ಳಿ ಆವಕ ಆಗದ ಕಾರಣ ರೈತರಿಗೆ ಉತ್ತಮ ದರ ಸಿಗುತ್ತಿದೆ.
ಈರುಳ್ಳಿ ವ್ಯಾಪಾರಸ್ಥ ದೀಪಕ ಪಾಟೀಲ ಮಾತನಾಡಿ, “ಇದೀಗ ಗದಗ, ಬೆಳಗಾವಿ, ಬಾಗಲಕೋಟೆ, ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತಿದೆ. ಆವಕ ಇಳಿಕೆಯಾದ ಕಾರಣ ದರ ಏರಿಕೆಯಾಗಿದೆ. ಈರುಳ್ಳಿ ಸುಗ್ಗಿ ಶುರುವಾದರೆ, ದರ ಕಡಿಮೆಯಾಗಬಹುದು” ಎಂದಿದ್ದಾರೆ.
ಹೋಟೆಲ್ ಉದ್ಯಮಿ ವಿಜಯ ಜರತಾರಘರ ಮಾತನಾಡಿ, “ಈರುಳ್ಳಿ ದರ ಇಷ್ಟು ದಿನಗಳ ಕಾಲ ಸ್ಥಿರತೆ ಕಾಯ್ದುಕೊಂಡಿತ್ತು. ಇದೀಗ ಏರಿಕೆ ಕಾಣುತ್ತಿದೆ. ನಾನು ಹೋಟೆಲ್ ಉದ್ಯಮ ನಡೆಸುತ್ತಿರುವುದರಿಂದ ದಿನನಿತ್ಯ ಈರುಳ್ಳಿ ಬಳಕೆ ಸಾಮಾನ್ಯವಾಗಿದೆ. ಇರುಳ್ಳಿ ದರ ಕೇಳಿದರೆ ಈರುಳ್ಳಿ ಖರೀದಿಸುವುದೋ ಬೇಡವೋ ಎಂದು ತಿಳಿಯುತ್ತಿಲ್ಲ. ಕಡಿಮೆ ಈರುಳ್ಳಿ ಖರೀದಿಸಿದರೆ ಹೋಟೆಲ್‌ನಲ್ಲಿ ಊಟದೊಂದಿಗೆ ಗ್ರಾಹಕರು ಈರುಳ್ಳಿ ಕೇಳುತ್ತಾರೆ. ಈರುಳ್ಳಿ ದರ ಏರಿಕೆ ಬಿಸಿ ತುಪ್ಪವಾಗಿದ್ದು, ನುಂಗಲಾರದ ಸ್ಥಿತಿ ಎದುರಾಗಿದೆ.” ಎಂದು ಹೇಳಿದ್ದಾರೆ.
ವಾರದಲ್ಲಿ 8,270 ಕ್ವಿಂಟಲ್ ಈರುಳ್ಳಿ ಆವಕ: ಆಗಸ್ಟ್ ತಿಂಗಳ ಮಧ್ಯದಲ್ಲಿ ಆ. 17 ರಂದು ಹುಬ್ಬಳ್ಳಿ ಎಪಿಎಂಸಿಗೆ 2,100 ಕ್ವಿಂಟಲ್, ಆ. 18 ರಂದು 2,350 ಕ್ವಿಂಟಲ್, ಆ. 19 ರಂದು 960 ಕ್ವಿಂಟಲ್, ಆ. 20 ರಂದು 1,240 ಕ್ವಿಂಟಲ್, ಆ. 21 ರಂದು 1,620 ಕ್ವಿಂಟಲ್ ಈರುಳ್ಳಿ ಆವಕವಾಗಿದ್ದು, ಒಂದು ವಾರದಲ್ಲಿ 8,270 ಕ್ವಿಂಟಲ್ ಈರುಳ್ಳಿ ಆವಕವಾಗಿದೆ ಎಂದು ಹುಬ್ಬಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
ಸಕ್ಕರೆ ದರ ಗಗನಕ್ಕೆ: ಬೃಹತ್ ಬಳಕೆದಾರರು 15 ದಿನಕ್ಕಿಂತ ಹೆಚ್ಚು ದಾಸ್ತಾನು ಇಡುವಂತಿಲ್ಲ ಅಂಬ ಆದೇಶ ಕೇಂದ್ರ ಸರ್ಕಾರ ಮಾಡಿದೆ. 10 ಲಕ್ಷ ಟನ್ ಕಚ್ಚಾ ಸಕ್ಕರೆ ಸುಂಕ ರಹಿತ ಆಮದಿಗೆ ಅನುಮತಿ ನೀಡಿದೆ. ಆದರೂ ಚಿಲ್ಲರೆ ಮಾರುಕಟ್ಟೆಗೆ ಇಳಿಕೆ ಇನ್ನೂ ಕಂಡಿಲ್ಲ. ಇದೇ ಸ್ಥಿತಿ ಮುಂದುವರಿದರೆ ಹಬ್ಬ ಹುಣ್ಣಿಮೆ ಹೇಗೆ ಮಾಡುವುದು, ಚಹಾ, ಕಾಫಿ ಕುಡಿಯೋಕು ವಿಚಾರ ಮಾಡಬೇಕಾದ ಸ್ಥಿತಿ ಬಂತಲ್ಲ ಎಂದು ಜನ ಹಳಹಳಿಸುತ್ತಿದ್ದಾರೆ.





















