SK Home Ad
Home ಕ್ರೀಡೆ ಫಾಲೋಆನ್‌ನಿಂದಲೂ ಪಾರಾದ ಲಂಕಾ: ಭಾರತಕ್ಕೆ ಗೆಲುವು ತಪ್ಪಿಸಿದ ದಿನುಶಾ – ಪಂದ್ಯ ಡ್ರಾನಲ್ಲಿ ಅಂತ್ಯ

ಫಾಲೋಆನ್‌ನಿಂದಲೂ ಪಾರಾದ ಲಂಕಾ: ಭಾರತಕ್ಕೆ ಗೆಲುವು ತಪ್ಪಿಸಿದ ದಿನುಶಾ – ಪಂದ್ಯ ಡ್ರಾನಲ್ಲಿ ಅಂತ್ಯ

0
52

ಕೊಲಂಬೊ: ಸೋನಲ್‌ ದಿನುಶಾ ಅಜೇಯ 133 ರನ್‌ಗಳ ಅದ್ಭುತ ಹೋರಾಟದ ನೆರವಿನಿಂದ ಶ್ರೀಲಂಕಾ ತಂಡ ಭಾರತ ವಿರುದ್ಧದ 2ನೇ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಕೊಲಂಬೊದ ಸಿಂಹಳೀಸ್‌ ಸ್ಫೋರ್ಟ್ಸ್‌ ಕ್ಲಬ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿದ್ದ ಭಾರತಕ್ಕೆ ಲಂಕಾ ಬ್ಯಾಟರ್‌ಗಳು ಕೊನೆಯ ದಿನ ಭರ್ಜರಿ ಪ್ರತಿರೋಧ ಒಡ್ಡಿದರು. ಹೀಗಾಗಿ ಪಂದ್ಯ ಡ್ರಾ ಗೊಂಡರೂ, ಮೊದಲ ಟೆಸ್ಟ್‌ನಲ್ಲಿ 165 ರನ್‌ಗಳ ಗೆಲುವು ಸಾಧಿಸಿದ್ದ ಭಾರತ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

ಮೊದಲ ಇನಿಂಗ್ಸ್‌ನಲ್ಲಿ ಭಾರತ 9 ವಿಕೆಟ್‌ಗೆ 503 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ 290 ರನ್‌ಗಳಿಗೆ ಆಲೌಟ್‌ ಆಯಿತು. ಸೋನಲ್‌ ದಿನುಶಾ 103 ರನ್‌ ಗಳಿಸಿ ಏಕಾಂಗಿ ಹೋರಾಟ ನಡೆಸಿದರೂ, ಭಾರತಕ್ಕೆ 213 ರನ್‌ಗಳ ಭರ್ಜರಿ ಮುನ್ನಡೆ ಸಿಕ್ಕಿತು. ಈ ಹಿನ್ನೆಲೆಯಲ್ಲಿ ಭಾರತ ಫಾಲೋ-ಆನ್‌ ಹೇರಿತು.

ಫಾಲೋ-ಆನ್‌ ನಂತರವೂ ಶ್ರೀಲಂಕಾ ಆರಂಭದಲ್ಲಿ ಸಂಕಷ್ಟಕ್ಕೆ ಸಿಲುಕಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 229 ರನ್‌ ಗಳಿಸಿ ಕೇವಲ 16 ರನ್‌ಗಳ ಮುನ್ನಡೆಯಲ್ಲಿತ್ತು. ಅಂತಿಮ ದಿನವಾದ ಗುರುವಾರ ಉಳಿದ ನಾಲ್ಕು ವಿಕೆಟ್‌ಗಳನ್ನು ಬೇಗನೆ ಉರುಳಿಸಿ ಪಂದ್ಯ ಗೆಲ್ಲಬಹುದು ಎಂಬ ವಿಶ್ವಾಸ ಭಾರತಕ್ಕಿತ್ತು. ಆದರೆ ಸೋನಲ್‌ ದಿನುಶಾ ಭಾರತದ ಗೆಲುವಿನ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದರು.

ದಿನುಶಾ ತಾಳ್ಮೆ ಹಾಗೂ ಅತ್ಯುತ್ತಮ ತಾಂತ್ರಿಕ ಬ್ಯಾಟಿಂಗ್‌ನೊಂದಿಗೆ ಭಾರತದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ಕೇಶರ ನುವಾಂತ ಅವರೊಂದಿಗೆ ಮಹತ್ವದ ಶತಕದ ಜೊತೆಯಾಟವನ್ನೂ ಕಟ್ಟಿದರು. ಬಳಿಕ ಕೆಳಕ್ರಮಾಂಕದ ಬ್ಯಾಟರ್‌ಗಳಿಂದಲೂ ಉತ್ತಮ ಬೆಂಬಲ ಪಡೆದ ಅವರು, ಭಾರತದ ಬೌಲರ್‌ಗಳಿಗೆ ವಿಕೆಟ್‌ ನೀಡದೆ ದಿನದಾಟವನ್ನು ಮುಂದುವರಿಸಿದರು. ಅಂತಿಮವಾಗಿ 264 ಎಸೆತಗಳಲ್ಲಿ ಅಜೇಯ 133 ರನ್‌ ಗಳಿಸಿದ ದಿನುಶಾ, ಶ್ರೀಲಂಕಾವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಶ್ರೀಲಂಕಾ ಅಂತಿಮವಾಗಿ 9 ವಿಕೆಟ್‌ಗೆ 429 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಆಗ ಭಾರತಕ್ಕೆ ಗೆಲುವಿಗೆ ಅಗತ್ಯವಿದ್ದ ಸಮಯವೇ ಉಳಿದಿರಲಿಲ್ಲ. ಉಭಯ ತಂಡಗಳ ಆಟಗಾರರು ಕೈಕುಲುಕಿ ಪಂದ್ಯವನ್ನು ಡ್ರಾ ಎಂದು ಒಪ್ಪಿಕೊಂಡರು. ಫಾಲೋ-ಆನ್‌ ನಂತರವೂ ಪಂದ್ಯವನ್ನು ಉಳಿಸಿಕೊಂಡ ಶ್ರೀಲಂಕಾ, ಭಾರತ ವಿರುದ್ಧ ಇಂತಹ ಪರಿಸ್ಥಿತಿಯಿಂದ ಟೆಸ್ಟ್‌ ಪಂದ್ಯ ಉಳಿಸಿಕೊಂಡ ಅಪರೂಪದ ಸಾಧನೆ ಮಾಡಿತು.

ಸರಣಿಯಲ್ಲಿ ದಿನುಶಾ ಭರ್ಜರಿ ಪ್ರದರ್ಶನ: ಈ ಸರಣಿಯುದ್ದಕ್ಕೂ ಸೋನಲ್‌ ದಿನುಶಾ ಶ್ರೀಲಂಕಾದ ಪ್ರಮುಖ ಬ್ಯಾಟಿಂಗ್‌ ಆಧಾರವಾಗಿದ್ದರು. ಎರಡು ಪಂದ್ಯಗಳ ನಾಲ್ಕು ಇನಿಂಗ್ಸ್‌ಗಳಲ್ಲೂ ಅವರು 50ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 100, ಎರಡನೇ ಇನ್ನಿಂಗ್ಸ್‌ನಲ್ಲಿ 84 ರನ್‌ ಗಳಿಸಿದ್ದರು. ಎರಡನೇ ಟೆಸ್ಟ್‌ಮ ಮೊದಲ ಇನ್ನಿಂಗ್ಸ್‌ನಲ್ಲಿ 103 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 133 ರನ್‌ಗಳೊಂದಿಗೆ ಒಟ್ಟು 420 ರನ್‌ ಗಳಿಸಿರುವ ದಿನುಶಾ, ಸರಣಿಯ ಶ್ರೀಲಂಕಾದ ಅತ್ಯಂತ ಯಶಸ್ವಿ ಬ್ಯಾಟರ್‌ ಎನಿಸಿಕೊಂಡಿದ್ದಾರೆ.

ಎರಡನೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸುವ ಮೂಲಕ ಭಾರತ ವಿರುದ್ಧ ಈ ಸಾಧನೆ ಮಾಡಿದ ಶ್ರೀಲಂಕಾದ ಕೇವಲ ಮೂರನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ದಿನುಶಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ದಿಲೀಪ್‌ ಮೆಂಡಿಸ್‌ ಮತ್ತು ಅರವಿಂದ ಡಿ ಸಿಲ್ವಾ ಈ ಸಾಧನೆ ಮಾಡಿದ್ದರು.

ಇನ್ನೊಂದೆಡೆ, ಭಾರತ ಸರಣಿಯನ್ನು ಗೆದ್ದುಕೊಂಡಿದ್ದರೂ 2ನೇ ಟೆಸ್ಟ್‌ನಲ್ಲಿ ಗೆಲುವು ಕೈತಪ್ಪಿರುವುದು ಕೊಂಚ ನಿರಾಸೆ ಮೂಡಿಸಿದೆ. ಮೊದಲ ಟೆಸ್ಟ್‌ನಲ್ಲಿ 165 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಸರಣಿಯಲ್ಲಿ ಮುನ್ನಡೆ ಪಡೆದಿದ್ದ ಭಾರತ, ಎರಡನೇ ಪಂದ್ಯದಲ್ಲೂ ಮೇಲುಗೈ ಸಾಧಿಸಿತ್ತು. ಆದರೆ ದಿನುಶಾ ನೇತೃತ್ವದ ಶ್ರೀಲಂಕಾದ ಹೋರಾಟದಿಂದಾಗಿ ಅಂತಿಮವಾಗಿ ಪಂದ್ಯವನ್ನು ಡ್ರಾಗೆ ತೃಪ್ತಿಪಡಬೇಕಾಯಿತು.