SK Home Ad
Home ಅಂಕಣ ಅಂಕಣ ಬರಹ | ಅನ್ನೌಷಧ ಮಾಫಿಯಾ ವರ್ಸಸ್ ಖಾದರ್ ಖದರ್

ಅಂಕಣ ಬರಹ | ಅನ್ನೌಷಧ ಮಾಫಿಯಾ ವರ್ಸಸ್ ಖಾದರ್ ಖದರ್

0
1

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ಈ ಕಥೆಯನ್ನು ಬಹುತೇಕರು ಕೇಳಿರುತ್ತೀರಿ. ಪಂಚತಾರಾ ಹೋಟೆಲ್ ಒಂದರ ಪಕ್ಕದ ರಸ್ತೆ ಬದಿ ತಳ್ಳುಗಾಡಿಯಲ್ಲಿ ಪಾನಿಪುರಿ, ಭೇಲ್‌ಪುರಿ, ಚಾಟ್ ಸಿದ್ಧಪಡಿಸಿ ಮಾರುತ್ತಿದ್ದ ಅಂಗಡಿಯ ಮುಂದೆ ಹತ್ತಾರು ಜನ ಸದಾ ಚಾಟ್ಸ್ ತಿನ್ನುತ್ತಿದ್ದರು.

ಶ್ರೀಮಂತ ಕುಟುಂಬ ಆ ಮಾರ್ಗವಾಗಿ ಹೋಗುವಾಗ ಮಗು ಪಾನಿಪುರಿ ಅಪೇಕ್ಷಿಸಿತು. ರಸ್ತೆ ಪಕ್ಕ ತಿನ್ನಬಾರದು ಮಗಾ… ಆ ಹೋಟೆಲ್‌ಗೆ ಹೋಗಿ ತಿನ್ನೋಣ.. ಅಲ್ಲಿ ಕ್ಲೀನ್ ಇರುತ್ತೆ, ಆರೋಗ್ಯಕ್ಕೆ ಒಳ್ಳೆಯದು ಎಂದು ಕುಟುಂಬ ಪಂಚತಾರಾ ಹೋಟೆಲ್‌ಗೆ ಮಗುವನ್ನು ಕರೆದೊಯ್ದು ಪಾನಿಪುರಿ ಆರ್ಡರ್ ಮಾಡಿತು.

ಪಾಪ, ಪಾಲಕರಿಗೇನು ಗೊತ್ತು, ಪಂಚತಾರಾ ಹೋಟೆಲ್ ಸಪ್ಲೈಯರ್ ಅದೇ ತಳ್ಳುಗಾಡಿಯಿಂದಲೇ ಚಾಟ್ಸ್ ಖರೀದಿಸಿ ಸುಂದರವಾದ ಪ್ಲೇಟ್‌ನಲ್ಲಿ ಅಲಂಕಾರಿಕವಾಗಿ ಇಟ್ಟು ತಂದುಕೊಟ್ಟ ಎಂಬುದು!! ರುಚಿಯಾಗಿದೆ ಎಂದವರು ಬಾಯಿ ಚಪ್ಪರಿಸಿ ತಿಂದು ನೂರೈವತ್ತು ರೂಪಾಯಿ ತೆತ್ತರು.

ಹೋಟೆಲ್‌ನಿಂದ ಹೊರಬಂದಾಗ ಅದೇ ತಳ್ಳುಗಾಡಿಯ ಮಾಲೀಕ ಮುಸಿಮುಸಿ ನಗುತ್ತಿದ್ದ. ಇಲ್ಲಿ ಇಪ್ಪತ್ತು ರೂಪಾಯಿಗೆ ತಿನ್ನೋದನ್ನು ಅಲ್ಲಿ ನೂರೈವತ್ತು ರೂಪಾಯಿ ಕೊಟ್ಟು ತಿಂದು ಬಂದರೆಂದು!

ಈ ಕಥೆ ಈಗೇಕೆಂದರೆ ಕರ್ನಾಟಕದ ಆರೋಗ್ಯ ಸಚಿವ ಯು.ಟಿ. ಖಾದರ್ ಇತ್ತೀಚೆಗೆ ಪಂಚತಾರಾ ಹೋಟೆಲ್ ಮತ್ತು ಲಕ್ಸಿರೀಯಸ್ ಹೋಟೆಲ್‌ಗಳ ಮೇಲೆ, ಅಲ್ಲಿಯ ಆಹಾರ, ಸ್ವಚ್ಛತೆ ಮತ್ತು ಬಳಸುವ ಪದಾರ್ಥಗಳನ್ನು ದಾಳಿ ನಡೆಸಿ ಪರಿಶೀಲಿಸಿದಾಗ ಕೊಳೆತ ಟೊಮ್ಯಾಟೊ, ನಕಲಿ ಪನೀರ್, ಕಳಪೆ ಹಾಲು, ಔಟ್‌ಡೇಟೆಡ್ ಆಹಾರ ಪದಾರ್ಥಗಳು, ತಿಂಗಳುಗಟ್ಟಲೆ ಫ್ರಿಡ್ಜ್‌ನಲ್ಲಿಟ್ಟ ಮಾಂಸ, ಗಲೀಜಾಗಿರುವ ಪ್ಲೇಟ್‌ಗಳು, ವಾಷ್‌ರೂಮ್ ಇತ್ಯಾದಿಗಳು ದಾಳಿ ವೇಳೆ ಕಣ್ಣಿಗೆ ರಾಚಿವೆ. ಹಲವು ಹೋಟೆಲ್‌ಗಳಿಗೆ ಸಚಿವರು ನೋಟಿಸ್ ನೀಡಿದರು. ಅದೇ ಸುಳಿವಿನ ಮೇರೆಗೆ ಕರ್ನಾಟಕದಲ್ಲಿ ನಕಲಿ ಪನೀರ್ ಬಂದ್ ಮಾಡಿದರು. ಕಳಪೆ ವಸ್ತುಗಳನ್ನು ತಯಾರಿಸುವ ಕಂಪನಿಗಳಿಗೆ ನೋಟಿಸ್ ನೀಡಿದರು.

ಇದೇ ಕಾರ್ಯವನ್ನು ಕಳೆದ ಒಂದೂವರೆ ತಿಂಗಳಿನಿಂದ ಮಹಾರಾಷ್ಟ್ರದ ʻಸಿಂಗಂʼ ಎಂದೇ ಖ್ಯಾತರಾಗಿರುವ, ಅಲ್ಲಿನ ಆಹಾರ ಸುರಕ್ಷಾ ಆಯುಕ್ತ ತುಕಾರಾಮ್ ಮುಂಡೆ ಆ ರಾಜ್ಯದೆಲ್ಲೆಡೆ ನಡೆಸಿ ಹಲವು ವಂಚನೆ, ಮೋಸ ಬಯಲಿಗೆಳೆದಿದ್ದಾರೆ. ವಿವಿಧ ರಾಷ್ಟ್ರೀಯ- ಬಹುರಾಷ್ಟ್ರೀಯ ಕಂಪನಿಗಳ ಮಾರ್ಟ್‌ಗಳಿಗೂ ದಾಳಿ ನಡೆಸಿ, ಅಲ್ಲಿಯ ನಕಲಿ ಮತ್ತು ಕಳಪೆ ವಸ್ತುಗಳೂ ಸೇರಿದಂತೆ ಗುಣಮಟ್ಟವಲ್ಲದ ಸಾಮಗ್ರಿಗಳನ್ನು ಸೀಜ್ ಮಾಡಿ ಕೇಸ್ ಜಡಿದರು.

ನಿತ್ಯ ಎರಡೂವರೆ ಲಕ್ಷ ಲೀಟರ್‌ನಷ್ಟು ರಾಸಾಯನಿಕಯುಕ್ತ ಹಾಲು ಉತ್ಪಾದಿಸಿ, ಬೇರೆ ಬೇರೆ ರಾಜ್ಯಗಳಿಗೆ ಮಾರಿ ಜನರಿಗೆ ವಿಷ ಉಣ್ಣಿಸುತ್ತಿರುವ ಸಮಾಜ ಘಾತಕರಿಗೆ ತುಕಾರಾಮ್ ಮುಂಡೆ ಹುಟ್ಟಡಗಿಸಿದರು.

ಹೈಕೋರ್ಟ್ ಕೂಡ ಅವರನ್ನು ವ್ಯಂಗ್ಯವಾಗಿ `ಈ ದಾಳಿಯ ಹಿಂದಿನ ಉದ್ದೇಶವೇ ಬೇರೆ ಇದೆ; ಸರ್ಕಾರಿ ಕಚೇರಿಯ ಆವರಣದಲ್ಲಿರುವ ಹೋಟೆಲ್‌ಗಳು, ಕ್ಯಾಂಟೀನ್‌ಗಳು, ಜನಸಾಮಾನ್ಯರು ಹೆಚ್ಚಾಗಿ ತಿನ್ನುವ ಹೋಟೆಲ್‌ಗಳಲ್ಲಿ ಏಕೆ ದಾಳಿ ಮಾಡುತ್ತಿಲ್ಲ’ ಎಂದದ್ದೇ ತಡ, ಹೈಕೋರ್ಟ್ ಕ್ಯಾಂಟೀನ್ ಮೇಲೆ ದಾಳಿ ಮಾಡಿ ಸೀಜ್ ಮಾಡಿದರು!

ಜಿರಳೆ, ಹುಳ ಹುಪ್ಪಟಿ, ಕಲುಷಿತ ನೀರು ಎಲ್ಲವನ್ನೂ ಕೂಡ ಹೈಕೋರ್ಟ್ ಕ್ಯಾಂಟಿನ್ ಚಿತ್ರಣ ಎಂದು ತೋರಿಸಿಬಿಟ್ಟರು. ಹದಿನಾರು ಚಿಲ್ಲರೆ ವರ್ಷಗಳ ಸೇವೆಯಲ್ಲಿ ಇಪ್ಪತ್ತೇಳು ಸಾರಿ ವರ್ಗಾವಣೆಗೊಂಡಿರುವ ತುಕಾರಾಮ್ ನಿಷ್ಟುರ, ಪ್ರಾಮಾಣಿಕ ಮತ್ತು ಅಂಜಿಕೆ ಇಲ್ಲದೇ ಕೆಲಸ ಮಾಡುವ ವೃತ್ತಿಪರ. ಈಗವರ ತಲೆ ಮೇಲೆ ಮತ್ತೆ ವರ್ಗಾವಣೆ ತೂಗುಗತ್ತಿ ನೇತಾಡುತ್ತಿದೆ!

ಪಕ್ಕದ ಅಹಮದಾಬಾದ್‌ನಲ್ಲಿ ಜನರೇ ಆಕ್ರೋಶಗೊಂಡಾಗ ಮುನ್ಸಿಪಲ್ ಕಾರ್ಪೋರೇಷನ್ 11,000 ಹೋಟೆಲ್‌ಗಳ ಅಡುಗೆ ಮನೆಗೆ ದಾಳಿ ಇಟ್ಟಿತ್ತು. ಅಲ್ಲಿಯೂ ಕೂಡ ಎಂತಹ ಕಳಪೆ ಮತ್ತು ಅಶುಚಿತ್ವದಿಂದ ಕೂಡಿದ ವಾತಾವರಣ ಇತ್ತೆಂದರೆ, ಅಲ್ಲಿನ ಪ್ರತಿ ಹೋಟೆಲ್ ಕಿಚನ್‌ಗೆ ಸಿಸಿ ಕ್ಯಾಮರಾ ಅಳವಡಿಸುವ ಸೂಚನೆಯನ್ನು ನೀಡಲಾಗಿದೆ.

ನಮ್ಮ ಖಾದರ್ ಸಾಹೇಬರು ಸ್ಪೀಕರ್ ಹುದ್ದೆಯಿಂದ ಕೆಳಗಿಳಿದು ಮಂತ್ರಿಯಾಗಿದ್ದೇ ತಡ ತಮ್ಮ ಖದರ್ ತೋರಿಸಿದರು. ಆಸ್ಪತ್ರೆಗಳಿಗೆ ರಾತ್ರೋರಾತ್ರಿ ಭೇಟಿ, ರೋಗಿಗಳ ವಿಚಾರಣೆ, ವೈದ್ಯರ ಕೌನ್ಸೆಲಿಂಗ್ ವರ್ಗಾವಣೆ, ಕರ್ತವ್ಯದ ಕಾಲದಲ್ಲಿ ಖಾಸಗಿ ಚಿಕಿತ್ಸೆಗೆ ಹೋಗುವವರ ನಿಯಂತ್ರಣ ಇತ್ಯಾದಿಗಳಿಗೆ ಮುಂದಾದರು.

ಆ ನಂತರ ಆರಿಸಿದ್ದು ಆಹಾರ ಗುಣಮಟ್ಟ ಮತ್ತು ನಕಲಿ ಔಷಧಗಳ ಜಾಲ ಬೇಧನೆ ಕಾರ್ಯವನ್ನು. ಎಂತಹ ಕ್ರೂರ ಸ್ಥಿತಿಯಿದೆ ಎಂದರೆ ಮಗು ಉಣ್ಣುವ ಹಾಲು- ಆಕಳು, ಎಮ್ಮೆ, ಆಡಿನಿಂದ ಕರೆದದ್ದಲ್ಲ. ಯೂರಿಯಾ ಗೊಬ್ಬರದಿಂದ, ರಸಾಯನಿಕದಿಂದ ಮಾಡಿದ್ದು!. ಜನ ತಿನ್ನುವ ಆಹಾರ ನಕಲಿ ತಯಾರಿಕೆ. ನಕಲಿ ಮೊಟ್ಟೆ. ಆಮ್ಲೇಟ್, ನಕಲಿ ಪನೀರ್, ನಕಲಿ ಗೋಬಿ, ನಕಲಿ ಪ್ಲ್ಯಾಸ್ಟಿಕ್ ಅಕ್ಕಿ ಎಲ್ಲವೂ ರಾಜಾರೋಷವಾಗಿ ಮಾರ್ಕೆಟ್‌ನಲ್ಲಿ ಓಡುತ್ತಿವೆ.

ಈಗ ಮತ್ತೊಂದು ಮಹಾಜಾಲವನ್ನು ನಮ್ಮ ಖಾದರ್ ನೇತೃತ್ವದ ಎಫ್‌ಡಿಎ ಬೇಧಿಸಿದೆ. ಅದುವೇ ನಕಲಿ ಔಷಧಗಳು ಮತ್ತು ನಕಲಿ ಸೌಂದರ್ಯ ವರ್ಧಕಗಳದ್ದು.

ರಾಮನಗರದಲ್ಲಿ ಡ್ರಗ್ ಉತ್ಪಾದನಾ ಕೇಂದ್ರದ ಮೇಲೆ ಜಾಲಾಡಿದಾಗ ಇಡೀ ದೇಶ ತಲ್ಲಣಗೊಂಡಿತು. ಯಾವುದೋ ಬ್ರ್ಯಾಂಡ್ ಔಷಧಗಳಿಗೆ ಬೇರೆ ಲೇಬಲ್ ಹಚ್ಚಿ ಮಾರುವುದು ಒಂದಾದರೆ, ಔಷಧಿಯ ಅಂಶಗಳೇ ಇಲ್ಲದ ನಕಲಿ ಟ್ಯಾಬ್ಲೆಟ್‌ಗಳನ್ನು ಸಿದ್ಧಪಡಿಸಿ ಅವುಗಳನ್ನು ಬೇರೆ ಬೇರೆ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರುತ್ತಿದ್ದ ಮತ್ತೊಂದು ಕ್ರಿಮಿಗಳ ಜಾಲ ಬೆಳಕಿವೆ ಬಂದಿದೆ. ಕ್ಯಾನ್ಸರ್‌ನಂತಹ ಅಥವಾ ಹಾವು ಕಡಿದರೆ ತಕ್ಷಣ ನೀಡಬೇಕಾದ ಲಸಿಕೆ, ಕೆಮ್ಮಿನ ಕಫ್ ಸಿರಪ್, ಜ್ವರ, ಬಿಪಿ, ಮಧುಮೇಹಿಗಳಿಗೆ ಕೊಡುವ ಟ್ಯಾಬ್ಲೆಟ್ಸ್ ಎಲ್ಲವೂ ನಕಲಿ!

ಇದನ್ನು ಖಾದರ್ ಸಾಹೇಬರು ಬಹಿರಂಗಪಡಿಸಿ, ಕರ್ನಾಟಕದ ನಕಲಿ ಜಾಲದ ಈ ಕಿಂಗ್‌ಪಿನ್‌ಗಳನ್ನು ಹಿಡಿದಿದ್ದಾರೆ. ಕ್ರಿಮಿನಲ್ ಆಯಾಮದ ಈ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯಿಂದ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ.

ಇಷ್ಟಕ್ಕೇ ಖಾದರ್ ಸುಮ್ಮನಾಗಬಾರದು. ಅವರ ನಡೆ ಇನ್ನಷ್ಟು ಬಿರುಸಾಗಿ, ಬಿಗಿಗೊಳ್ಳಬೇಕು. ಏಕೆಂದರೆ ಇದು ಇಂದು ನೆನ್ನೆಯದ್ದಲ್ಲ. ಇದರ ಕಿಂಗ್‌ಪಿನ್‌ಗಳ್ಯಾರೆಂದು ಆ ವಲಯದಲ್ಲಿರುವ ಜನರಿಗೆಲ್ಲ ಗೊತ್ತು. ಅಷ್ಟೇ ಏಕೆ, ಸ್ವತಃ ಖಾದರ್ ಅವರಿಗೂ ಕೂಡ!!

ಕಳೆದ ಎರಡು ವರ್ಷಗಳಲ್ಲಿ ನಲವತ್ತಕ್ಕೂ ಅಧಿಕ ನಕಲಿ ಔಷಧಿಗಳನ್ನು ಗುರುತಿಸಲಾಗಿದೆ. 2023-24ರಲ್ಲಿ ಹದಿನೇಳು ನಕಲಿ ಔಷಧಿಗಳನ್ನು ಗುರುತಿಸಿದರೆ, 2024-25ರಲ್ಲಿ ಇಪ್ಪತ್ತೈದು ನಕಲಿ ಔಷಧಗಳನ್ನು ಪತ್ತೆ ಮಾಡಲಾಗಿದೆ. ಹಾಗೆಯೇ ಜನ ಬಳಸುತ್ತಿರುವ ಸೌಂದರ್ಯವರ್ಧಕ ಕಾಸ್ಮೆಟಿಕ್ಸ್ (ಕಾಂತಿ ಹೆಚ್ಚಿಸುವಂಥವು) ಕೂಡ ನಕಲಿಯೇ! ಇವುಗಳ ಮಾರಾಟ ಶಿಕ್ಷಾರ್ಹ ಅಪರಾಧ.

ಬೆಂಗಳೂರಿನ ನ್ಯಾಯಾಲಯಗಳಲ್ಲಿ 60, 65 ಸಾವಿರ ರೂಪಾಯಿ ದಂಡವನ್ನು ಕೂಡ ಕೆಲ ಪ್ರಕರಣಗಳಲ್ಲಿ ವಿಧಿಸಲಾಗಿದೆ. ನಕಲಿ ಕುಳಗಳಿಗೆ ಈ ದಂಡ ಯಕಶ್ಚಿತ. ಇದು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಹಿಮಾಚಲ ಪ್ರದೇಶ, ಬಿಹಾರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಕರಾಳ ಕಬಂಧ ಬಾಹುಗಳನ್ನು ಚಾಚಿದೆ. ಒಟ್ಟಾರೆ ಔಷಧ ವ್ಯಾಪಾರದ ಶೇ. 20ರಷ್ಟು ವಹಿವಾಟನ್ನು ಈ ನಕಲಿ ಔಷಧ ಉತ್ಪಾದನೆ ದಂಧೆಕೋರರು ತಮ್ಮ ಕಪಿ ಮುಷ್ಟಿಯಲ್ಲಿಟ್ಟುಕೊಂಡಿದ್ದಾರೆ.

ಅಂದರೆ 35 ಲಕ್ಷ ಕೋಟಿ ವಹಿವಾಟಿನಲ್ಲಿ, 7 ಲಕ್ಷ ಕೋಟಿಗೂ ಅಧಿಕ ನಕಲಿ ಔಷಧಿ ಮತ್ತು ಕಾಸ್ಮೆಟಿಕ್ ದಂಧೆಕೋರರ ವ್ಯವಹಾರವಾಗಿದೆ ಎಂಬುದು ಒಂದು ಅಂದಾಜು. ಖಾದರ್ ಸಾಹೇಬರು ಕೈಗೊಂಡಿರುವ ಈ ಕಾರ್ಯವನ್ನು ಒಂದು ತರ್ಕಬದ್ಧ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು. ಈ ಕರಾಳ ದಂಧೆಯನ್ನು ನಿಯಂತ್ರಿಸಲು ಖಚಿತ ಹೆಜ್ಜೆಗಳನ್ನು ಇಡಬೇಕು.

ಈಗ ಹೋಟೆಲ್ ವಿಷಯಕ್ಕೆ ಬಂದರೆ ಎಲ್ಲ ಹೋಟೆಲ್‌ಗಳಲ್ಲಿರುವ ಅಡುಗೆ ಮನೆಗೆ ಪ್ರವೇಶವಿಲ್ಲ'.ಕಿಚನ್ ರೂಮ್ ಎಂಟ್ರಿ ಪ್ರಾಹಿಬಿಟೆಡ್’ ಬೋರ್ಡ್ ಮೊದಲು ತೆಗೆಸಬೇಕು. ತಾವು ತಿನ್ನುವ ಆಹಾರ ಹೇಗೆ ಸಿದ್ಧವಾಗುತ್ತಿದೆ ಎನ್ನುವುದನ್ನು ತಿಳಿಯುವ ಹಕ್ಕು ಗ್ರಾಹಕರಿಗೆ ಇರಬೇಕು., ಸ್ವಚ್ಛತೆ, ನೈರ್ಮಲ್ಯ ಮತ್ತು ಗುಣಮಟ್ಟದ ಆಹಾರ ಎಲ್ಲರಿಗೂ ಲಭ್ಯವಾಗಬೇಕು.

ಪಂಚತಾರಾ ಹೋಟೆಲ್‌ಗಳಿಗೆ ಹೋಗುವರೆಲ್ಲ ಶ್ರೀಮಂತರು. ಅವರಿಗೆಲ್ಲ ಆಹಾರ ಒಂದು ಪ್ರತಿಷ್ಠೆ. ಆದರೆ ಬಡ, ಮಧ್ಯಮ ವರ್ಗದ ಜನರಿಗೆ ಪರಿಶುದ್ಧ ಪೌಷ್ಟಿಕ, ಶುಚಿಯಾದ ಆಹಾರ ದೊರೆಯಲೇಬೇಕು. ಹಾಗಂತ ಹೋಟೆಲ್ ಉದ್ಯಮಿಗಳಿಗೆ, ಇವನ್ನು ನಡೆಸುವವರ ಮೇಲೆ ದಬ್ಬಾಳಿಕೆ ಹಾಗೂ ದೌರ್ಜನ್ಯ ನಡೆಸಬೇಕೆಂದಿಲ್ಲ. `ಲೈಸೆನ್ಸ್ ರಾಜ್’ ಹೆಸರಲ್ಲಿ ಶೋಷಣೆ ಪ್ರಬಲವಾಗಬೇಕಿಲ್ಲ.

ಹೋಟೆಲ್ ನಡೆಸುವವರು ಕಕ್ಕುತ್ತಿರುವ `ಮಾಮೂಲಿ’ ಬೇರೆಲ್ಲ ಉದ್ಯಮಗಳಿಗಿಂತ ತುಸು ಹೆಚ್ಚು! ಆಹಾರ ನಿರೀಕ್ಷಕರು, ಲೈಸೆನ್ಸ್ ನೀಡುವವರು, ನೈರ್ಮಲ್ಯ ತಪಾಸಣಾ ಅಧಿಕಾರಿಗಳು, ಹೋಟೆಲ್‌ಗಳ ಕಸ, ಮುಸುರೆ ಸಾಗಿಸುವುದರಿಂದ ಹಿಡಿದು ಗಲ್ಲೆಯ ಹಂತದವರೆಗೆ ಮಾಮೂಲಿ ನಿಗದಿ ಮಾಡಿಕೊಂಡಿದ್ದಾರೆ. ಇದನ್ನು ತಪ್ಪಿಸಲೇಬೇಕು. ಒಂದೊಂದು ಊರಿನ ಆಹಾರ ನಿರೀಕ್ಷಕರ ವರ್ಗಾವಣೆ ದಂಧೆಯನ್ನು ಮೊದಲು ನಿಲ್ಲಿಸಬೇಕು.

ಈಗ ಕಳಪೆ ಔಷಧಗಳ ಸಿಕ್ಕಿವೆಯಲ್ಲ, ಅದು ಔಷಧ ನಿಯಂತ್ರಕರಿಗೆ ಡ್ರಗ್ ಇನ್ಸ್‌ಪೆಕ್ಟರ್‌ಗಳಿಗೆ, ಇಲಾಖೆ ಸಿಬ್ಬಂದಿಗೆ ಗೊತ್ತಿಲ್ಲವೆಂದಲ್ಲ. ನಿತ್ಯ ಔಷಧ ಅಂಗಡಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಅಧಿಕಾರಿ ಮಾಮೂಲಿ ಆಸೆಗೆ ಬಲಿಯಾಗಿರುವುದೇ ಈ ಜಾಲ ಬಲಗೊಳ್ಳಲು ಕಾರಣ. ಜನರಿಕ್ ಔಷಧಿ ಕೇಂದ್ರಗಳು ಜನ ಸಾಮಾನ್ಯರಿಗೆ ಭಾರೀ ಅನುಕೂಲವಾಗಿವೆ. ಆದರೆ, ಆಔಷಧಿಗಳ ಲೇಬಲ್ ಪರಿಶೀಲಿಸಿ, 20 ರೂ. ಗೆ ಮಾರಾಟಮಾಡುವ ಗುಳಿಗೆ ಮೇಲೆ ಎಂ.ಆರ್.ಪಿ 100 ರೂ. ಎಂದಿರುತ್ತದೆ. ಅಂದರೆ 20 ರೂ. ಗುಳಿಗೆ ಖಾಸಗಿ ಔಷಧಿ ಅಂಗಡಿಗಳಲ್ಲಿ 100 ರೂ. ಗೆ ಸಿಗುತ್ತದೆ.. ಔಷಧಿ ಕಂಪನಿಗಳ ಲಾಭ ನೋಡಿ!

ಬಿಗಿ ಶಿಕ್ಷೆ ಮತ್ತು ಪ್ರತ್ಯೇಕ ತಪಾಸಣಾ ವಿಭಾಗವನ್ನು ಈಗ ಸಿದ್ಧಪಡಿಸಬೇಕಾಗಿದೆ. ಕಳಪೆ ಆಹಾರ, ನಕಲಿ ಔಷಧಿ ತಪಾಸಣೆಗೆ ಉತ್ತಮ ಲ್ಯಾಬ್ ಅಗತ್ಯವಿದೆ. ಹಾಗೇ ಎಲ್ಲ ಆಸ್ಪತ್ರೆಗಳ, ವೈದ್ಯರ ಮತ್ತು ನಕಲಿ ಹಾಗೂ ಅಕ್ರಮ ಡ್ರಗ್ಸ್ ದಂಧೆಯ `ಮಿಲಾಪಿ’ಯನ್ನು ನಿಯಂತ್ರಿಸಿದರೆ ಜನಕ್ಕೆ ಉತ್ತಮ ಆಹಾರ ಮತ್ತು ಔಷಧಿ ದೊರೆತೀತು. ಖಾದರ್ ಸಾಹೇಬರು ಇದೆಲ್ಲವನ್ನು ಬಲ್ಲವರಾಗಿದ್ದೂ ಅದಕ್ಕೆ ಶಸ್ತ್ರಚಿಕಿತ್ಸೆ ನೀಡುವ ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದಾರೆ. ಈ ವಿಷಯದಲ್ಲಿ ಅವರು ಮೈಮರೆಯಬಾರದು.

ತುಕಾರಾಮ್ ಮುಂಡೆಯಂತಹ ಸ್ಲಂ ಬಾಯ್ `ಸಿಂಗಂ’ ಆದದ್ದಕ್ಕೆ, ಖಾದರ್-ಇಟ್ಟಿರುವ ಹೆಜ್ಜೆಗಳಿಗೆ, ಆಶಯಕ್ಕೆ ಧಕ್ಕೆ ಬರಬಾರದು ಅಲ್ಲವೇ!? ಎಲ್ಲಕ್ಕೂ ಮುಖ್ಯವಾಗಿ ಶುದ್ಧ ಆಹಾರ-ಯೋಗ್ಯ ಚಿಕಿತ್ಸೆ ಎಲ್ಲರ ಹಕ್ಕು ಮತ್ತು ಲಭ್ಯವಾಗಬೆಕಲ್ಲವೇ?