ಚಿತ್ರ: ಟಾಕ್ಸಿಕ್
ನಿರ್ದೇಶನ: ಗೀತು ಮೋಹನ್‌ದಾಸ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಕ್ರಿಯೇಷನ್ಸ್
ತಾರಾಗಣ: ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಮತ್ತಿತರರು.
ರೇಟಿಂಗ್ಸ್: 3
ಗಣೇಶ್ ರಾಣೆಬೆನ್ನೂರು
`ಇಲ್ಲಿ ಹೀರೋ ಯಾರು ಎಂದು ತಲೆ ಕೆಡಿಸಿಕೊಳ್ಳಬೇಡಿ… ಇಬ್ಬರೂ ವಿಲನ್ನೇ…’
ಸಿನಿಮಾ ಇನ್ನೇನು ಮುಗಿಯುವ ಹೊತ್ತಿಗೆ ಹೀಗೊಂದು ಡೈಲಾಗ್ ಕೇಳಿ ಬರುತ್ತದೆ. ಅಲ್ಲಿಗೆ ಅಪ್ಪ-ಮಗನ ಪೈಕಿ ‘ನಾಯಕ’ ಯಾರು ಎಂದು ತೀರ್ಮಾನಿಸುವ ಗೋಜಿಗೆ ಹೋಗುವ ಕೆಲಸವನ್ನು ಕೊಡದೇ ಅಂತಿಮತೀರ್ಪು ಎಂಬಂತೆ ಒಂದೇ ಸಾಲಿನಲ್ಲಿ ನಾಯಕನ ಗುಣ-ಅವಗುಣ ಏನೆಂಬುದಕ್ಕೆ ಮುದ್ರೆ ಒತ್ತಲಾಗುತ್ತದೆ. ಅಲ್ಲಿಗೆ ಇಡೀ ಸಿನಿಮಾದ ಕಥಾಸಾರಾಂಶ ಅಥವಾ ಒನ್‌ಲೈನ್ ಏನೆಂದು ತಿಳಿಯುತ್ತದೆ.
ಸಿನಿಮಾದುದ್ದಕ್ಕೂ ನಾಯಕ ಕುಡಿದ ಮತ್ತಿನಲ್ಲೇ ತೇಲಾಡುತ್ತಾನೆ… ವಾಲಾಡುತ್ತಾನೆ. ಕೆಲವೊಮ್ಮೆ ಮಾದಕದ್ರವ್ಯ ಸೇವನೆ ಹೆಚ್ಚಾಗಿ ಮೈಮೇಲೆ ಮಾದಕತೆಯೂ ತುಸು ಹೆಚ್ಚಾಗಿದೆ. ಸಾಕೆನಿಸುವಷ್ಟು ಹೊಡೆದಾಟವಿದೆ… ಲೀಟರ್ ಗಟ್ಟಲೆ ರಕ್ತ ಹರಿಸಲಾಗಿದೆ. ಗುಂಡಿನ ಸುರಿಮಳೆ ಗೈಯ್ಯಲಾಗಿದೆ… ಅಗತ್ಯಕ್ಕಿಂತ ಅಧಿಕವಾಗಿಯೇ ಕೈ-ಕಾಲು ಕತ್ತರಿಸಲಾಗುತ್ತದೆ. ಇವೆಲ್ಲದರ ಮಧ್ಯೆ ಒಂಚೂರು ಸೆಂಟಿಮೆಂಟ್‌ಗೂ ಜಾಗ ಮಾಡಿಕೊಡಲಾಗಿದೆ..!
ಇಷ್ಟೆಲ್ಲಾ ಘಟಿಸಿದ ಬಳಿಕ ಪ್ರೇಕ್ಷಕರಿಗೆ ‘ಮಧ್ಯಂತರ’ ವಿರಾಮ…
‘ಮುಂದೇನೋ ನಡೆಯುತ್ತದೆ…’ ಎಂದುಕೊಂಡೇ ಮೊದಲಾರ್ಧ ಮುಂದೂಡಿದ್ದವರಿಗೆ ದ್ವಿತೀಯಾರ್ಧ ನಿರಾಸೆಯಾಗುವ ಸಾಧ್ಯತೆಗಳೇ ಹೆಚ್ಚು! ಯಾಕೆಂದರೆ ಫಸ್ಟ್ ಹಾಫ್‌ನಲ್ಲಿದ್ದ ಬಿಗಿಯಾದ ನಿರೂಪಣೆ ಇಲ್ಲಿ ಜಾಳು ಜಾಳಾಗುತ್ತಾ ಸಾಗುತ್ತದೆ. ಪಾತ್ರಧಾರಿಗಳ ಸಂಖ್ಯೆ ಕ್ಷೀಣಿಸುತ್ತಿದ್ದಂತೆ ಸಿನಿಮಾದೊಳಗಿನ ಸತ್ವವೂ ಬಡಕಲಾಗುತ್ತದೆ. ಹಾಗೆ ನೋಡಿದರೆ ಸಕೆಂಡ್ ಹಾಫ್‌ಗಿಂತ ಫಸ್ಟ್ ಹಾಫ್‌ನಲ್ಲೇ ಕಥೆ, ಚಿತ್ರಕಥೆ, ತುಸು ರೋಚಕತೆ, ಹೆಚ್ಚೇ ಮಾದಕತೆ ಅಡಕವಾಗಿರುವಂತೆ ಭಾಸವಾಗುತ್ತದೆ. ಆದರೆ ಕೆಲವೊಂದು ಹಸಿಬಿಸಿ ದೃಶ್ಯಗಳು ಬಂದಾಗ ಕಸಿವಿಸಿಯಾವುದು ಖಚಿತ..! ಮೇಕಿಂಗ್ ‘ರಾಯಲ್’ ಆಗಿದೆ… ಆದರೆ ಕಥೆಗೆ ‘ಲಾಯಲ್’ ಆಗಿದ್ದರೆ ಅದರ ಗತ್ತು-ಗಮ್ಮತ್ತು ಬೇರೆಯದ್ದೇ ಆಗಿರುತ್ತಿತ್ತು…
ಮಾಸ್ ಮಸಾಲಾ ತುಂಬಿದರೆ ಎಲ್ಲರಿಗೂ ರುಚಿಸುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಹಾಗೆಯೇ ಇದೇ ಕಥೆಯನ್ನು ಬೇರೆ ದೃಷ್ಟಿಕೋನದಲ್ಲಿ ಕಟ್ಟಿಕೊಡುವ ಸಾಧ್ಯತೆಗಳಿದ್ದವು. ಆದರೆ ಅದನ್ನು ಮೊದಲಾರ್ಧದಲ್ಲೇ ನಿರ್ದೇಶಕಿ ಕೈಚೆಲ್ಲಿ ಕುಳಿತಿದ್ದಾರೆ ಎಂಬುದು ತಿಳಿಯುತ್ತದೆ. ನಾಯಕನ ವೈಭವೀಕರಣಕ್ಕೆ ಕೊಟ್ಟ ಮಾನ್ಯತೆ, ಪಾತ್ರ ಪೋಷಣೆಗೆ ದಕ್ಕಿಲ್ಲ ಎಂಬುದು ವಿಷಾದಕರ. ಕೆಲವೊಂದು ಪಾತ್ರಗಳು ಹುಟ್ಟಿದಷ್ಟೇ ವೇಗವಾಗಿ ಸಾಯುತ್ತವೆ. ಭಾವುಕತೆ ಸೃಷ್ಟಿಯಾಗಬೇಕಿದ್ದ ಜಾಗವನ್ನು ಹಿನ್ನೆಲೆ ಶಬ್ದ ಆಕ್ರಮಿಸಿಕೊಳ್ಳುತ್ತದೆ! ಹೀಗಾಗಿ ಕೆಲವು ದೃಶ್ಯಗಳು ಇನ್ನೇನು ಆಪ್ತವಾಗುತ್ತಿದೆ ಎನ್ನುವಷ್ಟರಲ್ಲಿ ರಸಭಂಗವಾಗುತ್ತದೆ.
ಇಡೀ ಚಿತ್ರದಲ್ಲಿ ಕಣ್ಣಿಗೆ ಕಟ್ಟಿದಂತೆ ಕಾಣಸಿಗುವುದು ಯಶ್ ಮತ್ತು ಯಶ್ ಮಾತ್ರ..! ಅಭಿನಯ, ಮ್ಯಾನರಿಸಂ, ಡೈಲಾಗ್ ಡೆಲಿವರಿ, ಆಕ್ಷನ್, ರೊಮ್ಯಾನ್ಸ್… ಎಲ್ಲದರಲ್ಲೂ ಎಂದಿನಂತೆ ‘ರಾಕಿಂಗ್…’ ಆದರೆ ಭಾವನಾತ್ಮಕ ದೃಶ್ಯಗಳಲ್ಲಿ ಮತ್ತಷ್ಟು ತಯಾರಾಗುವ ಅವಶ್ಯಕತೆ ಇತ್ತು. ಕ್ಲೈಮ್ಯಾಕ್ಸ್ ಹೊತ್ತಿಗೆ ಬಸವಳಿದಂತೆ ಕಾಣುವ ಯಶ್, ಆರಂಭದಲ್ಲಿದ್ದ ಜೋಶ್ ಕಾಣಿಸುವುದಿಲ್ಲ.
ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಹಾಗೂ ತಾರಾ ಸುತಾರಿಯಾ ಮತ್ತಿತರರು ಪಾತ್ರೋಚಿತವಾಗಿ ನಟಿಸಿದ್ದಾರೆ. ಸನ್ನಿವೇಶಕ್ಕನುಗುಣವಾಗಿ ಹಾಡುಗಳು ಬಂದು ಹೋಗುತ್ತವೆ. ಒಂದೆರಡು ಮಾತ್ರ ಗುನುಗುವಂತಿದೆ. ಹಿನ್ನೆಲೆ ಶಬ್ದ ಕೆಲವೊಮ್ಮೆ ಪಾತ್ರಧಾರಿಗಳ ಧ್ವನಿಯನ್ನೇ ಮರೆಮಾಚುತ್ತದೆ. ಕಲಾ ನಿರ್ದೇಶನ ಹಾಗೂ ಛಾಯಾಗ್ರಹಣ ಗಮನ ಸೆಳೆಯುತ್ತದೆ.






















