SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಈದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ: ಆರೋಪಿ ವಶಕ್ಕೆ

ಈದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ: ಆರೋಪಿ ವಶಕ್ಕೆ

0
110

ಅಂಕೋಲಾ: ಅಂಕೋಲಾ ತಾಲೂಕಿನಲ್ಲಿ ಬುಧವಾರ ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ರಾಷ್ಟ್ರಧ್ವಜವನ್ನು ಪ್ರದರ್ಶಿಸಿದ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಅಂಕೋಲಾ ಬೊಬ್ರುವಾಡದಿಂದ ಆರಂಭಗೊಂಡ ಈದ್ ಮಿಲಾದ್ ಮೆರವಣಿಗೆಯು ಕೆಣಿ ಕ್ರಾಸ್ ಹಾಗೂ ಬಂಡಿಬಜಾರ್ ರಸ್ತೆಯ ಬಳಿ ಸಾಗುತ್ತಿದ್ದಾಗ, ಓರ್ವ ವ್ಯಕ್ತಿ ಉದ್ದೇಶಪೂರ್ವಕವಾಗಿ ಪ್ಯಾಲೆಸ್ಟೈನ್ ರಾಷ್ಟ್ರಧ್ವಜವನ್ನು ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ.

ಈ ಕೃತ್ಯವನ್ನು ಗಮನಿಸಿದ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಅವರು ಹಿರಿಯ ಮುಖಂಡರ ನೆರವಿನಿಂದ ಧ್ವಜವನ್ನು ವಶಕ್ಕೆ ಪಡೆದು, ಮೆರವಣಿಗೆಯಲ್ಲಿ ಯಾವುದೇ ವಿದೇಶಿ ಅಥವಾ ಪ್ರಚೋದನಕಾರಿ ಧ್ವಜಗಳನ್ನು ಪ್ರದರ್ಶಿಸದಂತೆ ಎಚ್ಚರಿಕೆ ನೀಡಿದರು.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕೃಷ್ಣಾಪುರದ ಮಿರ್ಕಲ್ ಘಾಟ್ ಪ್ರದೇಶದ ನಿವಾಸಿ ಮೊಹಮ್ಮದ್ ರಜಾ ಶೇಖ್‌ನನ್ನು ವಶಕ್ಕೆ ಪಡೆದಿದ್ದಾರೆ. ಮೆರವಣಿಗೆ ನಂತರ ಸಿಪಿಐ ಅವರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಪೊಲೀಸರು ಶಾಂತಿ ಸಭೆ ಆಯೋಜಿಸಿ ಸ್ಪಷ್ಟ ಮಾರ್ಗದರ್ಶನ ನೀಡಿದ್ದರೂ ಸಹ ಇಂತಹ ಕೃತ್ಯ ನಡೆದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.