ಸಾಹಸಿಗ ಕೋತಿರಾಜ್ ದಾಂಪತ್ಯ ಜೀವನಕ್ಕೆ: ಚಿತ್ರದುರ್ಗದಲ್ಲಿ ಗಣ್ಯರಿಂದ ಶುಭಾಶಯಗಳ ಮಹಾಪೂರ – ಆಹ್ವಾನ ಇಲ್ಲದಿದ್ದರೂ ಗಣ್ಯರ ಪ್ರೀತಿ
ಈ.ಮಹೇಶಬಾಬು
ಸಂ.ಕ.ಸಮಾಚಾರ, ಚಿತ್ರದುರ್ಗ : ವಿವಾಹ ಸೇರಿ ಶುಭ ಕಾರ್ಯಗಳಿಗೆ ಗಣ್ಯರು ಆಗಮಿಸಿ ಶುಭಹಾರೈಸಬೇಕೆಂಬುದು ಬಹುತೇಕ ಜನರ ಮಹಾದಾಸೆ. ಮನೆ ಬಾಗಿಲಿಗೆ ಖುದ್ದು ಹೋಗಿ ಆಹ್ವಾನ ಪತ್ರಿಕೆ ಕೊಟ್ಟು, ಡೈರಿಯಲ್ಲಿ ಎಂಟ್ರಿ ಮಾಡಿಸಿ, ಹತ್ತಾರು ಬಾರಿ ಫೋನ್ ಮಾಡಿ ಬರಲೇಬೇಕೆಂದು ಪಟ್ಟು ಹಿಡಿದು, ಅವರ ಆಗಮನದ ದಾರಿ ಕಾದರೂ ಕೆಲವೊಮ್ಮೆ ನಿರಾಸೆ ಸಹಜ. ಆದರೆ, ಸಾಹಸಿಗನೊಬ್ಬನ ಮದುವೆ ಸಮಾರಂಭಕ್ಕೆ ಆಹ್ವಾನ ಇಲ್ಲದಿದ್ದರೂ ನೂರಾರು ಮಂದಿ ಖುದ್ದು ಹಾಜರಾಗಿ ಹೂಗುಚ್ಛ ಕೈಗಿಟ್ಟು ಶುಭಹಾರೈಸಿದ ಕ್ಷಣಕ್ಕೆ ಚಿತ್ರದುರ್ಗ ಭಾನುವಾರ ಸಾಕ್ಷಿಕರಿಸಿತು.
ಕೋಟೆಕೊತ್ತಲು, ಜೋಗ್‌ಫಾಲ್ಸ್, ಬೆಟ್ಟಗುಡ್ಡ, ಆಕಾಶದೆತ್ತರದ ಬೃಹತ್ ಕಟ್ಟಡಗಳನ್ನು ನೋಡುಗರು ಉಸಿರು ಬಿಗಿಹಿಡಿದುಕೊಳ್ಳುವಂತೆ ಕೈಜಾರಿ ಬಿದ್ದೇಬಿಟ್ಟಂತೆ ಅಲ್ಲಲ್ಲಿ ಝಲಕ್ ಮೂಲಕ ಕ್ಷಣಾರ್ಧದಲ್ಲಿ ಹತ್ತಿ ಮೇಲೆ ನಿಂತು ಕೈಬಿಸಿ ನಗುವ ಸಾಹಸಿಗನೊಬ್ಬ ಸಾಂಸಾರಿಕ ಜೀವನ ಪ್ರವೇಶಿಸಿದ್ದಾನೆ.
ಈ ವೇಳೆ ಗಣ್ಯಾತೀಗಣ್ಯರು ಹಾಜರಾಗಿ ಶುಭ ಹಾರೈಸಿದ್ದು ವಿಶೇಷ. ತಮಿಳುನಾಡಲ್ಲಿ ಹುಟ್ಟಿ, ಚಿತ್ರದುರ್ಗವನ್ನೇ ಕರ್ಮಭೂಮಿ ಮಾಡಿಕೊಂಡು, ಕರುನಾಡಲ್ಲಿ ಮನೆ ಮಾತಾಗಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ನಗರದ ಮೇದೆಹಳ್ಳಿ ಸಮೀಪದ ವೈಭವ ಗಾರ್ಡನ್ ಮಂಟಪದಲ್ಲಿ ಕೌಟಂಬಿಕ ಜೀವನ ಪ್ರವೇಶಿಸಿದ್ದು,
ಈ ಕ್ಷಣಕ್ಕೆ ಜಿಲ್ಲಾ ಸಚಿವ ಟಿ.ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಎಎಸ್‌ಪಿ ಶಿವಕುಮಾರ್, ಪಿಐ ಬಾಲಚಂದ್ರ ನಾಯ್ಕ್, ಹಾಲಿ-ಮಾಜಿ ಜನಪ್ರತಿನಿಧಿಗಳು, ಉದ್ಯಮಿಗಳು, ಪತ್ರಕರ್ತರು, ವಿವಿಧ ಸಂಘಟನೆಗಳ ಪ್ರಮುಖರು, ಕಿರುತೆರೆ ನಟರು, ನಿರ್ದೇಶಕರು ಸಾಕ್ಷಿಕರಿಸಿದರು.
ಆರ್ಥಿಕವಾಗಿ ಅಷ್ಟಾಗಿ ಸದೃಢನಲ್ಲದ ಕೋತಿರಾಜ್ ವಿವಾಹ ಕಾರ್ಯಕ್ಕೆ ದುರ್ಗದ ಜನ, ಜನಪ್ರತಿನಿಧಿಗಳು, ಅಧಿಕಾರಿಗಳು ನೆರವು ಆಗಿದ್ದಷ್ಟೇ ಅಲ್ಲದೆ, ಒತ್ತಡದ ಮಧ್ಯೆಯೂ ಮದುವೆ ಮಂಟಪಕ್ಕೆ ಆಗಮಿಸಿ ಶುಭಹಾರೈಸಿದ್ದು ಗಮನಸೆಳೆಯಿತು. ತಲೆಗೊಂದು ಕರ್ಚಿಪ್, ಸೊಂಟದಲ್ಲಿ ಚಿಕ್ಕದೊಂದು ಬ್ಯಾಗ್, ಕೈಯಲ್ಲಿ ಗ್ರಿಪ್ ಪೌಡರ್, ದೊಡ್ಡ ನಿಕ್ಕರಲ್ಲಿಯೇ ಸದಾ ಇರುತ್ತಿದ್ದ ಕೋತಿರಾಜ್, ಶನಿವಾರ-ಭಾನುವಾರ ರೇಷ್ಮೆ ಪಂಚೆ, ಜುಬ್ಬಾ, ಪೇಟಾ, ಅರತಕ್ಷತೆ ವೇಳೆ ಶೂಟುಬೂಟಲ್ಲಿ ಕಂಗೊಳಿಸುತ್ತಿದ್ದು ಸಂಭ್ರಮಕ್ಕೆ ಕಾರಣವಾಗಿತ್ತು.
ವರ್ಷ 2000ರಲ್ಲಿ ತಮಿಳುನಾಡಿನಿಂದ ರಾಜ್ಯಕ್ಕೆ ವಲಸೆ ಬಂದು, ವಿಜಾಪುರ ಗೊಲ್ಲರಹಟ್ಟಿಯ ಮನೆಯೊಂದರಲ್ಲಿ ಆಶ್ರಯ ಪಡೆದು, ಚಿತ್ರದುರ್ಗ ನಗರದಲ್ಲಿ ಗಾರೆಕೆಲಸ ಮಾಡಿಕೊಂಡಿದ್ದ ಜ್ಯೋತಿರಾಜ್ ವಿದ್ಯುತ್ ಕಂಬ, ಕಟ್ಟಡಗಳನ್ನು ಚಾಕಚಕ್ಯತೆಯಿಂದ ಹತ್ತುವುದನ್ನು ದುರ್ಗದ ಜನ ಕಂಡು ಬೆರಗಾಗಿದ್ದರು. ಯಾವುದೇ ಪರಿಕರಗಳಿಲ್ಲದೆ ಕೇವಲ ಕೈಯಿಂದಲೇ ಕಲ್ಲುಬಂಡೆಗಳನ್ನು ಕೋತಿ ರೀತಿ ಹತ್ತುವುದನ್ನು ಕಂಡ ಜನರ ಬಾಯಲ್ಲಿ ಕೋತಿರಾಜ್ ಹೆಸರು ಹೊರಹೊಮ್ಮಿದ್ದು, ಆತನ ಸಾಹಸಕ್ಕೆ ಇದೇ ಹೆಸರು ಬಿರುದಾಗಿ ಪರಿಣಮಿಸಿದೆ. ಎಲ್ಲಿಯೇ ಹೋಗಲಿ ಜನ ಕೋತಿರಾಜ್ ಎಂದೇ ಗುರುತಿಸುತ್ತಾರೆ.
ಓಡಿಶಾ ರಾಜ್ಯ ಸಾಹಸ ಕ್ರೀಡೆ ಹಾಗೂ ಮತದಾನ ಜಾಗೃತಿ ರಾಯಭಾರಿ ಆಗಿ ಸೇವೆ ಸಲ್ಲಿಸಿರುವ ಜ್ಯೋತಿರಾಜ್ ಜೀವನಗಾಥೆ ಕುರಿತ ಚಲನಚಿತ್ರ ತೆರೆ ಕಂಡಿದ್ದು, ಎಂಟತ್ತು ವರ್ಷದ ಹಿಂದೆಯೇ ವಿವಾಹ ಆಗಬೇಕಾಗಿತ್ತು. ಆದರೆ, ಜೋಗ್‌ಫಾಲ್ಸನಲ್ಲಿ ಬಿದ್ದು ಸೊಂಟ-ಕಾಲು ಮುರಿದುಕೊಂಡಿದ್ದರಿಂದ ನಿಗದಿ ಆಗಿದ್ದ ಮದುವೆಯೇ ಮುರಿದುಬಿದ್ದಿತ್ತು. ಆದರೆ, ಎಂತಹ ಕಲ್ಲುಹೃದಯವನ್ನೇ ಅಲುಗಾಡಿಸುವ ರೀತಿ ಕಲ್ಲಿನಕೋಟೆ ಹತ್ತುವ ಸ್ಪೈಡರ್ ಮ್ಯಾನ್ ಸಾಹಸದ ದೃಶ್ಯವನ್ನು ಕಣ್ಣಾರೆ ಕಂಡಿರುವ ಈತನ ದೂರದ ಸಂಬಂಧಿ ದೊಡ್ಡಉಳ್ಳಾರ್ತಿ ಗ್ರಾಮದ ನಿವೇದಿತಾ ಮಂಕಿಮ್ಯಾನ್ ಜೀವನದಲ್ಲಿ ಧೈರ್ಯವಾಗಿ ಪ್ರವೇಶಿಸಿದ ಕ್ಷಣ ಕೋಟೆನಾಡು ಜನರ ಮಟ್ಟಿಗೆ ಸಂಭ್ರಮವಾಗಿತ್ತು.
ನಿವೇದಿತಾ ನಿನಗಿಂತಲೂ ಧೈರ್ಯವಂತೆ
ಏ ಮಂಕಿಮ್ಯಾನ್ ನೀ ಕರೆಯದಿದ್ರೂ ಮದುವೆ ವಿಷಯ ಗೊತ್ತಾಗಿ ನಮ್ಮೂಡ್ಗನೆಂಬ ಅಭಿಮಾನಕ್ಕೆ ಬಂದಿದ್ದೇವೆ, ನಿನಗೆ ಒಳ್ಳೆಯದು ಆಗ್ಲಿ, ನಿನ್ನ ಸಾಹಸದ ಹುಚ್ಚಾಟಕ್ಕೆ ಬೆಚ್ಚದೆ ನಿನ್ನ ಕೈಹಿಡಿಯುತ್ತಿರುವ ನಮ್ ಜಿಲ್ಲೆಯ ಹುಡುಗಿ ನಿವೇದಿತಾ ನಿನಗಿಂತಲೂ ಧೈರ್ಯವಂತೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಇನ್ಮುಂದೆ ಸಾಹಸದ ವೇಳೆ ಸೆಫ್ಟಿ ವಸ್ತು ಬಳಸಬೇಕೆಂಬ ಬಹುತೇಕ ಗಣ್ಯರ ಪ್ರೀತಿಯ ಕಿವಿಮಾತುಗಳು ಮದುವೆ ಮಂಟಪದಲ್ಲಿ ಗಮನಸೆಳೆದವು.
ಇನ್ಮುಂದೆ ಸೆಫ್ಟಿ : ಕೋಟೆ, ಕಟ್ಟಡ ಹತ್ತುವ ವೇಳೆ ಜಾಗ್ರತೆ ವಹಿಸುತ್ತೇನೆ. ನನ್ನನ್ನೇ ನಂಬಿಕೊಂಡಿರುವ ಜೀವವೊಂದು ಇದೆ ಎಂಬ ಅರಿವು ನನ್ನಲ್ಲಿರಲಿದೆ. ಇನ್ಮುಂದೆ ಸೆಫ್ಟಿ ವಸ್ತು ಬಳಸದೆ ಸಾಹಸ ಮಾಡುವುದಿಲ್ಲ ಎನ್ನುತ್ತಾರೆ ಕೋತಿರಾಜ್.
- DIPR ವಿರುದ್ಧ ಕಿಡಿ: ನಾಗೇಂದ್ರ ರಾಜೀನಾಮೆಗೆ ರಾತ್ರಿಯಿಡೀ ಪ್ರತಿಭಟನೆ
- ಅಕ್ಷಯ್ ಖನ್ನಾ ಗ್ಲಿಂಪ್ಸ್ ಧಮಾಕ: ‘ಮಹಾಕಾಳಿ’ ರಿಲೀಸ್ ಡೇಟ್ ಘೋಷಣೆ
- ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ನಾಯಕರ ಬಂಧನ
- ಪೊಂಗಲ್ನಿಂದ ಅರ್ಹ ಕುಟುಂಬಗಳಿಗೆ 3 ಉಚಿತ LPG ಸಿಲಿಂಡರ್
- ತಾರಕ್ ಮೆಹ್ತಾ ಕಾ ಊಲ್ಟಾ ಚಶ್ಮಾ: ಆರಂಭದಿಂದ 18 ವರ್ಷಗಳ ಪಯಣ; ನಗುವಿನ ಮೂಲಕ ಸಮಾಜದ ಕನ್ನಡಿ ಹಿಡಿದ ಸೂಪರ್ ಹಿಟ್ ಸೀರಿಯಲ್






















