ದಾವಣಗೆರೆ: ಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಬಿಡುಗಡೆ ವಿಚಾರದಲ್ಲಿ ರೈತ ಮುಖಂಡರ ನಡುವೆ ಉಂಟಾಗಿರುವ ಅಭಿಪ್ರಾಯ ಭೇದಗಳನ್ನು ಬಗೆಹರಿಸಿ, ಎಲ್ಲರೂ ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕರೆ ನೀಡಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ತಕ್ಷಣವೇ ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದರೆ, ಇನ್ನು ಕೆಲವರು ಬೇಸಿಗೆಯಲ್ಲಿ ನೀರು ಅಗತ್ಯವಿರುವುದರಿಂದ ಸದ್ಯ ನೀರು ಬಿಡುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಗೊಂದಲ ಉಂಟಾಗಿದೆ. ಹೀಗಾಗಿ ನೀರು ಬೇಕು ಎನ್ನುವವರು ಹಾಗೂ ಬೇಡ ಎನ್ನುವವರು ಎಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಚರ್ಚೆ ನಡೆಸಿ ಒಮ್ಮತದ ತೀರ್ಮಾನ ಕೈಗೊಂಡರೆ, ಆ ನಿರ್ಧಾರಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಸಮಾನವಾಗಿ ನೀರು ಹಂಚಿಕೆಗೆ ಒತ್ತು: ಪ್ರತಿಯೊಬ್ಬರಿಗೂ ಸಮಾನವಾಗಿ ನೀರು ತಲುಪಬೇಕು. ಯಾರಿಗೆ ಹೆಚ್ಚು, ಯಾರಿಗೆ ಕಡಿಮೆ ಎಂಬ ಭೇದಭಾವ ಇರಬಾರದು. ದೊಡ್ಡ ಕೆರೆಗಳಿಗೂ ನೀರು ತಲುಪುವಂತೆ ಸಮರ್ಪಕವಾಗಿ ನೀರು ಹಂಚಿಕೆ ಮಾಡಬೇಕಿದೆ ಎಂದು ಹೇಳಿದರು.
ಭದ್ರಾ ಜಲಾಶಯದ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪೈಪ್ಲೈನ್ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಬೇಕಾಗಿದೆ. ಪೈಪ್ಲೈನ್ನ ವಾಲ್ವ್ಗಳನ್ನು ಹೆಚ್ಚು-ಕಡಿಮೆ ತೆರೆಯುವ ವಿಚಾರದಲ್ಲಿ ಉಂಟಾಗುತ್ತಿರುವ ಗೊಂದಲಗಳನ್ನು ನಿವಾರಿಸಿ, ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ನೀರಿನ ಹಂಚಿಕೆಯಲ್ಲಿ ಯಾರಿಗೂ ಅನ್ಯಾಯವಾಗಬಾರದು. ಎಲ್ಲರಿಗೂ ನೀರು ತಲುಪುವ ಶಾಶ್ವತ ಪರಿಹಾರದ ಪರವಾಗಿ ನಾನು ಇದ್ದೇನೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ಪಷ್ಟಪಡಿಸಿದರು.




















