SK Home Ad
Home ನಮ್ಮ ಜಿಲ್ಲೆ ವಿಜಯನಗರ ತುಂಗಭದ್ರಾ ಹಿನ್ನೀರಿನಲ್ಲಿ ದುರಂತ: ಮೂವರು ಯುವಕರು ನೀರುಪಾಲು – ಓರ್ವನ ಮೃತದೇಹ ಪತ್ತೆ

ತುಂಗಭದ್ರಾ ಹಿನ್ನೀರಿನಲ್ಲಿ ದುರಂತ: ಮೂವರು ಯುವಕರು ನೀರುಪಾಲು – ಓರ್ವನ ಮೃತದೇಹ ಪತ್ತೆ

0
97
ತುಂಗಭದ್ರಾ ನದಿಯ ಹಿನ್ನೀರಿಗೆ ತೆರಳಿದ್ದ ಮೂವರು ಯುವಕರು ನೀರುಪಾಲಾಗಿದ್ದಾರೆ. ಓರ್ವನ ಮೃತದೇಹ ಪತ್ತೆಯಾಗಿದ್ದು, ಇಬ್ಬರಿಗಾಗಿ SDRF ಶೋಧ ಕಾರ್ಯ ಮುಂದುವರಿದಿದೆ.

ವಿಜಯನಗರ: ಮೀನು ಹಿಡಿಯಲು ತುಂಗಭದ್ರಾ ನದಿಯ ಹಿನ್ನೀರಿಗೆ ತೆರಳಿದ್ದ ಮೂವರು ಯುವಕರು ನೀರುಪಾಲಾಗಿ ನಾಪತ್ತೆಯಾಗಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಯಮನಪ್ಪ (20) ಎಂಬ ಯುವಕನ ಮೃತದೇಹ ಪತ್ತೆಯಾಗಿದ್ದು, ರಾಜ (22) ಹಾಗೂ ಅಜ್ಜಪ್ಪ (26) ಎಂಬ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹಾಗೂ SDRF ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಯಮನಪ್ಪ, ರಾಜ ಹಾಗೂ ಅಜ್ಜಪ್ಪ ಮೂವರು ಮೀನು ಹಿಡಿಯುವ ಉದ್ದೇಶದಿಂದ ತಂಬ್ರಳ್ಳಿ ಗ್ರಾಮದ ಸಮೀಪದ ತುಂಗಭದ್ರಾ ನದಿಯ ಹಿನ್ನೀರಿಗೆ ತೆರಳಿದ್ದರು. ಆದರೆ ಸಂಜೆ ಕಳೆದರೂ ಯುವಕರು ಮನೆಗೆ ವಾಪಸ್‌ ಆಗದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಆತಂಕ ಉಂಟಾಗಿದೆ. ಬಳಿಕ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಹಗರಿಬೊಮ್ಮನಹಳ್ಳಿ ಪೊಲೀಸರು ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಮೂವರು ಯುವಕರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಘಟನೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ SDRF ತಂಡವನ್ನೂ ಸ್ಥಳಕ್ಕೆ ಕರೆಸಲಾಗಿದ್ದು, ನದಿಯ ಹಿನ್ನೀರಿನಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಶೋಧ ಕಾರ್ಯದ ವೇಳೆ ಯಮನಪ್ಪ ಅವರ ಮೃತದೇಹ ಪತ್ತೆಯಾಗಿದೆ. ಪೊಲೀಸರು ಹಾಗೂ ಸ್ಥಳೀಯರು ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಉಳಿದ ಇಬ್ಬರು ಯುವಕರಾದ ರಾಜ ಮತ್ತು ಅಜ್ಜಪ್ಪ ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಘಟನೆಯಿಂದ ತಂಬ್ರಳ್ಳಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಾಪತ್ತೆಯಾಗಿರುವ ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನದಿಯ ಹಿನ್ನೀರಿನ ಆಳ ಹಾಗೂ ನೀರಿನ ಹರಿವಿನ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಎಚ್ಚರಿಕೆಯಿಂದ ನಡೆಸಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ತಂಬ್ರಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.