SK Home Ad
Home ಸುದ್ದಿ ರಾಜ್ಯ KPSC ಪ್ರಕರಣ: ದಾವಣಗೆರೆಯ ಅಭ್ಯರ್ಥಿ ನಿವಾಸದ ಮೇಲೆ ED ದಾಳಿ

KPSC ಪ್ರಕರಣ: ದಾವಣಗೆರೆಯ ಅಭ್ಯರ್ಥಿ ನಿವಾಸದ ಮೇಲೆ ED ದಾಳಿ

0
65
ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ತನಿಖೆ: ದಾವಣಗೆರೆಯಲ್ಲಿ ಅಭ್ಯರ್ಥಿ ಮನೆ ಮೇಲೆ ED ದಾಳಿ

ದಾವಣಗೆರೆಯಲ್ಲೂ ಅಭ್ಯರ್ಥಿ ಮನೆ ಮೇಲೆ ಇಡಿ ದಾಳಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದ ತನಿಖೆ

ದಾವಣಗೆರೆ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಲಯ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ದಾವಣಗೆರೆಯಲ್ಲೂ ದಾಳಿ ನಡೆಸಿದ್ದಾರೆ.

ನಗರದ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿರುವ ಅಭ್ಯರ್ಥಿ ಅವರ ನಿವಾಸದ ಮೇಲೆ ಬೆಳಗ್ಗೆ ಸುಮಾರು ೬ ಗಂಟೆಗೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಬಿಗಿ ಭದ್ರತೆಯೊಂದಿಗೆ ೧೦ಕ್ಕೂ ಹೆಚ್ಚು ಅಧಿಕಾರಿಗಳ ತಂಡ ಮನೆಯಲ್ಲಿರುವ ದಾಖಲೆಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸುತ್ತಿದ್ದು, ಅಭ್ಯರ್ಥಿಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕುತ್ತಿದೆ ಎಂದು ತಿಳಿದು ಬಂದಿದೆ.

ಕೆಪಿಎಸ್‌ಸಿ ಮೂಲಕ ನಡೆದ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಒಎಂಆರ್ ಶೀಟ್ ತಿರುಚುವಿಕೆ, ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳ ಆರೋಪ ಕೇಳಿಬಂದಿತ್ತು. ಪ್ರತಿ ಹುದ್ದೆಗೆ ೭೦ರಿಂದ ೮೦ ಲಕ್ಷದವರೆಗೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪವೂ ಪ್ರಕರಣದಲ್ಲಿ ಕೇಳಿ ಬಂದಿದೆ.

ಜುಲೈ ೧೭ರಂದು ೪೦೦ ಪಶುವೈದ್ಯಾಧಿಕಾರಿ ಹುದ್ದೆಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ಹಿನ್ನೆಲೆಯಲ್ಲಿ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು.

ಈ ಪ್ರಕರಣದ ತನಿಖೆಯ ಮುಂದುವರಿದ ಭಾಗವಾಗಿ ಬೆಂಗಳೂರಿನ ವಲಯದ ಇಡಿ ಅಧಿಕಾರಿಗಳು ಇಂದು ಏಕಕಾಲದಲ್ಲಿ ಒಟ್ಟು ೨೧ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ದಾವಣಗೆರೆಯ ಅಭ್ಯರ್ಥಿ ಅವರ ನಿವಾಸವೂ ದಾಳಿಗೆ ಒಳಪಟ್ಟಿದೆ.

ದಾಳಿಯ ವೇಳೆ ಅಧಿಕಾರಿಗಳು ಯಾವ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಯಿಂದ ಯಾವ ಮಾಹಿತಿ ಸಂಗ್ರಹಿಸಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.