ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಸೆಪ್ಟೆಂಬರ್ 2026ರಲ್ಲಿ ಸಾರ್ವಕಾಲಿಕ ಗರಿಷ್ಠ 4.41 ದಶಲಕ್ಷ ಟನ್ ಸರಕು ಸಾಗಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
ಇದು ಕಳೆದ ವರ್ಷದ ಸೆಪ್ಟೆಂಬರ್‌ನ 4.17 ದಶಲಕ್ಷ ಟನ್‌ಗೆ ಹೋಲಿಸಿದರೆ ಶೇ. 5.9ರಷ್ಟು ಹೆಚ್ಚಳವಾಗಿದೆ. ಈ ತಿಂಗಳಲ್ಲಿ ಒಟ್ಟು 870 ಕೋಟಿ ರೂ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕಿಂತ 119 ಕೋಟಿ ರೂ (ಶೇ.15.91) ಹೆಚ್ಚಾಗಿದೆ.
ಸರಕು ಸಾಗಣೆಯಲ್ಲಿ ಕಬ್ಬಿಣದ ಅದಿರು 1.70 ದಶಲಕ್ಷ ಟನ್‌ನೊಂದಿಗೆ ಮೊದಲ ಸ್ಥಾನದಲ್ಲಿದೆ. ಪಿಗ್ ಐರನ್ ಮತ್ತು ಸಿದ್ಧ ಉಕ್ಕು 1.127 ದಶಲಕ್ಷ ಟನ್, ಕಲ್ಲಿದ್ದಲು 0.90 ದಶಲಕ್ಷ ಟನ್ ಸಾಗಣೆಯಾಗಿದೆ.ಪ್ರಯಾಣಿಕ ವಿಭಾಗದಲ್ಲೂ ಉತ್ತಮ ಬೆಳವಣಿಗೆ ಕಂಡುಬಂದಿದೆ.
ಸೆಪ್ಟೆಂಬರ್‌ನಲ್ಲಿ 1.5 ಕೋಟಿ ಪ್ರಯಾಣಿಕರು ಸಂಚರಿಸಿದ್ದು, 357.5 ಕೋಟಿ ರೂ ಆದಾಯ ಬಂದಿದೆ. ಇದು ಕಳೆದ ವರ್ಷಕ್ಕಿಂತ ಶೇ. 26.87ರಷ್ಟು ಹೆಚ್ಚಾಗಿದೆ. ಪಾರ್ಸೆಲ್‌ನಿಂದ 15.89 ಕೋಟಿ ರೂ ಆದಾಯ ಬಂದಿದೆ. ಏಪ್ರಿಲ್-ಸೆಪ್ಟೆಂಬರ್ 2026ರ ಅವಧಿಯಲ್ಲಿ ಒಟ್ಟು 26.1 ದಶಲಕ್ಷ ಟನ್ ಸರಕು ಸಾಗಣೆಯಾಗಿದ್ದು, ಶೇ. 5.8ರಷ್ಟು ಬೆಳವಣಿಗೆ ದಾಖಲಾಗಿದೆ.
ಈ ಅವಧಿಯ ಒಟ್ಟು ಆದಾಯ 4,730 ಕೋಟಿ ರೂ.ಗೆ ತಲುಪಿದೆ. 9.2 ಕೋಟಿ ಪ್ರಯಾಣಿಕರು ಸಂಚರಿಸಿ 1,904 ಕೋಟಿ ರೂ ಆದಾಯ ತಂದಿದ್ದಾರೆ.




















