ನವದೆಹಲಿ: ಉತ್ತರ ಕರ್ನಾಟಕ ಭಾಗದ ಜನತೆಗೆ ಅನುಕೂಲವಾಗುವಂತೆ ನಿರಂತರವಾಗಿ ವಾರದಲ್ಲಿ ಮೂರು ದಿನಗಳ ಕಾಲ ಹುಬ್ಬಳ್ಳಿ-ವಾರಾಣಸಿ ರೈಲು ಸಂಚಾರ ವಿಸ್ತರಣೆಗೆ ರೈಲ್ವೆ ಸಚಿವರಿಂದ ಭರವಸೆ ಸಿಕ್ಕಿದೆ.
ದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ, ಉತ್ತರ ಕರ್ನಾಟಕ ಹಾಗೂ ಕಾಶಿ (ವಾರಾಣಸಿ) ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ-ವಾರಣಾಸಿ ರೈಲು ಸೇವೆ ಹೆಚ್ಚಿಸುವಂತೆ ಮನವಿ ಸಲ್ಲಿಸಿದರು.
ಪ್ರಸ್ತುತ ವಾರದಲ್ಲಿ ಒಂದು ದಿನ ಸಂಚರಿಸುತ್ತಿದ್ದು, ಇದನ್ನು ವಾರದಲ್ಲಿ ಮೂರು ದಿನ ವಿಸ್ತರಿಸಿದರೆ ಕಾಶಿ, ವಾರಣಾಸಿಗೆ ಧಾರ್ಮಿಕ ಯಾತ್ರೆ ಕೈಗೊಳ್ಳುವ ಈ ಭಾಗದ ಭಕ್ತಾದಿಗಳಿಗೆ, ಪ್ರವಾಸಿಗರಿಗೆ ಹಾಗೂ ಉದ್ಯೋಗ-ವ್ಯಾಪಾರ ನಿಮಿತ್ತ ಪ್ರಯಾಣಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ಗಮನಸೆಳೆದರು.
ಹುಬ್ಬಳ್ಳಿ ನಿಲ್ದಾಣ ಹೈಟೆಕ್‌ಗೆ ಮನವಿ: ಹುಬ್ಬಳ್ಳಿ ರೈಲ್ವೆ ನಿಲ್ದಾಣವನ್ನು ಆಧುನಿಕ ಹಾಗೂ ಹೈಟೆಕ್ ಸೌಲಭ್ಯಗಳೊಂದಿಗೆ ಮತ್ತಷ್ಟು ಉತ್ತಮಪಡಿಸುವಂತೆಯೂ ಜೋಶಿ ವಿನಂತಿಸಿದರು. ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್‌ಗಳು, ವಾಣಿಜ್ಯ ಮಳಿಗೆಗಳು ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಹಲವು ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿದರು. ಮುಂಬರುವ ದಿನಗಳಲ್ಲಿ ಹುಬಳ್ಳಿ ರೈಲ್ವೆ ನಿಲ್ದಾಣದ ಉನ್ನತೀಕರಣಕ್ಕೂ ಅಶ್ವಿನಿ ವೈಷ್ಣವ ಸಮ್ಮತಿಸಿದ್ದಾರೆ.






















