ನಮ್ಮ ಮೆಟ್ರೋ ರೈಲನ್ನೇ ಪ್ರಚಾರದ ವೇದಿಕೆ ಮಾಡಿಕೊಂಡ ಯಶ್: ‘ಟಾಕ್ಸಿಕ್’ ಪೋಸ್ಟರ್‌ಗೆ ಭಾರಿ ಕ್ರೇಜ್
ಬೆಂಗಳೂರು: ‘ಕೆಜಿಎಫ್’ ಸರಣಿಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದ ಖ್ಯಾತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಮೂಲಕ ಮತ್ತೊಮ್ಮೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದ್ದಾರೆ. ಸಿನಿಮಾ ನಿರ್ಮಾಣದಷ್ಟೇ ಪ್ರಚಾರದಲ್ಲಿಯೂ ವಿಭಿನ್ನ ಪ್ರಯೋಗಗಳಿಗೆ ಮುಂದಾಗುತ್ತಿರುವ ಯಶ್, ಇದೀಗ ಬೆಂಗಳೂರಿನ ಜನಜೀವನದ ಅವಿಭಾಜ್ಯ ಅಂಗವಾಗಿರುವ ‘ನಮ್ಮ ಮೆಟ್ರೋ’ವನ್ನೇ ‘ಟಾಕ್ಸಿಕ್’ ಪ್ರಚಾರದ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
‘ಟಾಕ್ಸಿಕ್’ ಚಿತ್ರತಂಡದ ನಿರ್ಮಾಣ ಸಂಸ್ಥೆ KVN Productions ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಬೆಂಗಳೂರಿನ ಮೆಟ್ರೋ ರೈಲಿನ ಮೇಲೆ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್‌ಗಳು ರಾರಾಜಿಸುತ್ತಿರುವ ದೃಶ್ಯಗಳು ಗಮನ ಸೆಳೆದಿವೆ.
ನಮ್ಮ ಮೆಟ್ರೋ ರೈಲಿನ ಮೇಲೆ ರಾಕಿ ಭಾಯ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಪ್ರಯಾಣಿಸುವ ನಮ್ಮ ಮೆಟ್ರೋ ರೈಲಿನ ಬೋಗಿಗಳ ಹೊರಭಾಗದಲ್ಲಿ ‘ಟಾಕ್ಸಿಕ್’ ಸಿನಿಮಾದ ಭರ್ಜರಿ ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ. ಯಶ್ ಅವರ ಕೈಯಲ್ಲಿ ಗನ್ ಹಿಡಿದಿರುವ ಮಾಸ್ ಹಾಗೂ ಸ್ಟೈಲಿಶ್ ಲುಕ್ನ ಪೋಸ್ಟರ್‌ಗಳು ಮೆಟ್ರೋ ರೈಲಿನ ಹೊರಭಾಗದಲ್ಲಿ ಪ್ರಮುಖವಾಗಿ ಕಾಣಿಸುತ್ತಿವೆ. ನಗರದ ವಿವಿಧ ಮಾರ್ಗಗಳಲ್ಲಿ ಮೆಟ್ರೋ ಸಂಚರಿಸುವಾಗ ಈ ಪೋಸ್ಟರ್‌ಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ.
ಮೆಟ್ರೋ ಮೂಲಕ ಪ್ರತಿದಿನ ಪ್ರಯಾಣಿಸುವ ಸಾವಿರಾರು ಮಂದಿ ಹಾಗೂ ರೈಲು ಸಂಚರಿಸುವ ಮಾರ್ಗದ ಸುತ್ತಮುತ್ತಲಿನ ಜನರಿಗೆ ‘ಟಾಕ್ಸಿಕ್’ ಪೋಸ್ಟರ್‌ಗಳು ಕಾಣಿಸುತ್ತಿರುವುದರಿಂದ ಚಿತ್ರದ ಪ್ರಚಾರಕ್ಕೆ ಮತ್ತಷ್ಟು ವ್ಯಾಪ್ತಿ ದೊರೆತಿದೆ.
ಪ್ರಚಾರದಲ್ಲೂ ಯಶ್ ಹೊಸ ಪ್ರಯೋಗ : ‘ಕೆಜಿಎಫ್’ ಬಳಿಕ ಯಶ್ ಅವರ ಪ್ರತಿಯೊಂದು ಸಿನಿಮಾದ ಮೇಲೂ ದೇಶಾದ್ಯಂತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕುತೂಹಲ ಹೆಚ್ಚಾಗಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರದಲ್ಲೂ ಚಿತ್ರತಂಡ ಸಾಂಪ್ರದಾಯಿಕ ಪ್ರಚಾರದ ಮಾದರಿಯಿಂದ ಹೊರಬಂದು ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದೆ.
ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋವನ್ನು ಪ್ರಚಾರಕ್ಕಾಗಿ ಬಳಸಿರುವುದು ಇದೇ ಪ್ರಯತ್ನದ ಮತ್ತೊಂದು ಭಾಗವಾಗಿದೆ. ಇದರಿಂದ ಸಿನಿಮಾ ಬಿಡುಗಡೆಯ ಮುನ್ನವೇ ನಗರದಾದ್ಯಂತ ‘ಟಾಕ್ಸಿಕ್’ ಬಗ್ಗೆ ಚರ್ಚೆ ಮತ್ತಷ್ಟು ಹೆಚ್ಚಾಗಿದೆ.
ಜಾಗತಿಕ ಪ್ರೇಕ್ಷಕರನ್ನು ತಲುಪುವ ಗುರಿ : ‘ಟಾಕ್ಸಿಕ್’ ಅನ್ನು ಕೇವಲ ಕನ್ನಡ ಸಿನಿಮಾವಾಗಿ ಸೀಮಿತಗೊಳಿಸದೆ ಜಾಗತಿಕ ಪ್ರೇಕ್ಷಕರನ್ನು ತಲುಪಿಸುವ ಗುರಿಯನ್ನು ಚಿತ್ರತಂಡ ಹೊಂದಿದೆ. ದೇಶದ ವಿವಿಧ ಚಿತ್ರರಂಗಗಳ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೂ ಚಿತ್ರತಂಡ ಗಮನ ಹರಿಸಿದೆ. ಈ ಹಿಂದೆ ‘ಟಾಕ್ಸಿಕ್’ ಚಿತ್ರದ ಟ್ರೇಲರ್ ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ದೇಶ-ವಿದೇಶಗಳ ಮಾಧ್ಯಮಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಯಶ್ ಅವರ ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಕನ್ನಡ ಚಿತ್ರರಂಗದ ಸಿನಿಮಾಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ದೊರೆತಿರುವ ಗಮನವನ್ನು ‘ಟಾಕ್ಸಿಕ್’ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ.
ಬಿಡುಗಡೆ ದಿನಾಂಕ ಯಾವಾಗ? : ‘ಟಾಕ್ಸಿಕ್’ ಸಿನಿಮಾವನ್ನು ಆರಂಭದಲ್ಲಿ ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ ಅಂತರರಾಷ್ಟ್ರೀಯ ಬೆಳವಣಿಗೆಗಳು ಹಾಗೂ ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿಗಳನ್ನು ಪರಿಗಣಿಸಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಇದೀಗ ಚಿತ್ರತಂಡದ ಯೋಜನೆಯಂತೆ ಆಗಸ್ಟ್ 26, 2026ರಂದು ‘ಟಾಕ್ಸಿಕ್’ ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸಿನಿಮಾ ಪ್ರಚಾರವೂ ಮತ್ತಷ್ಟು ವೇಗ ಪಡೆದುಕೊಂಡಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕಾಣಿಸಿಕೊಂಡಿರುವ ‘ಟಾಕ್ಸಿಕ್’ ಪೋಸ್ಟರ್‌ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಯಶ್ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ.
ರಾಕಿ ಭಾಯ್‌ಗಾಗಿ ಕಾತರ : ‘ಕೆಜಿಎಫ್’ ಸಿನಿಮಾದ ರಾಕಿ ಭಾಯ್ ಪಾತ್ರದ ಮೂಲಕ ಯಶ್ ಪಡೆದಿರುವ ಜನಪ್ರಿಯತೆ ‘ಟಾಕ್ಸಿಕ್’ ಮೇಲಿನ ನಿರೀಕ್ಷೆಗೆ ಪ್ರಮುಖ ಕಾರಣವಾಗಿದೆ. ಈ ಬಾರಿ ಯಶ್ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಕಥೆ ಯಾವ ರೀತಿಯಲ್ಲಿರಲಿದೆ ಹಾಗೂ ಸಿನಿಮಾ ಜಾಗತಿಕ ಮಟ್ಟದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಮೆಟ್ರೋದಿಂದ ಹಿಡಿದು ಸಾಮಾಜಿಕ ಜಾಲತಾಣದವರೆಗೆ ವಿಭಿನ್ನ ರೀತಿಯಲ್ಲಿ ‘ಟಾಕ್ಸಿಕ್’ ಹವಾ ಸೃಷ್ಟಿಸುತ್ತಿರುವ ಚಿತ್ರತಂಡ, ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ದೊಡ್ಡ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.






















