SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಕೃಷ್ಣಾ ಬಿ ಸ್ಕೀಮ್ ಪೂರ್ಣಗೊಳಿಸಿ: ಸಚಿವರ ಫೋಟೋ ಇಟ್ಟು ಪೂಜೆ ಮಾಡ್ತೀವಿ

ಕೃಷ್ಣಾ ಬಿ ಸ್ಕೀಮ್ ಪೂರ್ಣಗೊಳಿಸಿ: ಸಚಿವರ ಫೋಟೋ ಇಟ್ಟು ಪೂಜೆ ಮಾಡ್ತೀವಿ

0
96

ಕುಷ್ಟಗಿ: “ಸಾರ್, ಕೃಷ್ಣಾ ಬಿ ಸ್ಕೀಮ್ ಯೋಜನೆಯನ್ನು ಪೂರ್ಣಗೊಳಿಸಿ. ಆ ಕೆಲಸ ಮಾಡಿದರೆ ಇಂತಹ ಹತ್ತು ಬರಗಾಲ ಬಂದರೂ ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡ್ತೀವಿ…” ಎಂದು ರೈತನೊಬ್ಬ ಸಚಿವರ ಎದುರೇ ಭಾವನಾತ್ಮಕವಾಗಿ ಮನವಿ ಮಾಡಿದ ಘಟನೆ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದಲ್ಲಿ ಗಮನ ಸೆಳೆಯಿತು.

ಬರದಿಂದ ತತ್ತರಿಸಿರುವ ರೈತರ ಬೆಳೆ ಹಾನಿ ಪರಿಶೀಲನೆಗಾಗಿ ನವಲಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ರೈತರ ಅಹವಾಲು ಆಲಿಸುತ್ತಿದ್ದ ವೇಳೆ, ರೈತ ಪರಸಪ್ಪ ಚಿಟಗಿ ತಮ್ಮ ಅಳಲನ್ನು ಹೊರಹಾಕಿದರು.

ಪರಿಹಾರಕ್ಕಿಂತ ನೀರೇ ಮುಖ್ಯ: ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಹಾಳಾಗಿದ್ದು, ಸಾಲದ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ವರ್ಷ ಬರ ಬಂದಾಗ ಸರ್ಕಾರದ ಪರಿಹಾರಕ್ಕಾಗಿ ಕಾಯುವ ಪರಿಸ್ಥಿತಿ ಬೇಡ. ಕೃಷ್ಣಾ ನದಿಯ ನೀರು ಶಾಶ್ವತವಾಗಿ ನಮ್ಮ ಹೊಲಗಳಿಗೆ ತಲುಪುವಂತೆ ಕೃಷ್ಣಾ ಬಿ ಸ್ಕೀಮ್ ಯೋಜನೆಯನ್ನು ಪೂರ್ಣಗೊಳಿಸಿದರೆ ಮುಂದಿನ ಪೀಳಿಗೆಯ ರೈತರೂ ನೆಮ್ಮದಿಯಿಂದ ಬದುಕಬಹುದು ಎಂದು ರೈತರು ಮನವಿ ಮಾಡಿದರು.

“ನಮಗೆ ಪರಿಹಾರಕ್ಕಿಂತ ನೀರೇ ಮುಖ್ಯ. ನೀರಾವರಿ ಸೌಲಭ್ಯ ಕಲ್ಪಿಸಿದರೆ ರೈತರ ಬದುಕು ಬದಲಾಗುತ್ತದೆ. ಅಂತಹ ಸಾಧನೆ ಮಾಡಿದ ನಾಯಕರನ್ನು ರೈತರು ಎಂದಿಗೂ ಮರೆಯುವುದಿಲ್ಲ” ಎಂದು ಪರಸಪ್ಪ ಚಿಟಗಿ ಹೇಳಿದರು.

ಕಲಾಲಬಂಡಿ-ಜಾಕ್ವಾಲಿ ಭಾಗಕ್ಕೂ ನೀರು ತಲುಪಲಿ: ಕೃಷ್ಣಾ ಬಿ ಸ್ಕೀಮ್ ಅಡಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ವಿಶೇಷವಾಗಿ ಕಲಾಲಬಂಡಿ ಮತ್ತು ಜಾಕ್ವಾಲಿ ಭಾಗಗಳಿಗೆ ನೀರು ಒದಗಿಸುವ ಮೂಲಕ ಒಣಭೂಮಿಗಳಿಗೆ ಜೀವ ತುಂಬಬೇಕು ಎಂದು ರೈತರು ಒತ್ತಾಯಿಸಿದರು.

ಕೆರೆಗಳಿಗೆ ಕೃಷ್ಣಾ ನೀರನ್ನು ಹರಿಸುವ ಮೂಲಕ ಭೂಗರ್ಭ ಜಲಮಟ್ಟ ಹೆಚ್ಚಿಸಬೇಕು. ಇದರಿಂದ ಸಾವಿರಾರು ಎಕರೆ ಪ್ರದೇಶಕ್ಕೆ ಶಾಶ್ವತ ನೀರಾವರಿ ಸೌಲಭ್ಯ ದೊರೆತು, ಬರಗಾಲವನ್ನು ಸಮರ್ಥವಾಗಿ ಎದುರಿಸುವ ಶಕ್ತಿ ರೈತರಿಗೆ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ಕೆರೆ ತುಂಬಿಸುವ ಕಾಮಗಾರಿಗೆ ಆದ್ಯತೆ: ರೈತರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ್ ತಂಗಡಗಿ, ಸರ್ಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಬೆಳೆಹಾನಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ನೀರಾವರಿ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹನಿ ನೀರಾವರಿ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಆದ್ದರಿಂದ ರೈತರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆರೆ ತುಂಬಿಸುವ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಸಾಧ್ಯವಾದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.