SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಬೈಕ್‌ ಕದಿಯಲು ಬಂದ ಖದೀಮರಿಗೆ ನಾಯಿಗಳೇ ವಿಲನ್‌; ವಾಹನ ಬಿಟ್ಟು ಪರಾರಿ

ಬೈಕ್‌ ಕದಿಯಲು ಬಂದ ಖದೀಮರಿಗೆ ನಾಯಿಗಳೇ ವಿಲನ್‌; ವಾಹನ ಬಿಟ್ಟು ಪರಾರಿ

0
42

ಕೊಪ್ಪಳ: ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಮುದೇನೂರು, ದೋಟಿಹಾಳ ಮುಖ್ಯ ರಸ್ತೆಯ ನವನಗರದಲ್ಲಿ ಪತ್ರಕರ್ತ ತಿರುಪತಿ ಎಲಿಗಾರ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳ್ಳತನ ಮಾಡಲು ಇಬ್ಬರು ಅಪರಿಚಿತರು ಯತ್ನಿಸಿ ವಿಫಲರಾಗಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ರಾತ್ರಿ ಸುಮಾರು 1.30ರ ವೇಳೆಗೆ ಮುಖಕ್ಕೆ ಬಟ್ಟೆ ಧರಿಸಿಕೊಂಡು ಬಂದ ಇಬ್ಬರು ವ್ಯಕ್ತಿಗಳು, ಮನೆ ಮುಂದೆ ಶೆಡ್‌ನಲ್ಲಿ ನಿಲ್ಲಿಸಿದ್ದ ಬೈಕ್‌ನ ಹ್ಯಾಂಡಲ್‌ ಲಾಕ್‌ ಮುರಿಯಲು ಯತ್ನಿಸಿದ್ದಾರೆ. ಬಳಿಕ ಅಲ್ಲಿಯೇ ನಿಲ್ಲಿಸಿದ್ದ ಇತರೆ ಬೈಕ್‌ಗಳನ್ನೂ ಕಳ್ಳತನ ಮಾಡಲು ಪ್ರಯತ್ನಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳ್ಳರು ಬೈಕ್‌ಗಳನ್ನು ಕೊಂಡೊಯ್ಯಲು ಮುಂದಾಗುತ್ತಿದ್ದ ಸಂದರ್ಭದಲ್ಲಿ ನಾಯಿಗಳು ಬೊಗಳಿದ್ದಲ್ಲದೆ, ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರವೂ ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಕಳ್ಳರು ಬೈಕ್‌ಗಳನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳರ ಚಲನವಲನ ಹಾಗೂ ಬೈಕ್‌ ಕಳ್ಳತನಕ್ಕೆ ನಡೆಸಿದ ಪ್ರಯತ್ನದ ಮಾಹಿತಿ ಲಭ್ಯವಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ರಾತ್ರಿ ವೇಳೆ ಮನೆಗಳ ಮುಂದೆ ಹಾಗೂ ರಸ್ತೆಯಲ್ಲಿ ನಿಲ್ಲಿಸುವ ವಾಹನಗಳ ಸುರಕ್ಷತೆ ಕುರಿತು ಚಿಂತೆ ವ್ಯಕ್ತವಾಗಿದೆ.

ಗ್ರಾಮದಲ್ಲಿ ರಾತ್ರಿ ವೇಳೆ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ರಾತ್ರಿ ಗಸ್ತು ಹೆಚ್ಚಿಸಬೇಕು. ಪ್ರಮುಖ ರಸ್ತೆಗಳು ಹಾಗೂ ಜನವಸತಿ ಪ್ರದೇಶಗಳಲ್ಲಿ ನಿಯಮಿತವಾಗಿ ಪೊಲೀಸ್‌ ಸಿಬ್ಬಂದಿ ಗಸ್ತು ತಿರುಗಬೇಕು. ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.