SK Home Ad
Home ಅಂಕಣ ಅಂಕಣ ಬರಹ | ಸಂಪುಟದಾಟದಲ್ಲಿ ಬಾಜಿಗರ್ ಯಾರು..?

ಅಂಕಣ ಬರಹ | ಸಂಪುಟದಾಟದಲ್ಲಿ ಬಾಜಿಗರ್ ಯಾರು..?

0
2

ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಒಳ್ಳೆಯ ಅವಕಾಶ ಇತ್ತಲ್ಲ. ಯಾಕೋ ಹೀಗಾಯ್ತಲ್ಲ…!
ಈ ಭಾವನೆ ಮತ್ತು ಮಾತು ಈಗ ರಾಜ್ಯಾದ್ಯಂತ ವ್ಯಕ್ತವಾಗುತ್ತಿವೆ.
ಎರಡು ತಿಂಗಳ ಕಾಲಾವಕಾಶ ಪಡೆದು ಅಳೆದು ತೂಗಿ ರಾಜ್ಯದ ಸಚಿವ ಸಂಪುಟ ವಿಸ್ತರಣೆ ನಡೆಸಲಾಗಿದ್ದರೂ ಈಗ ಬಂಡಾಯ, ಭಿನ್ನಮತ, ಆಕ್ರೋಶ ಎಲ್ಲವೂ ಎದ್ದಿವೆ. ಸ್ವತಃ ಹಿರಿಯ ಶಾಸಕರು, ಹಿಂದಿನ ಸಚಿವರುಗಳೆಲ್ಲ ʻಇಪ್ಪತ್ತೆಂಟರ ಚುನಾವಣೆʼ ಕೈಬಿಟ್ಟ ಹಾಗೇ ಎನ್ನುವ ಮಾತನ್ನೂ ಆಡಲಾರಂಭಿಸಿದ್ದಾರೆ.

ಏತಕ್ಕೂ ಇದು ಸ್ವಲ್ಪ ಕಾಲಪಕ್ವವಲ್ಲ. ಸಚಿವ ಸಂಪುಟ ವಿಸ್ತರಣೆ ನಂತರ ಯಾಕೆ ಹೀಗಾಗಿರಬಹುದು ಎಂಬ ಜಿಜ್ಞಾಸೆ ಎಲ್ಲ ಸಾರೆ ಇದ್ದದ್ದೇ.. ಆದರೆ, ಡಿ.ಕೆ. ಶಿವಕುಮಾರರಿಗೆ ಕೆಲವು ಒಲ್ಲದ ಸವಾಲು. ಹಾಗೇ ಕೆಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಮೊದಲನೆಯದ್ದು ಮತ್ತು ಎಲ್ಲಕ್ಕಿಂತ ಪ್ರಮುಖವಾದದ್ದು ಹಿರಿಯ ಶಾಸಕರು ಎತ್ತಿರುವ ಧಾಷ್ಟ್ರ್ಯದ, ಗಡಸಿನ ಪ್ರಶ್ನೆ. ʻನಮ್ಮನ್ನೇಕೆ ಪರಿಗಣಿಸಿಲ್ಲ… ಈಗ ನೇಮಕಗೊಂಡವರಿಗಿಂತ ನಮಗೇನು ಅರ್ಹತೆ ಕಮ್ಮಿ ಇತ್ತು?ʼ ಎಂಬುದು ಅವರ ಆಕ್ರೋಶದ ಸಾರಾಂಶ.

ಎರಡನೆಯದ್ದು, ಕಳೆದ ಸಿದ್ದರಾಮಯ್ಯ ಸರ್ಕಾರದಲ್ಲಿ ಸಮರ್ಥವಾಗಿ ತಮ್ಮ ಖಾತೆಯನ್ನು ನಿರ್ವಹಿಸಿದ ಸಚಿವರನ್ನು ನಮ್ಮನ್ನೇಕೆ ಕೈಬಿಟ್ಟಿದ್ದು?

ಈಗಾಗಲೇ ದಿನೇಶ್ ಗುಂಡೂರಾವ್, ಡಾ. ಎಚ್.ಸಿ. ಮಹದೇವಪ್ಪ, ಎಚ್.ಕೆ. ಪಾಟೀಲ, ಸುಧಾಕರ ಮೊದಲಾದವರ ಪ್ರಶ್ನೆ ಎಂದರೆ, ಸಂಪುಟಕ್ಕೆ ಸೇರಿಸಿಕೊಳ್ಳುವುದು ನಿಮ್ಮ ಅಂತಿಮ ತೀರ್ಮಾನ, ನಿಮಗಿರುವ ಹಕ್ಕು. ಆದರೆ ಕೆಲವರನ್ನು ಇಟ್ಟುಕೊಂಡು, ನಮ್ಮನ್ನು ಕೈಬಿಟ್ಟಿರುವುದು ಯಾವ ಕಾರಣಕ್ಕಾಗಿ? ಈ ಒಂದು ಲೈನಿನ ಉತ್ತರವನ್ನು ನಮಗಾದರೂ ತಿಳಿಸಿ ಎನ್ನುವುದು. ನಾವು ಸಮರ್ಥರಲ್ಲವಾ? ಸಮರ್ಥವಾಗಿ ಖಾತೆ ನಿರ್ವಹಿಸಿಲ್ಲವಾ? ಈಗ ಪುನರ್ನೇಮಕಗೊಂಡವರು ನಮಗಿಂತೂ ಸಮರ್ಥರಾ? ಎಂಬುದೂ ಈ ನಾಯಕರಿಂದ ಕೇಳಿ ಬರುತ್ತಿರುವ ಸಹಜ ಪ್ರಶ್ನೆಗಳು.

ಇವರೆಲ್ಲರ ಮೂರನೇ ಪ್ರಶ್ನೆ ಎಂದರೆ ಸಚಿವ ಸಂಪುಟ ರಚನೆಗೆ ಅನುಸರಿಸಿರುವ ಮಾನದಂಡ ಏನು ಎನ್ನುವುದು. ಬಹುಶಃ ಇದರ ಮಾನದಂಡ ತಿಳಿಸುವ ಗೊಡವೆಗೆ ಯಾರೂ ಹೋಗಲಾರರು. ಇದೊಂದು ʻಅರ್ಥʼವತ್ತಾದ ಪ್ರಶ್ನೆ ಎಂದಷ್ಟೇ ಸಂಬಂಧಿಸಿದವರನ್ನು ಸುಮ್ಮನಿರಿಸಬಹುದೇನೋ?

ಜಾತಿ, ಧರ್ಮ, ಸಮುದಾಯ, ಜನಪ್ರಿಯತೆ ಇತ್ಯಾದಿಗಳನ್ನೆಲ್ಲ ಪರಿಗಣಿಸಿ ಪ್ರಾತಿನಿಧ್ಯ ನೀಡಲಾಗಿದೆ ಎಂದರೂ ಅದೇ ಸಮುದಾಯ-ಜಾತಿಯಲ್ಲಿ ಅವರಿಗಿಂತಲೂ ಹೆಚ್ಚು ಪ್ರಭಾವಿತರು, ಪ್ರತಿಷ್ಠಿತರು, ಪ್ರಾಜ್ಞರು, ಸಮರ್ಥರಿದ್ದರಲ್ಲ? ಇವರನ್ನು ಪರಿಗಣಿಸದೇ ಇದ್ದುದು ಏತಕ್ಕೆ ಎನ್ನುವುದು ಜನ ಸಾಮಾನ್ಯರ ಪ್ರಶ್ನೆ ಕೂಡ ಆಗಿದೆ. ಇದಕ್ಕೆ ʻಅರ್ಥʼವಂತಿಕೆ ಇದೆಯಾ ಎನ್ನುವುದು ಚರ್ಚೆಯ ಆಯಾಮ ಬಿಡಿ.

ಸಿದ್ದರಾಮಯ್ಯನವರಿಂದ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸುವಾಗ, ಅತ್ಯಂತ ನಾಜೂಕಾಗಿ, ಯಾವುದೇ ವಿವಾದ ಅಥವಾ ಗೊಂದಲ ಗೋಜಲುಗಳಿಲ್ಲದಂತೆ ಪ್ರಕ್ರಿಯೆ ನಡೆದಿತ್ತು. ಮೊದಲ ಸಂಪುಟದಲ್ಲಿ ಶಿವಕುಮಾರ್ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಿರಿಯರನ್ನೇ ಇಟ್ಟುಕೊಂಡು ಆಡಳಿತ ಶುರು ಮಾಡಿದ್ದರು.

ಎರಡು ತಿಂಗಳ ಹಿಂದಿನ ಸೂಕ್ಷ್ಮತೆ, ಗುಣಗಾನಕ್ಕೆ ವ್ಯತಿರಿಕ್ತವಾಗಿ ಈಗಿನ ಸಂಪುಟ ವಿಸ್ತರಣೆ ಅಷ್ಟೇ ಟೀಕೆಗೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಈ ಮಧ್ಯೆ ಕೇಂದ್ರದ ಹೈಕಮಾಂಡ್‌ನತ್ತ ಬೊಟ್ಟು ತೋರಿಸುವುದು, ಅವರಿವರ ಹೆಸರಿನ ನೆಪ ಹೇಳುವ ಕೆಲಸ ಜೋರಾಗಿದೆ. ಅಸಮಾಧಾನಿತರು ರಾಜೀನಾಮೆ ಕೊಟ್ಟರೆ ಎರಡು ನಿಮಿಷಗಳಲ್ಲಿ ಅಂಗೀಕರಿಸುವ ಮಾತು ಕೂಡ ಮುಖ್ಯಮಂತ್ರಿಗಳಿಂದ ಬಂದಿದೆ!

ಅವಮಾನಿತರಾಗಿರುವವರು ಮೊಗವೀರ ಸಮಾಜದ ಮುಖಂಡ, ಮಾಜಿ ಸಚಿವ ಮಾಂಕಾಳು ವೈದ್ಯ ಮತ್ತು ಮೂರು ವರ್ಷ ಸರ್ವೋಚ್ಚ ನ್ಯಾಯಾಲಯದವರೆಗೆ ಹೋರಾಟ ನಡೆಸಿ ಜಯಗಳಿಸಿಕೊಂಡು ಬಂದ ಗಾಯತ್ರಿ ಗೌಡ. ವಿಧಾನ ಪರಿಷತ್ ಸದಸ್ಯರಾಗಿ ಹದಿನೈದು ದಿನಗಳಲ್ಲೇ ಮಂತ್ರಿ ಪದವಿಗೆ ಆಯ್ಕೆಯಾಗಿ ಇನ್ನೇನು ಪ್ರಮಾಣ ವಚನ ಸ್ವೀಕರಿಸಬೇಕು ಎನ್ನುವಾಗ ತಡೆಯೊಡ್ಡಲಾಯಿತು. ಇಡೀ ಸಂಪುಟದಲ್ಲಿ ಈಗ ಮಹಿಳೆಯರಿಲ್ಲ.

ಹಾಗೇ ʻಡಿ.ಕೆ. ಶಿವಕುಮಾರ್ ಅವರು ನನ್ನನ್ನು ಹೃದಯಕ್ಕೆ ಸನಿಹ ಇಟ್ಟುಕೊಂಡಿದ್ದಾರೆʼ ಎಂದು ಮೊದಲ ಪಟ್ಟಿ ಬಂದಾಗ ಅಭಿಮಾನದಿಂದ ಹೇಳಿದವರು ಮಾಂಕಾಳು ವೈದ್ಯ, ಈ ಹೇಳಿಕೆ ನೀಡಿದ ಹದಿನೈದು ನಿಮಿಷದಲ್ಲೇ ಮುಖ್ಯಮಂತ್ರಿಯ ಮನೆ ಪ್ರವೇಶಕ್ಕೂ ಅವಕಾಶ ದೊರೆಯದ ಸ್ಥಿತಿ ಬಂತು! ಈಗ ಇಡೀ ಕರಾವಳಿ ಜಿಲ್ಲೆಗೆ, ಅದೂ ಪ್ರಮುಖ ಮೊಗವೀರ (ಮೀನುಗಾರ) ಸಮುದಾಯಕ್ಕೆ ಪ್ರಾತಿನಿಧ್ಯವೇ ಇಲ್ಲದಂತಾಯಿತು!

ವೈದ್ಯ ಮತ್ತು ಗಾಯತ್ರಿ ತಪ್ಪು ಮಾಡಿದ್ದೇನು? ಬಹಳ ಭರವಸೆ ಇಟ್ಟುಕೊಂಡವರು ವಿಧಾನಸಭೆ ಮತ್ತು ಸರ್ಕಾರಕ್ಕೆ ಘನತೆ ಗಾಂಭೀರ್ಯ ತಂದುಕೊಟ್ಟವರು, ಸಾತ್ವಿಕರು, ಸಜ್ಜನ ಶಾಸಕರೆಲ್ಲ ಈಗ ಖೇದಗೊಂಡು ಇಪ್ಪತ್ತೆಂಟರ ಚುನಾವಣೆಯ ಭೀತಿಯನ್ನು ಎದುರಿಸುವಂತಾಗಿದೆ.

ಇಬ್ಬರು ಪ್ರಮುಖ ಮುಖಂಡರ ʻಇಡೀ ರಾಜ್ಯನಾ ಗುಡಿಸಿಕೊಂಡು ಹೋಗಿಬಿಡ್ತಾರ್ರೀ… ಮುಂದೆ ನಮ್ಮ ರಾಜಕೀಯ ಭವಿಷ್ಯ ಹೆಂಗ್ರಿʼ ಎನ್ನುವ ಸಂಭಾಷಣೆ ಆಡಿಯೋ ಈಗ ವೈರಲ್ ಆಗಿದೆ. ಅದೇ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಭಾಗದ ಪ್ರತಿನಿಧಿಗಳು ಸಭೆ ಸೇರಿ, ʻನಾವು ಗೆದ್ದಿರುವುದು ನಮ್ಮ ವೈಯಕ್ತಿಕ ಪ್ರಭಾವದಿಂದಲೇ. ನಮ್ಮನ್ನು ಕಡೆಗಣಿಸಲಾಗಿದೆʼ ಎನ್ನುವ ಎಚ್ಚರಿಕೆಯನ್ನು ಕೂಡ ನೀಡುವ ಪ್ರಸಂಗ ಬಂದಿದೆ.

ರಾಜಕೀಯ ವಿಶ್ಲೇಷಕರ ಪ್ರಕಾರ, ಇಲ್ಲಿ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮುಖ್ಯಮಂತ್ರಿಗಳು, ಎಐಸಿಸಿ ಅಧ್ಯಕ್ಷರು, ಯೋಗ್ಯರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಆದರೆ ಮೂವರೂ ತಮ್ಮ ತಮ್ಮ ಅನುಯಾಯಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಷ್ಟಕ್ಕೇ ʻಸಮರ್ಥʼರಾದರು. ಉಳಿದದ್ದೆಲ್ಲ ಹೈಕಮಾಂಡ್ ತೀರ್ಮಾನದಲ್ಲಿ ಮೂಡಿದ ʻಅಂಕಪಟ್ಟಿʼ!

ಮಂತ್ರಿ ಮಂಡಲ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಎನ್ನುವುದು ಸಂವಿಧಾನ ಮತ್ತು ಶಾಸನದಲ್ಲಿ ಮಾತ್ರ ಇತ್ತೀಚಿನ ವರ್ಷಗಳಲ್ಲಿ ಉಳಿದು ಹೋಗಿದೆ. ಅದನ್ನು ಕರ್ನಾಟಕದ ಮಟ್ಟಿಗೆ, ವಿರೇಂದ್ರ ಪಾಟೀಲ್ ನಂತರ, ಯಾರೂ ಪಾಲಿಸಿದವರಿಲ್ಲ.

ಈಗ ಆ ಪ್ರಶ್ನೆಯೂ ಎದ್ದಿದೆ. ಯಾವ ದೆಹಲಿಯವರ ಕೈಗೆ ಕ್ಯಾಬಿನೆಟ್ ರಚನೆಯ ಹಕ್ಕು ನೀಡಲಾಗಿದೆಯೋ ಅದಕ್ಕೆ ಮುಖ್ಯಮಂತ್ರಿಗಳು ತಲೆ ಬಾಗಬೇಕಾಗಿರುವುದು ಸರಿಯೇ? ಎನ್ನುವುದು.

ಸಮರ್ಥರನ್ನು, ಯೋಗ್ಯರನ್ನು ಏಕೆ ಬಿಟ್ಟಿರಿ? ಈಗ ನೇಮಕವಾಗಿರುವವರಿಗೆ ಮಾನದಂಡ ಏನು? ಎಂದು ಪ್ರಶ್ನಿಸುವುದು ಮೂರ್ಖತನ. ಹಾಗೇ ಇದಕ್ಕೆ ಉತ್ತರ ನೀಡುವವರೂ ಇಲ್ಲ. ಈ ಪ್ರಶ್ನೆಯನ್ನು ಸ್ವೀಕರಿಸುವವರೂ ಇಲ್ಲ!!

ಈ ಮಧ್ಯೆ ಪಕ್ಷದ ಲೆಟರ್‌ಹೆಡ್‌ನಲ್ಲಿ ವಿಧಾನಸಭೆ ಅಧ್ಯಕ್ಷ, ಉಪಾಧ್ಯಕ್ಷರ, ವಿಧಾನಪರಿಷತ್ ಸಭಾಪತಿ, ಉಪಸಭಾಪತಿ ಹೆಸರು ಘೋಷಿಸಿ ಸಂಪ್ರದಾಯ ಮುರಿದ ವಿವಾದ ಬೇರೆ!

ರಾಜಕಾರಣ ಎಂದರೆ ಹಾಗೇ… ಡಿ.ಕೆ. ಶಿವಕುಮಾರ್ ಅವರನ್ನು ದಂಡನಾಯಕರನ್ನಾಗಿಸಿದ ಸರ್ಕಾರ, ಕಳೆದ ಒಂದು ವರ್ಷದಿಂದ ಅಧಿಕಾರ ಹಸ್ತಾಂತರದ ಗದ್ದಲ, ಈಗ ಸಂಪುಟ ವಿಸ್ತರಣೆಯ ವಿವಾದದಿಂದಾಗಿ ಜನತೆ ಮತ್ತು ಅಭಿವೃದ್ಧಿ ಎರಡೂ ಹೈರಾಣಾಗುವಂತೆ ಮಾಡಿದೆ.

ದಟ್ಟ ದರಿದ್ರ ಬರ, ಹಲವೆಡೆ ಪ್ರವಾಹ, ಮೂಲಭೂತ ಸವಲತ್ತುಗಳಿಲ್ಲದ, ಯಾವುದೇ ಸರ್ಕಾರಿ ಯೋಜನೆಗಳು ಅನುಷ್ಠಾನಗೊಳ್ಳದ ಪರಿಸ್ಥಿತಿ ಈಗ ನಾಡಲ್ಲಿ. ಏತನ್ಮಧ್ಯೆ ಜಲವಿವಾದ, ಪರಿಸರ ಸಮಸ್ಯೆ, ಪ್ರಾದೇಶಿಕ ಅಸಮಾನತೆ, ರೈತರ ಬೀಜ ಗೊಬ್ಬರ ಕೊರತೆ ಇತ್ಯಾದಿ ನಿತ್ಯ ಸಂಕಟಗಳು. ಇವುಗಳ ನಿರ್ವಹಣೆಗೆ ಸರ್ಕಾರ ಅಣಿಯಾಗಲೇಬೇಕಿದೆ.

ಸರ್ಕಾರ ತಮ್ಮ ರಕ್ಷಣೆಗೆ ಬರುತ್ತದೆಂಬ ಆಸೆಯಿಂದ ನಾಡು ಕಣ್ತೆರೆದು ಕಾಯುತ್ತಿದೆ. ಮುಖ್ಯಮಂತ್ರಿಗಳೇನೋ ಖಾತೆ ಹಂಚಿಕೆಗೆ ಮೊದಲೇ, ʻನಿಮ್ಮ ನಿಮ್ಮ ಜಿಲ್ಲೆಗಳಿಗೆ ತೆರಳಿ, ಬರ ಸಮಸ್ಯೆಯ ಅಧ್ಯಯನ ನಡೆಸಿ ನಿಮ್ಮ ಜಿಲ್ಲೆಗಳ ವರದಿ ನೀಡಿʼ ಎಂದಿದ್ದಾರೆ. ಸಂಪುಟ ಅಥವಾ ಇನ್ಯಾವುದೇ ವಿವಾದಗಳೇನೇ ಇದ್ದರೂ ಕೆಲಸ ಚಾಲೂ ಆಗಬೇಕಾಗಿದೆ.

ʻಕುಛ್ ಕುಛ್ ಜೀತ್ನೇಕೆ ಲಿಯೇ, ಕುಛ್ ಕುಛ್ ಹಾರ್ನಾ ಪಡ್ತಾ ಹೈʼ ಎನ್ನುವ ʻಬಾಜಿಗರ್ʼ ಚಿತ್ರದ ಡೈಲಾಗ್‌ನಂತಿದೆ ಈಗ ರಾಜ್ಯದ ಸ್ಥಿತಿ. ಸಂಪುಟ, ಭಿನ್ನಮತ ಅಥವಾ ಮೇಲಾಟಗಳೇನಾದರೂ ಆಗಲಿರಲಿ, ಇನ್ನಾದರೂ ನಾಡಿನ ಸಂಕಷ್ಟಗಳತ್ತ ಆಳುವ ದೊರೆಯ ಗಮನ ಹರಿಯಲಿ ಎನ್ನುವ ಭಾವತುಂಬಿದ ಕಣ್ಗಳ ನೋಟ ಎಲ್ಲರದ್ದಾಗಿದೆ!