ಕೊಪ್ಪಳ: ಬರಪೀಡಿತ ಜಿಲ್ಲೆ ಘೋಷಿಸಲು ಹಾಗೂ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಕಾರ್ಯಕರ್ತರು, ರೈತರು ನಗರದ ಜಿಲ್ಲಾಡಳಿತ ಭವನದ ಮುಂದೆ ಸೋಮವಾರ ಅಹೋರಾತ್ರಿ ಧರಣಿ ನಡೆಸಿದರು.
ಕೊಪ್ಪಳವನ್ನು ಬರಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಬೇಕು. ಪ್ರತಿ ಎಕರೆಗೆ 50ಸಾವಿರ ರೂ. ಬರ ಪರಿಹಾರ ಘೋಷಣೆ ಮಾಡಬೇಕು. ವಿಂಡ್ ಪವರ್, ಸೋಲಾರ್ ಸೇರಿ ವಿವಿಧ ಕಂಪನಿಗಳು ರೈತರ ಮೇಲೆ ಮಾಡುತ್ತಿರುವ ದೌರ್ಜನ್ಯ ತಡೆಯಬೇಕು. ತುಂಗಭದ್ರಾ ಜಲಾಶಯದಲ್ಲಿ 80 ಟಿಎಂಸಿ ನೀರು ಸಂಗ್ರಹ ಆದ ಮೇಲೆ ನೀರು ಬಿಡುತ್ತೇವೆಂಬ ಹೇಳಿಕೆ ಹಿಂಪಡೆಯಬೇಕು. ತಕ್ಷಣ ವಿಜಯನಗರ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಬೇಕೆಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ, ಸಿಎಂ ಡಿ.ಕೆ. ಶಿವಕುಮಾರ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾರತಮಾತೆ, ಡಾ. ಶ್ಯಾಮಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಗಳನ್ನು ಇರಿಸಿ, ಪುಷ್ಪನಮನ ಸಲ್ಲಿಸಲಾಯಿತು. ರೈತಗೀತೆಗಳನ್ನು ಮತ್ತು ದೇಶಭಕ್ತಿ ಗೀತೆಗಳನ್ನು ಹಾಡಿದರು.
ಮಳೆಗೂ ಜಗ್ಗದೇ ಧರಣಿ: ಪ್ರತಿಭಟನೆ ಆರಂಭಿಸಿ ಎಲ್ಲ ಬಿಜೆಪಿ ನಾಯಕರು ಭಾಷಣ ಮಾಡಿ, ಮುಗಿಸುತ್ತಲೇ ಮಧ್ಯಾಹ್ನ ಮಳೆ ಜೋರಾಗಿ ಸುರಿದಿದ್ದು, ಯಾವುದಕ್ಕೂ ಜಗ್ಗದೇ ಬಿಜೆಪಿ ಮುಖಂಡರು ಮಳೆಯಲ್ಲಿಯೇ ಘೋಷಣೆಗಳನ್ನು ಕೂಗುತ್ತಾ, ಧರಣಿ ನಡೆಸಿದರು. ಅಲ್ಲದೇ ಸಂಜೆ ಕೂಡಾ ಮಳೆ ಜಿನುಗುತ್ತಲೇ ಇತ್ತು. ಇದರಿಂದಾಗಿ ಚಳಿಯು ಹೆಚ್ಚಾಗಿತ್ತು. ಇದರಲ್ಲಿಯೇ ಬಿಜೆಪಿ ಮುಖಂಡರು ಧರಣಿ ಕುಳಿತು, ಗಟ್ಟಿತನ ಪ್ರದರ್ಶಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ, ವಿಧಾನಸಭೆಯ ವಿರೋಧಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೇಸಗೂರು, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಇತರರಿದ್ದರು.






















