SK Home Ad
Home ನಮ್ಮ ಜಿಲ್ಲೆ ಕೊಪ್ಪಳ 4ನೇ ಬಾರಿ ಸಚಿವರಾಗಿ ಶಿವರಾಜ್ ತಂಗಡಗಿ ಇಂದು ಪ್ರಮಾಣ ವಚನ

4ನೇ ಬಾರಿ ಸಚಿವರಾಗಿ ಶಿವರಾಜ್ ತಂಗಡಗಿ ಇಂದು ಪ್ರಮಾಣ ವಚನ

0
97

ಬೆಂಗಳೂರು: ಕನಕಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿ ಅವರು ಸೋಮವಾರ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸತತ ನಾಲ್ಕನೇ ಬಾರಿ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿರುವ ತಂಗಡಗಿ, ಈ ಬಾರಿ ಪೂರ್ಣಾವಧಿಯ ಸಚಿವರಾಗಿ ಕಾರ್ಯನಿರ್ವಹಿಸುವ ಅವಕಾಶ ಪಡೆಯುತ್ತಿರುವುದು ವಿಶೇಷವಾಗಿದೆ.

1971ರ ಜೂನ್ 10ರಂದು ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಸಂಗಪ್ಪ ಮತ್ತು ಹುಲಿಗೆಮ್ಮ ದಂಪತಿಯ ಪುತ್ರನಾಗಿ ಜನಿಸಿದ ಶಿವರಾಜ್ ತಂಗಡಗಿ, ಇಳಕಲ್‌ನ ಎಸ್.ವಿ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಎ ಪದವಿ ಪಡೆದಿದ್ದಾರೆ. ಉದ್ಯಮಿಯಾಗಿದ್ದ ಅವರು ನಂತರ ರಾಜಕೀಯ ಪ್ರವೇಶಿಸಿ ಜನಸೇವೆಯಲ್ಲಿ ಸಕ್ರಿಯರಾದರು.

ಇಳಕಲ್‌ನಿಂದ ತಮ್ಮ ರಾಜಕೀಯ ಪಯಣ ಆರಂಭಿಸಿದ ತಂಗಡಗಿ, ಬಳಿಕ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ರಾಜಕೀಯ ನೆಲೆ ನಿರ್ಮಿಸಿಕೊಂಡರು. ಕನಕಗಿರಿ ಕ್ಷೇತ್ರದಿಂದ 2013, 2018 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ ರಾಜಕೀಯದಲ್ಲಿ ಪ್ರಮುಖ ದಲಿತ ಮುಖಂಡರಾಗಿ ಗುರುತಿಸಿಕೊಂಡಿರುವ ತಂಗಡಗಿ, ಕಳೆದ ಮೂರು ಸರ್ಕಾರಗಳಲ್ಲಿಯೂ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ನಾಲ್ಕನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಿವರಾಜ್ ತಂಗಡಗಿ, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ ಕನಕಗಿರಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ನಿರೀಕ್ಷೆ ಕ್ಷೇತ್ರದ ಜನರಲ್ಲಿ ಮೂಡಿದೆ.

ಸಂಕ್ಷಿಪ್ತ ಪರಿಚಯ
ಹೆಸರು: ಶಿವರಾಜ್ ತಂಗಡಗಿ
ಜನ್ಮ ದಿನಾಂಕ: 10-06-1971
ಹುಟ್ಟೂರು: ಇಳಕಲ್
ತಂದೆ: ಸಂಗಪ್ಪ
ತಾಯಿ: ಹುಲಿಗೆಮ್ಮ
ಶಿಕ್ಷಣ: ಬಿಎ, ಎಸ್.ವಿ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜು, ಇಳಕಲ್
ವೃತ್ತಿ: ಉದ್ಯಮಿ
ಪಕ್ಷ: ಕಾಂಗ್ರೆಸ್
ಕ್ಷೇತ್ರ: ಕನಕಗಿರಿ (ಎಸ್ಸಿ ಮೀಸಲು)
ಶಾಸಕರಾಗಿ ಆಯ್ಕೆ: 2013, 2018 ಮತ್ತು 2023
ಸಚಿವರಾಗಿ: ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕಾರ.