ಹೊಸಪೇಟೆ: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ವ್ಯಕ್ತಿಯೊಬ್ಬ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಹರಪನಹಳ್ಳಿಯ ಮೂಲದ ಖಲೀಲ್ (38) ಮೃತ ದುರ್ದೈವಿ. ಮನೆಯಲ್ಲಿ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ವಿಚಾರಣೆಗೆ ಠಾಣೆಗೆ ಕರೆತಂದಿದ್ದಾಗ ಸಾವನ್ನಪ್ಪಿದ್ದಾನೆ.
ಪೊಲೀಸರ ಪ್ರಕಾರ ಫಿಟ್ಸ್ ಬಂದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಹಗರಿಬೊಮ್ಮನಹಳ್ಳಿ ಠಾಣೆಗೆ ವಿಜಯನಗರ ಜಿಲ್ಲಾ ಎಸ್ಪಿ ಎಸ್. ಜಾಹ್ನವಿ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡ ಕಾರ್ಮಿಕ ಖಲೀಲ್ (38) ಸಾವನ್ನಪ್ಪಿದ ಕಾರಣ ಪೊಲೀಸ್ ಠಾಣೆಯ ಬಳಿ ಜನರು ಜಮಾವಣೆಗೊಂಡಿದ್ದರು.
ಹಗರಿಬೊಮ್ಮನಹಳ್ಳಿ ತಾಲೂಕು ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೀಸಲು ಪೊಲೀಸ್ ತುಕಡಿ ನಿಯೋಜಿಸಲಾಗಿದೆ. ಖಲೀಲ್ ನಂದಿಪುರದ ಯುವತಿಯೊಂದಿಗೆ ವಿವಾಹವಾದ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದನು. ಖಲೀಲ್ ನಿತ್ಯ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಶನಿವಾರ ರಾತ್ರಿ ಜಗಳ ವಿಕೋಪಕ್ಕೆ ತಿರುಗಿದಾಗ ಪತ್ನಿಯೇ ಗಂಡನ ವಿರುದ್ಧ ದೂರು ನೀಡಿದ್ದಳು. ಸ್ಥಳಕ್ಕೆ ಬಳ್ಳಾರಿ ವಲಯದ ಐಜಿಪಿ ಡಾ. ಹರ್ಷ ಭೇಟಿ ನೀಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.






















